More

    ದಲಿತ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿ


    ಎಸ್‌ಸಿ, ಎಸ್ಟಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಆಗ್ರಹ


    ಹುಣಸೂರು: ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನೀಡಬೇಕು ಹಾಗೂ ಗ್ರಾಮದ 65 ದಲಿತ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಬೇಕೆಂದು ಹುಣಸೂರು ಉಪವಿಭಾಗ ಮಟ್ಟದ ಎಸ್‌ಸಿ, ಎಸ್ಟಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.

    ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಪವಿಭಾಗ ಮಟ್ಟದ ಎಸ್ಸಿ/ಎಸ್ಟಿ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಮಲ್ಲೇಶ್ವರ ದೇವಸ್ಥಾನವಿದ್ದು, ಈ ದೇವಸ್ಥಾನಕ್ಕೆ ಬಿಳಿಗೆರೆ ಗ್ರಾಮದ ದಲಿತರಿಗೆ ಮುಕ್ತ ಪ್ರವೇಶ ನೀಡಲು ಕಳೆದ 9 ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಹಲವಾರು ಬಾರಿ ಈ ಕುರಿತು ಸಭೆ, ಶಾಂತಿಸಭೆ ಮುಂತಾದ ಸಭೆಗಳು ನಡೆದಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ದಲಿತರು ಸಾಮಾಜಿಕವಾಗಿ, ಧಾರ್ಮಿಕವಾಗಿ ತುಂಬಾ ಸಮಾನತೆಯಿಂದ ವಂಚಿರಾಗುತ್ತಿದ್ದಾರೆ. ಉಪವಿಭಾಗಾಧಿಕಾರಿ ಎರಡೂ ಸಮುದಾಯದ ಮುಖಂಡರನ್ನು ಕರೆಯಿಸಿ ಸಭೆ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

    ಹಕ್ಕುಪತ್ರ ನೀಡಿರಿ: ಗ್ರಾಮದ 65 ದಲಿತ ಕುಟುಂಬಗಳಿಗೆ 2 ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ ಫಲಾನುಭವಿಗಳಾಗಿ ಗುರುತಿಸಲಾಗಿದೆ. ಆದರೆ, ಇಂದಿಗೂ ನಿವೇಶನದ ಹಕ್ಕುಪತ್ರ ನೀಡಿಲ್ಲ. ತಾಲೂಕು ಆಡಳಿತದ ಬೇಜವಾಬ್ದಾರಿ ವರ್ತನೆ ಖಂಡನೀಯ. ಆದ್ದರಿಂದ ತಕ್ಷಣವೇ ಗ್ರಾಮಸಭೆಗಳ ಮೂಲಕ ಆಯ್ಕೆಯಾಗಿರುವ ಬಿಳಿಗೆರೆ ಗ್ರಾಮದ 65 ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರವನ್ನು ಕೊಡಿಸಿಕೊಡುವಂತೆ ಮನವಿ ಮಾಡಿದರು.

    ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಗ್ರಾಮದ ದೇವಸ್ಥಾನಕ್ಕೆ ದಲಿತರಿಗೆ ಮುಕ್ತ ಪ್ರವೇಶ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸಮಾನತೆಯೇ ನಮ್ಮ ಸಂವಿಧಾನದ ಜೀವಾಳ. ಅದನ್ನು ದುರ್ಬಲಗೊಳಿಸಲಾಗದು. ಎಲ್ಲರೂ ಒಂದಾಗಿ ಬಾಳುವ ಮನಸ್ಥಿತಿ ಹೊಂದಿರುವುದು ಅಗತ್ಯ. ಹಕ್ಕುಪತ್ರ ವಿತರಣೆ ಕುರಿತಂತೆ ಕಂದಾಯ ಇಲಾಖೆಗೆ ಶೀಘ್ರ ಕ್ರಮವಹಿಸಲು ಸೂಚಿಸಲಾಗುವುದು ಎಂದರು.

    ಸಭೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಬಿಳಿಗೆರೆ ಗ್ರಾಪಂ ಅಧ್ಯಕ್ಷ ಮೋಹನ್, ದಲಿತ ಮುಖಂಡರಾದ ಡಿ.ಕುಮಾರ್, ಬಲ್ಲೇನಹಳ್ಳಿ ಕೆಂಪರಾಜು, ಆಂಜನೇಯ, ಯಜಮಾನ್ ಸಣ್ಣಯ್ಯ, ರಾಜಯ್ಯ, ವೆಂಕಟೇಶ್, ಪುಟ್ಟಯ್ಯ, ಮುಖಂಡರಾದ ಸ್ವಾಮಿಗೌಡ, ಶಿವಲಿಂಗೇಗೌಡ, ದಿವಾಕರ ರಾಜೇಶ, ದೇವಸ್ಥಾನದ ಪೂಜಾರಿ ಮಹದೇವಪ್ಪ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಮನು, ಸಮಾಜ ಕಲ್ಯಾಣಾಧಿಕಾರಿ ಮೋಹನ್, ಉಪ ತಹಸೀಲ್ದಾರ್ ವೆಂಕಟೇಶ್, ಆರ್‌ಐ ಭಾಸ್ಕರ್, ವಿಎ ವಿಜಯ್‌ಕುಮಾರ್, ಪಿಡಿಒ ಟಿ.ಭವ್ಯಾ, ಕಾರ್ಯದರ್ಶಿ ಈರಣ್ಣಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts