More

    ದಾವಣಗೆರೆಯಲ್ಲಿ ಶಾಸ್ತ್ರೀಯ ಸಂಗೀತ ಘರಾನಾ-ಚನ್ನವೀರಸ್ವಾಮಿ ಹಿರೇಮಠ  

    ದಾವಣಗೆರೆ: ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಶೀಘ್ರದಲ್ಲೇ ಶಾಸ್ತ್ರೀಯ ಸಂಗೀತದ ದೊಡ್ಡ ಕಾರ್ಯಕ್ರಮ ಆಯೋಜನೆಗೆ ಸಂಕಲ್ಪ ಮಾಡಲಾಗಿದೆ ಎಂದು ಗದಗದ ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.
    ಶಿವಯೋಗ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಘಟಕ, ಮಹಿಳಾ ಘಟಕ, ಗುರು ಸೇವಾ ದೀಕ್ಷಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಗಾನಯೋಗಿ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪುಟ್ಟರಾಜ ಗವಾಯಿ, ಪಂಚಾಕ್ಷರಿ ಗವಾಯಿಗಳ ಗಾಯನ ಪರಂಪರೆಯ ಕೊಡುಗೆ ಪರಿಗಣಿಸಿ ದೊಡ್ಡ ಮಟ್ಟದಲ್ಲಿ ಘರಾಣಾ ಸಂಗೀತದ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ. ಅದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.
    ದಾವಣಗೆರೆಯಲ್ಲಿ ದೊಡ್ಡ ರಾಜಕೀಯ ಸಮಾವೇಶಗಳು ನಡೆದಿವೆ. ಇಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವೂ ಆಗಬೇಕಿದೆ. ಎಲ್ಲ ಜಿಲ್ಲೆಗಳಲ್ಲಿ ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಘಟಕಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಪುಟ್ಟರಾಜ ಗವಾಯಿಗಳ ಸಂಗೀತ ಹಾಗೂ ಅವರ ಕುರಿತ ಪುಟ್ಟರಾಜು ವಚನ ಪ್ರಭಾ ಎಂಬ ಪುಸ್ತಕ ಹೊರತಂದಿದ್ದು, ಅದನ್ನು ಎಲ್ಲರ ಮನೆಗಳಿಗೆ ತಲುಪಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
    ದಾವಣಗೆರೆ ದಾನದ ಕೆರೆಯಾಗಿದೆ. ಇಲ್ಲಿನ ದಾನಿಗಳು ಪುಟ್ಟರಾಜ ಗವಾಯಿಗಳ ಕುರಿತ ಎಲ್ಲ ಕಾರ್ಯಕ್ರಮಕ್ಕೆ ನೆರವು ಕಲ್ಪಿಸಿದ್ದಾರೆ. ಗದಗದ ನಂತರ 2ನೇ ವೀರೇಶ್ವರ ಪುಣ್ಯಾಶ್ರಮ ಇಲ್ಲಿದೆ. ಅದರ ಶಿಲಾ ಸೌಂದರ್ಯ ಗಮನ ಸೆಳೆಯುತ್ತದೆ. ಅದಕ್ಕೆ ಇಲ್ಲಿನ ಭಕ್ತರ ಸಹಕಾರ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ ಪಂಡಿತ ಪುಟ್ಟರಾಜ ಗವಾಯಿಗಳನ್ನು ನೆನೆಯುವುದೆಂದರೆ ಸಂಗೀತ ಲೋಕವನ್ನೇ ಸ್ಮರಿಸಿದಂತೆ ಆಗಲಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮತ್ತೆ ಅವಲೋಕಿಸುವ ಜತೆಗೆ ಅಂಧರ ಸಮೂಹಕ್ಕೆ ಆತ್ಮಸ್ಥೈರ್ಯ ತುಂಬಿದಂತೆ ಆಗಲಿದೆ. ಎಲ್ಲ ಜಿಲ್ಲೆಗಳಲ್ಲೂ ಸಮಿತಿಯ ಘಟಕ ರಚನೆಯಾಗಲಿ ಎಂದು ಆಶಿಸಿದರು.
    ವರ್ತಕ ಅಣಬೇರು ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಥಣಿ ವೀರಣ್ಣ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಸಂಗೀತ ಶಿಕ್ಷಕ ಶಿವಬಸಯ್ಯ ಚರಂತಿಮಠ, ಆನಂದ್ ಆರ್. ಪಾಟೀಲ್, ಸಮಿತಿ ಜಿಲ್ಲಾಧ್ಯಕ್ಷ ವಿನಾಯಕ ಪಿ.ಬಿ., ಮಹಿಳಾ ಘಟಕದ ಸೌಮ್ಯ ಸತೀಶ, ಇದ್ದರು. ಕಲಾವಿದೆ ಸುಪ್ರೀತಿ ಭರತನಾಟ್ಯ ಪ್ರದರ್ಶಿಸಿದರು. ಪುಟ್ಟರಾಜು ವಚನ ಪ್ರಭಾ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts