More

    ತೆಲಸಂಗದಲ್ಲಿ ನೀರಿನ ಸಮಸ್ಯೆ

    ತೆಲಸಂಗ: ಗ್ರಾಮದಲ್ಲಿ ವಾರದಿಂದ ನಳಗಳಿಗೆ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಜನತಾ ಕರ್ಫ್ಯೂ ವೇಳೆಯಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದ್ದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮದ ಹೊರವಲಯದ ಕೆರೆ ನೀರನ್ನು ಹೊಲ-ಗದ್ದೆಗಳಿಗೆ ಬಿಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬೇಸಿಗೆಯಲ್ಲಿ ಸ್ಥಳೀಯ 20 ಸಾವಿರ ಜನರಿಗೆ ಕುಡಿಯುವ ನೀರಿನ ತೊಂದರೆ ಆಗುತ್ತದೆ ಎಂದು 2 ತಿಂಗಳ ಹಿಂದೆಯೇ ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ಮನವಿ ಮಾಡಿದ್ದಲ್ಲದೆ, ತಾಲೂಕಾಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದರು. ಆದರೂ ನೀರು ಸಂರಕ್ಷಣೆಗೆ ಕ್ರಮ ಕೈಗೊಂಡಿಲ್ಲ.

    ಕೆರೆಯಿಂದ ಒಂದು ಪ್ರಮಾಣದಲ್ಲಿ ಮಾತ್ರ ಗದ್ದೆಗಳಿಗೆ ನೀರು ಬಿಡಬೇಕು. ನಂತರ ತಡೆಹಿಡಿದರೆ ಮಾತ್ರ ಬೇಸಿಗೆಯಲ್ಲಿ ನೀರಿನ ನಿರ್ವಹಣೆ ಸಾಧ್ಯ ಎಂದು ಮೇಲಧಿಕಾರಿಗಳಿಗೂ ಗೊತ್ತಿದೆ. ಇದು ಪ್ರಸಕ್ತ ವರ್ಷದ ಸಮಸ್ಯೆ ಮಾತ್ರವಲ್ಲ. 3 ವರ್ಷದಿಂದ ಈ ಸಮಸ್ಯೆ ಎದುರಾಗುತ್ತಿದೆ. ಶಾಸಕರು ಸೇರಿದಂತೆ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳಿಗೂ ಈ ವಿಷಯ ಗೊತ್ತಿಲ್ಲದೇನಿಲ್ಲ. ಆದರೂ ನೀರು ರಕ್ಷಣೆಯಲ್ಲಿ ನಿರ್ಲಕ್ಷೃ ಏಕೆ ಎನ್ನುವುದು ಜನರ ಪ್ರಶ್ನೆ.

    ಬಲಾಡ್ಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕೆಲ ಭೂಮಿಗೆ ನೀರು ಹರಿಬಿಟ್ಟು ಜನರಿಗೆ ನೀರು ದೊರೆಯದಂತೆ ಮಾಡುತ್ತಿರುವ ಉದ್ದೇಶವಾದರೂ ಏನು? ಗ್ರಾಮ ಪಂಚಾಯಿತಿಯವರು ಪತ್ರ ಬರೆದರೂ ಸ್ಥಳೀಯರಿಗೆ ನೀರು ಇಲ್ಲದಂತೆ ಮಾಡಿರುವುದು ತರವಲ್ಲ. ಅಧಿಕಾರಿಗಳು ಯಾರ ಮುಲಾಜಿಗೊಳಗಾಗಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

    ಕೆರೆಯ ಕೆಳಭಾಗದ ರೈತರು ಮಳೆಗಾಲದ ಎರಡು ಬೆಳೆಗಳನ್ನು ಮಾಡಿಕೊಂಡು ನೀರು ಹಾಯಿಸಿಕೊಳ್ಳಲಿ. ಆದರೆ, ಬೇಸಿಗೆಯಲ್ಲಿ 3ನೇ ಬೆಳೆ ಏಕೆ ಬೆಳೆಯುತ್ತಾರೆ. ರೈತರಿಗೆ ಅಧಿಕಾರಿಗಳು ಮುಂಚಿತವಾಗಿಯೇ ಮನವರಿಕೆ ಮಾಡುವುದಿಲ್ಲ. ಇದರಿಂದ ನೀರಿನ ಸಮಸ್ಯೆ ಎದುರಾಗುತ್ತಿದೆ. ರೈತರ ಸಂಕಟ ನಮಗೆ ಗೊತ್ತಿದೆ. ಆದರೆ ಮೂರನೇ ಬೆಳೆ ಮಾಡಿಕೊಂಡು ಕುಡಿಯುವ ನೀರು ದೊರೆಯದಂತೆ ಮಾಡುವುದು ಯಾವ ನ್ಯಾಯ. ಈ ಸಮಸ್ಯೆ ಹಳೆಯದಾಗಿದ್ದರಿಂದ ಜಾಗೃತರಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನೀರು ಪೂರೈಕೆ ಮಾಡದೇ ಹೋದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜನ ಎಚ್ಚರಿಸಿದ್ದಾರೆ.

    ಈ ಎರಡು ತಿಂಗಳ ಹಿಂದೆಯೇ ತಾಲೂಕು ಅಧಿಕಾರಿಗಳಿಗೆ ಕೆರೆ ನೀರು ಉಳಿಸಿಕೊಳ್ಳುವ ಕುರಿತು ಮನವಿ ಸಲ್ಲಿಸಿದ್ದೇವೆ. ಆದರೆ, ನೀರು ಉಳಿಸಿಕೊಳ್ಳಲಿಲ್ಲ. ಈಗ ಹೊಳೆ ನೀರಿನ ಪೈಪ್‌ಲೈನ್ ಸಮಸ್ಯೆಯಾದ್ದರಿಂದ ಮತ್ತಷ್ಟು ತೊಂದರೆ ಆಗಿದೆ. ಬೇಸಿಗೆ ಮುಗಿಯುವವರೆಗೂ ಸ್ವಲ್ಪ ಪ್ರಮಾಣದಲ್ಲಿ ಜನರಿಗೆ ತೊಂದರೆ ಆಗುತ್ತದೆ.
    | ಬೀರಪ್ಪ ಕಡಗಂಚಿ ಪಿಡಿಒ ತೆಲಸಂಗ

    | ಜಗದೀಶ ಖೊಬ್ರಿ ತೆಲಸಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts