More

    ದಾವಣಗೆರೆ ತಹಸೀಲ್ದಾರ್ ದುರ್ವರ್ತನೆಗೆ ಸಿಬ್ಬಂದಿ ಪ್ರತಿಭಟನೆ

    ದಾವಣಗೆರೆ: ಅಧಿಕಾರಿ-ಸಿಬ್ಬಂದಿ ಮೇಲೆ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾದ ದಾವಣಗೆರೆ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಕೆಲಸದ ವಾತಾವರಣ ಕಲ್ಪಿಸಬೇಕೆಂದು ಆಗ್ರಹಿಸಿ ತಾಲೂಕು ಕಚೇರಿಯ ಭೂ ದಾಖಲೆಗಳ ಇಲಾಖೆ ಅಧಿಕಾರಿ-ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
    ಮೇ 18ರಂದು ಮೋಜಿಣಿ ತಂತ್ರಾಂಶದಲ್ಲಿರುವ ಆರ್‌ಆರ್‌ಟಿ ಪ್ರಕರಣಗಳ ಕುರಿತಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಎಲ್ಲ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು, ಸರ್ವೇ ಇಲಾಖೆಗೆ ಸಂಬಂಧಿತ ಅಧಿಕಾರಿಗಳ ಸಭೆಯಲ್ಲಿ ಹಾಜರಿದ್ದ ತಹಸೀಲ್ದಾರ್ ಬಿ.ಎನ್. ಅಶ್ವತ್ಥ ಅವರು ಅಧಿಕಾರಿ-ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
    ಆರ್‌ಆರ್‌ಟಿ ಪ್ರಕರಣ ಬಾಕಿ ಇದ್ದು, ಇನ್ನು ಮಂದೆ ಅಟಲ್ಜಿ ಜನಸ್ನೇಹಿ ಕೇಂದ್ರದಲ್ಲಿ ಕಡ್ಡಾಯವಾಗಿ ಆಕಾರ್‌ಬಂದ್ ಸಮೇತ ಮೋಜಿಣಿ ಅರ್ಜಿ ಸಲ್ಲಿಸಬೇಕು. ಆಕಾರ್ ಬಂದ್ ದೃಢೀಕರಿಸಿ, ಕಾಲಂ ನಂ.3 ಹಾಗೂ ಕಾಲಂ ನಂ.9 ಸರಿ ಇದ್ದಲ್ಲಿ ಅರ್ಜಿ ನೀಡಬೇಕೆಂದು ತಹಸೀಲ್ದಾರ್ ರೈತರಿಗೆ ತಿಳಿಸಬೇಕೆಂದು ತಹಸೀಲ್ದಾರ್ ಸೂಚಿಸಿದರು.
    ಆಕಾರ್ ಬಂದ್ ಮತ್ತು ಆರ್‌ಟಿಸಿಯನ್ನು ಪರಿಶೀಲಿಸಲು ಇಬ್ಬರು ಹೆಚ್ಚುವರಿ ಭೂ ಮಾಪಕರನ್ನು ಕೆಲಸಕ್ಕೆ ನಿಯೋಜಿಸಬೇಕು. ರಾತ್ರಿ 8ರವರೆಗೆ ನನ್ನ ಕಚೇರಿಯಲ್ಲೇ ಕೆಲಸ ಮಾಡಲಿ. ನಾನು ಹೇಳಿದಂತೆ ಕೇಳಬೇಕು. ಇಲ್ಲವಾದಲ್ಲಿ ಹೊರ ಹೋಗುವಂತೆಯೂ, ಇಲ್ಲವಾದರೆ ಬೇರೆಡೆ ಕಚೇರಿ ನಿರ್ಮಿಸಿಕೊಳ್ಳಲು ತಿಳಿಸಿ. ಇಲ್ಲವಾದಲ್ಲಿ ನಾನೇ ಬಂದು ಹೊರದಬ್ಬುತ್ತೇನೆ ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದು ಆಕ್ಷೇಪಿಸಿದರು.
    ಭೂ ದಾಖಲೆಗಳ ಇಲಾಖೆಯ ಮೇಲಾಕಾರಿಗಳ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ.
    ದಾವಣಗೆರೆ ತಾಲೂಕಿನಲ್ಲಿ ನನ್ನ ಆದೇಶದಂತೆಯೇ ಕೆಲಸವಾಗಬೇಕು. ಭೂ ದಾಖಲೆಗಳ ಆಯುಕ್ತರ ನಿರ್ದೇಶನದಂತೆ ಅಲ್ಲ ಎಂಬುದಾಗಿ ಗಟ್ಟಿ ಧ್ವನಿಯಲ್ಲಿ ಭೂ ದಾಖಲೆಗಳ ಇಲಾಖೆಯ ಮೇಲಧಿಕಾರಿಗೂ ಸಭೆಯಿಂದ ಹೊರನಡೆಯುವಂತೆ ಹೇಳಿದ್ದಲ್ಲದೆ ಕುರ್ಚಿಯಿಂದ ಹೊಡೆಯಲು ಮುಂದಾಗಿದ್ದರು.
    ಸಭೆಯಿಂದ ಹೊರಹೋಗದಿದ್ದಲ್ಲಿ ಎಫ್‌ಐಆರ್ ದಾಖಲಿಸಿ, ಅಮಾನತು ಮಾಡಿಸುವುದಾಗಿ ಹೇಳಿದ್ದಲ್ಲದೆ ಖುದ್ದು ಹೊರಗೆ ಎಳೆದು ಹಾಕುವುದಾಗಿಯೂ ಎಚ್ಚರಿಸಿದರು ಎಂದು ಪ್ರತಿಭಟನಾಕಾರರು ತಿಳಿಸಿದರು. ಪ್ರತಿ ಸಭೆಯಲ್ಲಿ ಭೂ ಮಾಪನ ಇಲಾಖೆ ಅಧಿಕಾರಿ, ನೌಕರರ ಬಗ್ಗೆ ಕೀಳು ಮಟ್ಟದ ಅವಾಚ್ಯ ಶಬ್ಧ ಬಳಸಲಾಗುತ್ತಿದ್ದು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
    ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಕಚೇರಿಗೆ ತಹಸೀಲ್ದಾರ್ ಅವರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡದ್ದಲ್ಲದೆ, ಸಮಾಧಾನದಿಂದ ಕೆಲಸ ಮಾಡಿಕೊಂಡು ಹೋಗುವಂತೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
    ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಿ.ಎನ್. ನಾಗಭೂಷಣ್, ಮೇಲ್ವಿಚಾರಕರಾದ ಪರಮೇಶ್ವರಪ್ಪ, ದಾಸರ್, ದಾಖಲೆ ಸಂಗ್ರಹ ಕೊಠಡಿಯ ಸರ್ವೇಯರ್ ತಮ್ಮಯ್ಯ, ವಿನುತಾ ಹಾಗೂ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
    ————————

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts