More

    ದಾವಣಗೆರೆ ಈಜುಕೊಳಕ್ಕೆ ತೀರದ ಸಾವಿನ ದಾಹ! -ಜೀವ ತೆಗೆಯುವ 18 ಅಡಿ ಆಳದ ಇಳಿಜಾರು

    ಡಿ.ಎಂ.ಮಹೇಶ್, ದಾವಣಗೆರೆ: ದೇವರಾಜ ಅರಸು ಬಡಾವಣೆಯ ಅಂತಾರಾಷ್ಟ್ರೀಯ ಈಜುಕೊಳ ಮತ್ತೆ ಸುದ್ದಿಯಲ್ಲಿದೆ. ಇಲ್ಲಿನ 18 ಅಡಿ ಆಳದ ಇಳಿಜಾರಿನಿಂದಾಗಿ ಕೊಳದ ಸಾವಿನ ದಾಹ ನಿಲ್ಲುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಅವಘಡಗಳ ನಡುವೆಯೂ ಸಾವಿನ ಎಣಿಕೆ ಶುರು ಮಾಡಿದಂತಿದೆ!
    10 ವರ್ಷದ ಹಿಂದೆ ಬಾಲಕನೊಬ್ಬ ಮೃತಪಟ್ಟಿದ್ದ ಕಾರಣಕ್ಕೆ ಕೆಲ ವರ್ಷಗಳ ಕಾಲ ಈಜಾಟವೇ ಸ್ತಬ್ದಗೊಂಡಿತ್ತು. ನವೀಕರಣವಾದ ನೆವದಲ್ಲಿ 54 ದಿನದ ಹಿಂದಷ್ಟೇ ಶುರುವಾಗಿದ್ದ ಈ ಕೊಳ ಮತ್ತೆ ಅಪಖ್ಯಾತಿಗೆ ಹೆಸರಾಗಿದೆ. ಶುಕ್ರವಾರ ಈಜಲೆಂದು ಬಂದಿದ್ದ ಅಪ್ರಾಪ್ತ ಬಾಲಕರಿಬ್ಬರು ಅಸು ನೀಗಿದ್ದು ಸೂತಕ ಆವರಿಸಿದೆ.
    ಯುವಜನ ಸೇವಾ- ಕ್ರೀಡಾ ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್, ಅಂತಾರಾಷ್ಟ್ರೀಯ ಮಟ್ಟದ ಈಜುಪಟುಗಳ ತಯಾರಿ ದೃಷ್ಟಿಯಿಂದ 1.61 ಕೋಟಿ ರೂ. ವೆಚ್ಚದಲ್ಲಿ ಈ ಈಜುಕೊಳ ನಿರ್ಮಿಸಿದ್ದರು. ಹದಿನೈದರ ಪ್ರಾಯದ ಈ ಕೊಳ, ಆದಾಯ-ನಿರ್ವಹಣೆ ಮತ್ತು ಖ್ಯಾತಿ ವಿಚಾರದಲ್ಲಿ ಈಜಿದ್ದೇ ಕಡಿಮೆ; ತೆವಳಿದ್ದೇ ಹೆಚ್ಚು.
    50 ಮೀ. ಉದ್ದ- 21 ಮೀ. ಅಗಲ ವಿಸ್ತೀರ್ಣದ ಈ ಕೊಳದಲ್ಲಿ 3 ಅಡಿಯಿಂದ 18 ಅಡಿ ಆಳದ ಸ್ಲೋಪ್ ಆರಂಭ ಕಾಲದಿಂದಲೂ ಇದೆ. ಈ ಆಳ ಡೈವ್ ಮಾಡಲಿಕ್ಕೆ ಮಾತ್ರ ಅನುಕೂಲ. ಆದರೆ ಇಲ್ಲಿ ಡೈವಿಂಗ್ ಮಾಡುವುದನ್ನೂ ನಿಷೇಧಿಸಲಾಗಿದೆ.
    ಇಳಿಜಾರು ಪ್ರಮಾಣವನ್ನು ಆರರಿಂದ ಎಂಟಡಿಗೆ ಇಳಿಸುವಂತೆ ಇದುವರೆಗಿನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆದರೂ ‘ಅಂತಾರಾಷ್ಟ್ರೀಯ ಮಾನದಂಡ’ದ ಕಾರಣಕ್ಕೆ ಸಂರಚನೆ ಬದಲಾಗಲೇ ಇಲ್ಲ!
    ಬಾಗಲಕೋಟೆಯ ಅಂತಾರಾಷ್ಟ್ರೀಯ ಈಜುಕೊಳ ಕೂಡ ಕೆಲ ಕಾರಣಕ್ಕೆ ಸ್ಥಗಿತವಾಯಿತು. ಬೆಂಗಳೂರು ಬಿಟ್ಟರೆ ದಾವಣಗೆರೆಯಲ್ಲಿ ಮಾತ್ರ ಅಂತಾರಾಷ್ಟ್ರೀಯ ಈಜುಕೊಳವಿದೆ. ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ 2.47 ಕೋಟಿ ರೂ. ವೆಚ್ಚದಲ್ಲಿ ಇತ್ತೀಚೆಗೆ ಈಜುಕೊಳ ನವೀಕರಿಸಿದ್ದಾಗಿ ಹೇಳಿ ಸಂಸದರ ಮೂಲಕ ಮಾ.26ರಂದು ಮರುಚಾಲನೆ ಕೊಡಿಸಿತ್ತು.
    ಆದರೆ, ಕೊಳದಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಕಾಂಪೌಂಡ್ ಎತ್ತರಿಸುವ ಪ್ರಸ್ತಾವ ಈಡೇರಿಲ್ಲ. ಹೀಗಾಗಿ ಚಿಕ್ಕ ಮಕ್ಕಳೂ ಕೂಡ ಕಾಂಪೌಂಡ್ ಗೋಡೆ ಹತ್ತಿ ಒಳನುಸುಳುವ ಕೆಲಸ ನಡೆಯುತ್ತಿದೆ. ಕೊಳದಲ್ಲಿ 35 ಲಕ್ಷ ಲೀ.ನಷ್ಟು ನೀರಿದ್ದು ಅದನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಮಾಸಿಕವಾಗಿ ತಗಲುವ ವಿದ್ಯುತ್ ವೆಚ್ಚವೇ 1 ಲಕ್ಷ ರೂ.! ಕಟ್ಟಡದ ಮೇಲೆ 1500 ವ್ಯಾಟ್ ಸಾಮರ್ಥ್ಯದ ಸೋಲಾರ್ ಚಾವಣಿ ಹಾಕಿದ್ದರೂ ಸಂಪರ್ಕ ಕಲ್ಪಿಸದ್ದರಿಂದ ವಿದ್ಯುಶ್ಚಕ್ತಿ ವೆಚ್ಚದ ಹೊರೆ ತಪ್ಪಿಲ್ಲ.
    ನೀರು ಶುದ್ಧೀಕರಿಸುವ 5 ಮೋಟಾರ್‌ಗಳಿದ್ದು, ಕೆಲವು ಸೋರಿಕೆ ಆಗುತ್ತಿವೆ. ಓವರ್‌ಫ್ಲೋ ಆದಲ್ಲಿ ಆಗುವ ಅನಾಹುತವನ್ನು ಊಹಿಸಲಿಕ್ಕಾಗದು. ಇನ್ನು ಇಲಾಖೆಯಿಂದ ಕೋಚ್ ನೇಮಕವಾಗಿಲ್ಲ. ಟೆಂಡರ್‌ದಾರರೇ ತಮ್ಮ ಪರವಾದ ಒಬ್ಬ ತರಬೇತುದಾರರನ್ನು ಇಲ್ಲಿ ಬಿಟ್ಟಿದ್ದಾರೆ. ಹೊರಗುತ್ತಿಗೆ ಆಧಾರದಡಿ ಲೈಫ್ ಗಾರ್ಡ್, ವಾಚ್‌ಮನ್, ಸ್ವಚ್ಛತಾ ಕೆಲಸಗಾರರು ಒಳಗೊಂಡು 16 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
    ರಕ್ಷಣಾತ್ಮಕ ಸಹಿತ ಈಜು ಕಲಿಕೆಗೆ 30 ಲೈಫ್ ಜಾಕೆಟ್, 30 ರಬ್ಬರ್ ಟ್ಯೂಬ್, ಅನಾಹುತವಾದ ಸಂದರ್ಭದಲ್ಲಿ ಆಕ್ಸಿಜನ್ ಕಿಟ್‌ಗಳ ವ್ಯವಸ್ಥೆ ಇಲ್ಲಿದೆ. ಸಿಸಿ ಕ್ಯಾಮರಾಗಳ ಕಣ್ಗಾವಲಿದೆ.
    10 ವರ್ಷ ಮೇಲ್ಪಟ್ಟವರಿಗೆ 60 ರೂ. ಶುಲ್ಕವಿದೆ. ಚಿಣ್ಣರಿಗಾಗಿ ಬೇಬಿ ಫೂಲ್ ಇದ್ದು ತಲಾ 40 ರೂ. ವಿಧಿಸಲಾಗುತ್ತಿದೆ. ಟೂಬ್, ಶಾರ್ಟ್‌ಗಳಿಗೆ ತಲಾ 30 ರೂ.ಗಳ ಪ್ರತ್ಯೇಕ ಶುಲ್ಕ ಪಡೆಯಲಾಗುತ್ತದೆ ಎನ್ನುತ್ತಾರೆ ಈಜುಪಟುಗಳು.
    ನಗರದ ಗಾಂಜಿವೀರಪ್ಪ ಕೊಳ ದುರಸ್ತಿ ಕಾರಣಕ್ಕೆ ಕೆಲ ತಿಂಗಳಿಂದ ಬಂದ್ ಆಗಿದೆ. ಹರಿಹರಕ್ಕಿಂತಲೂ ದಾವಣಗೆರೆ ಈಜುಕೊಳ ಮುಕ್ತವಾಗಿದ್ದು ಬಿಸಿಲಿನಲ್ಲೇ ಈಜಾಡುವುದು ಅನುಕೂಲ ಎಂಬ ಕಾರಣಕ್ಕೆ ಸಮೀಪದ ಗ್ರಾಮೀಣ ಜನರೂ ಇಲ್ಲಿಗೆ ಬರುತ್ತಾರೆ.
    ದಿನಕ್ಕೆ ಕನಿಷ್ಠ 200 ಈಜುಪಟುಗಳು ಬರುತ್ತಾರೆ. ಬೇಸಿಗೆಯ 3 ತಿಂಗಳಲ್ಲಿ ಉತ್ತಮ ಕಲೆಕ್ಷನ್ ಇರಲಿದ್ದು, ಉಳಿದ ಒಂಬತ್ತು ಮಾಸಗಳಲ್ಲಿ ಜನರ ಬರುವಿಕೆ ಕಡಿಮೆ. ಇದರ ನಡುವೆಯೂ ತಗುಲುವ ಮಾಸಿಕ 4 ಲಕ್ಷ ರೂ. ವೆಚ್ಚ ಸರಿದೂಗಿಸಬೇಕಿದೆ ಏಜೆನ್ಸಿಯವರು.
    ಪ್ರವೇಶದ್ವಾರದಲ್ಲೇ ಗಡುಸಾದ ನಾಯಿಗಳು ಎಂಥವರನ್ನೂ ಭಯ ಹುಟ್ಟಿಸದೇ ಇರವು! ಈಜುಪಟುಗಳ ಹೆಸರಲ್ಲಿ ಕೆಲವರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ. ಅವರು ಮಾತು ಕೇಳುವುದಿಲ್ಲ. ಅದಕ್ಕೆಂದೇ ನಾಯಿಗಳನ್ನು ಸಾಕಿದ್ದೇವೆ ಎಂದು ಕೆಲ ಸಿಬ್ಬಂದಿ ಸಮರ್ಥಿಸಿಕೊಳ್ಳುತ್ತಾರೆ. ಸದ್ಯಕ್ಕೆ ಕೊಳಕ್ಕೆ ರಜೆ ನೀಡಲಾಗಿದೆ!

    ಬಾಲಕರ ಸಾವಿನ ಪ್ರಕರಣ ಸಂಬಂಧ ಗುತ್ತಿಗೆದಾರರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ. ಈಜುಕೊಳದ ಸ್ಲೋಪ್ ಇಳಿಸುವ ಅಗತ್ಯವಿದೆ. ಕಾಂಪೌಂಡ್ ಎತ್ತರಿಸಬೇಕಿದೆ. ಈ ಸಂಬಂಧ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು.
    ಸುಚೇತನಾ ನೆಲವಿಗಿ
    ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ.

    ಈಜುಕೊಳಕ್ಕೆ ಬರುವ ಪಟುಗಳನ್ನು ಪರಿವೀಕ್ಷಣೆ ಮಾಡುವವರನ್ನು ನೇಮಕ ಮಾಡಿಕೊಳ್ಳದ್ದರಿಂದ ಪದೇ ಪದೇ ಸಾವು ಸಂಭವಿಸುತ್ತಿವೆ. ನಿರ್ವಹಣೆ ಮಾಡುವ ಏಜೆನ್ಸಿಯವರಲ್ಲಿ ಹಣದಾಸೆಗಿಂತಲೂ ಈಜುಪಟುಗಳ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇಕು.
    ಸುರೇಶ್ ವಿನೋಬನಗರ
    ನಾಗರಿಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts