More

    ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ

    ತುಮಕೂರು: ಇಂಧನ ಬೆಲೆಗಳ ನಿರಂತರ ಹೆಚ್ಚಳ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆಯಿಂದ ನಗರವಾಸಿಗಳಿಗೆ ಆಗುತ್ತಿರುವ ತೊಂದರೆ ಖಂಡಿಸಿ ಗುರುವಾರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಎತ್ತಿನಗಾಡಿ, ಜಟಕಾಗಾಡಿ, ಸೈಕಲ್ ಜಾಥಾ ನಡೆಸಿ ಪ್ರತಿಭಟನೆ ನಡೆಸಲಾಯಿತು.

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಹಮ್ಮಿಕೊಳ್ಳಲಾಗಿದ್ದ ಎತ್ತಿನ ಗಾಡಿ, ಜಟಕಾಗಾಡಿ ಮತ್ತು ಸೈಕಲ್ ಜಾಥಾದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯಿದ್ ಅಹಮದ್ ಚಾಲನೆ ನೀಡಿ ಮಾತನಾಡಿ, ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ, ಭಾರತದಲ್ಲಿ ನಿರಂತರ ವಾಗಿ ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ, ಕರೊನಾ ಸಂಕಷ್ಟದಲ್ಲಿರುವ ಜನರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಲಿಗೆ ಮಾಡುತ್ತಿವೆ. ಇಂಧನ ಬೆಲೆಗಳ ಹೆಚ್ಚಳದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.

    ಬಡವರು ಮತ್ತು ಮಧ್ಯಮವರ್ಗದ ಜನರು ಬದುಕುವುದೇ ಕಷ್ಟವಾಗಿದೆ, ಕೇಂದ್ರ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದೆ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲು ಸರ್ಕಾರಿ ಸಾಮ್ಯದ ಸಾರಿಗೆ, ಟೆಲಿಕಾಂ ಕಂಪನಿಗಳನ್ನು ಮಾರಾಟ ಮಾಡಿ, ಬಂಡವಾಳಶಾಹಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
    ಸರ್‌ದಾರ್ ವಲ್ಲಭಾಭಾಯಿ ಪಟೇಲ್ ಹೆಸರಿನಲ್ಲಿ ನಿರ್ಮಿಸಿದ್ದ ಕ್ರೀಡಾಂಗಣದ ಮರುನಾಮಕರಣ ಮಾಡಿ ಮಹಾನ್ ನಾಯಕನಿಗೆ ಅವಮಾನ ಮಾಡಲಾಗಿದೆ ಎಂದು ಹರಿಹಾಯ್ದರು.

    ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ, ಬೆಲೆ ಏರಿಕೆ ಜನವಿರೋಧಿ ನೀತಿಯಿಂದ ಜನಸಾಮಾನ್ಯರು ತತ್ತರಿಸಿದ್ದು, ದಿನನಿತ್ಯ ಬಳಕೆ ವಸ್ತುಗಳಾದ ಗೋಧಿ, ಬೆಳೆ, ಬೆಲ್ಲ, ಅಕ್ಕಿ, ಕಾಳುಗಳು ಬೆಲೆಗಳು ಗಗನ ಮುಖಿಯಾಗಿವೆ, ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಇದರ ವಿರುದ್ದ ನಾವು ನಿರಂತರ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
    ಯುಪಿಎ ಸರ್ಕಾರವಿದ್ದಾಗ ಒಂದು ರೂ. ಇಂಧನ ಬೆಲೆ ಹೆಚ್ಚಾದರೂ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ಸಂಸದರು, ಶಾಸಕರು, ಮುಖಂಡರು, ಒಂದೇ ಸಮನೆ ಇಂಧನ ಬೆಲೆ ಹೆಚ್ಚಾಗುತ್ತಿದ್ದರೂ ತುಟ್ಟಿ ಬಿಚ್ಚುತ್ತಿಲ್ಲ. ಇದು ಬಿಜೆಪಿಯ ಇಬ್ಬಗೆಯ ನೀತಿ. ಅಲ್ಲದೆ ತುಮಕೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳು ತೀರ ವಿಳಂಬದಿಂದ ಜನ ಹೈರಾಣಾಗಿದ್ದಾರೆ ಎಂದರು.
    ಮುಖಂಡ ಮುರಳೀಧರ ಹಾಲಪ್ಪ, ಎಚ್.ಸಿ.ಹನುಮಂತಯ್ಯ ಮಾತನಾಡಿದರು. ಅಲ್ಪಸಂಖ್ಯಾತರ ಘಟಕಕದ ಸಂಜೀವ್ ಕುಮಾರ್, ಶಿವಾಜಿ, ಥಾಮ್‌ಸನ್, ನಿಶಾ, ದಾದಾಪೀರ್, ಅಲ್ಲಾಉದ್ದಿನ್, ಮುಲ್ಲಾ ಮತ್ತಿತರರು ಜಾಥಾ ನೇತೃತ್ವ ವಹಿಸಿದ್ದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ ಹಿತ ಮರೆತು, ಬಂಡವಾಳಶಾಹಿಗಳ ಪರವಾಗಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ. ಇಂಧನ ಬೆಲೆ ಹೆಚ್ಚಳದಿಂದ ಶ್ರೀಸಾಮಾನ್ಯರ ನಿತ್ಯ ಬದುಕಿಗೆ ಪೆಟ್ಟು ಬಿದ್ದಿದ್ದು ಸರ್ಕಾರಗಳು ಜವಬ್ಧಾರಿ ಮರೆತಿರುವುದು ಅಘಾತಕಾರಿ. ಬಿಜೆಪಿ ಸರ್ಕಾರಗಳ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸಬೇಕಿದೆ.
    ಆರ್.ರಾಮಕೃಷ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts