More

    ದುಂಡಳ್ಳಿ ಗ್ರಾಮಭೆಯಲ್ಲಿ ಸದ್ದುಗದ್ದಲ

    ಶನಿವಾರಸಂತೆ: ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಸದ್ದುಗದ್ದಲದಲ್ಲಿಯೇ ನಡೆಯಿತು.

    ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯ ಆರಂಭದಲ್ಲಿ ಗ್ರಾಮದ ನಿವಾಸಿ ಮುತ್ತೇಗೌಡ, 2022ನೇ ಸಾಲಿನಲ್ಲಿ ಜಮಾಬಂದಿ ಸಭೆ ನಡೆಸಿಲ್ಲ ಮತ್ತು ಜಮಾ ಖರ್ಚಿನ ವಿವರವನ್ನು ಗ್ರಾಮಸ್ಥರಿಗೆ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ಗದ್ದಲಕ್ಕೆ ಕಾರಣವಾಯಿತು.

    ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಯುವಕರು ಹಲವಾರು ವರ್ಷಗಳಿಂದ ಆಟವಾಡುತ್ತಿದ್ದ ಮೈದಾನವನ್ನು ಸ್ಮಶಾನ ಜಾಗವನ್ನಾಗಿ ಮಾಡುವ ಯತ್ನ ನಡೆಯುತ್ತಿದ್ದು, ಗ್ರಾ.ಪಂ.ನವರು ಈ ಜಾಗವನ್ನು ಸ್ಮಶಾನ ಜಗವನ್ನಾಗಿ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಗ್ರಾಮದ ರಕ್ಷಿತ್ ಮನವಿ ಮಾಡಿದರು.

    ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗ್ರಾಮಸ್ಥ ಪ್ರಸಾದ್, ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಖಾಸಗಿಯವರು ಗ್ರಾ.ಪಂ.ಮೂಲಕ ಪರವಾನಗಿ ಪಡೆದು ಮಾಂಸ ಮಾರಾಟ ಮಳಿಗೆ ಹಾಕಿಕೊಂಡಿದ್ದಾರೆ. ಇದನ್ನು ಅರಣ್ಯ ಇಲಾಖೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಸ್ವಲ್ಪ ಗೊಂದಲವುಂಟಾಯಿತು.

    ಗ್ರಾ.ಪಂ.ಸದಸ್ಯ ದೇವರಾಜ್ ಮಾತನಾಡಿ, ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿ ಗ್ರಾ.ಪಂ. ಅನ್ನು ಅಭಿವೃದ್ಧಿಪಡಿಸಲು ಪಿಡಿಒ ಹಿಂದೇಟು ಹಾಕುತ್ತಿದ್ದು, ಇವರಿಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಪಿಡಿಒ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಕಾಡಾನೆ ಹಾವಳಿ ಬಗ್ಗೆ ಚರ್ಚೆ ನಡೆಯಿತು. ದುಂಡಳ್ಳಿ ಗ್ರಾ.ಪಂ.ನಿಂದ ಹೆಮ್ಮನೆ ಗ್ರಾಮದಲ್ಲಿರುವ ಅನುದಾನಿತ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಅಭಿವೃದ್ಧಿಗೆ 1 ಲಕ್ಷ ರೂ. ಅನುದಾನ ನೀಡಿರುವುದಕ್ಕೆ ಶಾಲೆಯ ಶಿಕ್ಷಕ ಜಯಕುಮಾರ್ ಗ್ರಾ.ಪಂ. ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

    ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ತಾ.ಪಂ. ಅಧಿಕಾರಿ ಕಾಳನಾಯಕ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ನಿತಿನ್, ಪಿಡಿಒ ರಾಜೇಂದ್ರ, ಗ್ರಾ.ಪಂ. ಸದಸ್ಯರು, ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts