More

    ತ್ಯಾಮಗೊಂಡ್ಲು ಗ್ರಾಪಂ ಚುನಾವಣೆಗೆ ಮತ್ತೆ ಬಹಿಷ್ಕಾರ, ಪಟ್ಟಣ ಪಂಚಾಯಿತಿಗಾಗಿ ಪಟ್ಟು, ಸತತ 3ನೇ ಬಾರಿ ಗ್ರಾಮಸ್ಥರ ಪ್ರತಿಭಟನೆ

    ತ್ಯಾಮಗೊಂಡ್ಲು: ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಸತತ ಮೂರನೇ ಬಾರಿಗೆ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

    ಚುನಾವಣಾ ಆಯೋಗ ಇತ್ತೀಚೆಗೆ ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆ ಹೊರಡಿಸಿತ್ತು. ಇದು ತಿಳಿಯುತ್ತಲೇ ಮೂರೂ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಭೆ ಸೇರಿದ ಗ್ರಾಮಸ್ಥರು, ಚುನಾವಣೆ ಬಹಿಷ್ಕರಿಸುವ ಒಕ್ಕೊರಲ ನಿರ್ಣಯ ಕೈಗೊಂಡರು.

    ಚುನಾವಣಾ ಆಯೋಗ ಈ ಹಿಂದೆ ಎರಡು ಬಾರಿ ಗ್ರಾಪಂ ಚುನಾವಣೆಗೆ ಅಧಿಸೂಚನೆ ಹೊರಡಿಸಿತ್ತು. ಆ ಸಂದರ್ಭದಲ್ಲಿ ಕೂಡ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಣಯ ಕೈಗೊಂಡಿದ್ದರು.

    ಮಂಗಳವಾರದ ಸಭೆಯಲ್ಲಿ ತ್ಯಾಮಗೊಂಡ್ಲು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮೇಲೆ ಯಾವೆಲ್ಲ ರೀತಿ ಒತ್ತಡ ತರಬೇಕು ಎಂಬುದರ ಬಗ್ಗೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆದವು.

    ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್. ಹನುಮಂತರಾಜು ಮಾತನಾಡಿ, ಕಳೆದೆರಡು ಬಾರಿ ಚುನಾವಣೆ ಬಹಿಷ್ಕರಿಸಿದ ಬಳಿಕ ರಾಜಕೀಯ ಮುಖಂಡರು, ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ. ಈಗ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಕಡತ ಜಿಲ್ಲಾಧಿಕಾರಿ ಅವರ ಬಳಿಗೆ ಹೋಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಆದೇಶ ಹೊರಡಿಸಬೇಕಿದೆ. ಹಾಗಾಗಿ ಈ ಬಾರಿಯೂ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದರು.

    ಎಲ್ಲ ಪಕ್ಷದವರ ಸಂಘಟಿತ ಹೋರಾಟದಿಂದ ಉತ್ತಮ ಫಲಿತಾಂಶ ಸಿಗುವ ವಿಶ್ವಾಸವಿದೆ. ಶೀಘ್ರದಲ್ಲೇ ಮೇಲ್ದರ್ಜೆಗೇರಿಸುವ ಕುರಿತ ಆದೇಶ ಸರ್ಕಾರದಿಂದ ಹೊರಬೀಳುವ ಆಶಾಭಾವವಿದೆ. ಅದೇನೇ ಆದರೂ, ನಮ್ಮಲ್ಲಿ ಚುನಾವಣೆ ನಡೆಯುವುದೇ ಆದಲ್ಲಿ ಅದು ಪಟ್ಟಣ ಪಂಚಾಯ್ತಿಗೆ ಮಾತ್ರ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಸಾದತ್‌ವುಲ್ಲಾ ಹೇಳಿದರು.

    ವರ್ತಕರ ಸಂಘದ ಅಧ್ಯಕ್ಷ ಟಿ.ಎಸ್. ಮಂಜುನಾಥ್, ಜಿಪಂ ಮಾಜಿ ಸದಸ್ಯ ಹೊನ್ನಸಿದ್ದಯ್ಯ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಲ್. ರಾಮಕೃಷ್ಣ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಸಿ. ಅಶ್ವತ್ಥಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಸ್. ಜಗದೀಶ್, ಮುಖಂಡರಾದ ಗಂಗಬೈರಪ್ಪ, ಟಿ. ವಾಸುದೇವ್, ಗ್ರಾಪಂ ಮಾಜಿ ಸದಸ್ಯರಾದ ಪಿ.ಎನ್. ಸುಜಿತ್‌ಕುಮಾರ್, ಸುಂದರರಾಜ್ ಮೊದಲಿಯಾರ್, ಸಿ.ಎಲ್. ಜಗದೀಶ್‌ಪ್ರಸಾದ್, ಪ್ರಕಾಶ್ ಬಾಬು, ಮಲ್ಲೇಶ್, ಅನೀಸ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts