More

    ದಾಖಲಾತಿ ಆಧಾರದಡಿ ಶಾಲೆ-ಕಾಲೇಜು ಮುಚ್ಚದಿರಿ- ಸರ್ಕಾರಕ್ಕೆ ಚಂದ್ರಕಲಾ ಆಗ್ರಹ, ಎಐಡಿಎಸ್ಒ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನ

    ದಾವಣಗೆರೆ: ಕಡಿಮೆ ದಾಖಲಾತಿ ಆಧಾರದಡಿ ಶಾಲಾ-ಕಾಲೇಜು ಮುಚ್ಚುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಎಐಡಿಎಸ್‌ಒ ರಾಜ್ಯ ಸಮಿತಿ ಉಪಾಧ್ಯಕ್ಷೆ ಚಂದ್ರಕಲಾ ಆಗ್ರಹಿಸಿದರು.
    ನಗರದ ವನಿತಾ ಸಮಾಜದಲ್ಲಿ ಶನಿವಾರ, ಎಐಡಿಎಸ್ಒ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮೂರನೇ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

    ಯಾವುದೇ ಶಿಕ್ಷಣ ನೀತಿ ಜಾರಿಗೂ ಮುನ್ನ ಪಾಲಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದರು.

    ಹಿಂದಿನ ಸರ್ಕಾರ ಕಠಿಣ ನಿಯಮವುಳ್ಳ ಎನ್ಇಪಿ ಹೆಸರಿನ ಹೊಸ ಶಿಕ್ಷಣ ನೀತಿ ಜಾರಿಗೆ ತಂದು, ಮಕ್ಕಳ ಶಿಕ್ಷಣವನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ನಡೆಸಿತ್ತು. ಹೋರಾಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದು ಜಾರಿಯಾಗಿಲ್ಲ ಎಂದರು.
    ಖಾಸಗೀಕರಣದಿಂದಾಗಿ ಇಂದಿನ ಶಿಕ್ಷಣ ವ್ಯವಸ್ಥೆ ಮಾರಾಟದ ಸರಕಾಗಿದ್ದು, ಮಧ್ಯಮ ವರ್ಗ ಹಾಗೂ ಬಡವರಿಗೆ ಶಿಕ್ಷಣ ದುಬಾರಿಯಾಗಿದೆ. ಜನರ. ದುಡ್ಡು ಲೂಟಿ ಮಾಡುವಂತಹ ಶಿಕ್ಷಣ ನೀತಿ ಅನವಶ್ಯಕ ಎಂದು ಹೇಳಿದರು.
    ಶೈಕ್ಷಣಿಕ ಜೀವನದಲ್ಲಿ ಅನುಭವಿಸುತ್ತಿರುವ ತೊಂದರೆಗಳ ವಿರುದ್ಧ ವಿದ್ಯಾರ್ಥಿಗಳು ದಿಟ್ಟತನದ ಹೋರಾಟ ನಡೆಸಬೇಕಿದೆ. ಬಡವರು ಹಾಗೂ ರೈತರ ಮಕ್ಕಳಿಗೆ ಸುಲಭವಾಗಿ ಶಿಕ್ಷಣ ತಲುಪಿಸುವ ಕಾರ್ಯ ಸಂಘಟನೆಯಿಂದ ಆಗಬೇಕಿದೆ ಎಂದರು.
    ರಾಜ್ಯ ಉಪಾಧ್ಯಕ್ಷ ಎಸ್.ಎಚ್. ಹನುಮಂತು ಮಾತನಾಡಿ, ಭಗತ್‌ಸಿಂಗ್, ನೇತಾಜಿ ಮೊದಲಾದ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಸತ್ಯ ಮತ್ತು ನ್ಯಾಯದ ಕನ್ನಡಿಯಾಗಿ ರೈತ, ಕಾರ್ಮಿಕ ಹಾಗೂ ವಿದ್ಯಾರ್ಥಿಗಳ ಪರ ಸಂಘಟನೆ ನಿಲ್ಲಬೇಕು.
    ಬಿ. ಮಹಾಂತೇಶ್ ಕಲಾಪ ನಡೆಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಇದ್ದರು.
    ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಪೂಜಾ ನಂದಿಹಳ್ಳಿ, ಉಪಾಧ್ಯಕ್ಷರಾಗಿ ಬಿ. ಕಾವ್ಯಾ, ಚಿರಂಜೀವಿ ಹಾಗೂ ಧನುಶಾ, ಕಾರ್ಯದರ್ಶಿಯಾಗಿ ಟಿ.ಎಸ್. ಸುಮನ್, ಜಂಟಿ ಕಾರ್ಯದರ್ಶಿಗಳಾಗಿ ಕೌಶಿಕ್, ನಂದೀಶ್ ಮತ್ತು ಪೂಜಾ ಆಯ್ಕೆಯಾದರು.

    ಗೊತ್ತುವಳಿ: ಅರ್ಜಿ ಹಾಕಿದ ಎಲ್ಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಖಾತ್ರಿ ಪಡಿಸಬೇಕು. ಬಾಕಿ ವಿದ್ಯಾರ್ಥಿ ವೇತನ ಮಂಜೂರು ಮಾಡಬೇಕು.ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯ ವೇತನದ ಕಡಿತ ಹಿಂಪಡೆಯಬೇಕು. ಪಿಯುಸಿ, ಪದವಿ, ಮೆಡಿಕಲ್‌ನಂತಹ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳ ಶಿಷ್ಯ ವೇತನ ಹೆಚ್ಚಿಸಬೇಕು. ಎಲ್ಲ ಹಳ್ಳಿಗಳಿಗೂ ಸಮರ್ಪಕ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂಬುದಾಗಿ ವಿದ್ಯಾರ್ಥಿನಿ ಕಾವ್ಯಾ ಸಮ್ಮೇಳನದ ಗೊತ್ತುವಳಿ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts