More

    ತೆರೆದಾಯ್ತು ಶಾಲೆ, ಊಟ-ಪಾಠಕ್ಕೆ ಕಾಯಬೇಕು ಇನ್ನೊಂದಿನ..

    ದಾವಣಗೆರೆ: ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಸೇರಿ ಜಿಲ್ಲೆಯ 2026 ಶಾಲೆಗಳು ಸೋಮವಾರ ಬಾಗಿಲು ತೆರೆದವು. ಬುಧವಾರ ಅಕ್ಷರಾಲಯಗಳಿಗೆ ಹಾಜರಾಗಲಿರುವ ಮಕ್ಕಳ ಅಗತ್ಯತೆಗಳನ್ನು ಪೂರೈಸಲು ಆಡಳಿತ ಮಂಡಳಿ, ಶಿಕ್ಷಕರು ಪೂರ್ವ ಸಿದ್ಧತೆ ನಡೆಸಿದರು.
    ಕೆಲವು ಶಾಲೆಗಳು ವಿಧಾನಸಭೆ ಚುನಾವಣೆಗೆ ಮತಗಟ್ಟೆ ಕೇಂದ್ರಗಳಾಗಿದ್ದವು. ಅಲ್ಲಿ ದಾಸ್ತಾನು ಕೊಠಡಿ ಸೇರಿದ್ದ ಡೆಸ್ಕ್- ಪೀಠೋಪಕರಣಗಳನ್ನು ಸುಸ್ಥಿತಿಯಲ್ಲಿ ಇರಿಸುವ ಕೆಲಸ ಸೋಮವಾರ ನಡೆಯಿತು. ಬಂದ ಕಡಿಮೆ ಸಂಖ್ಯೆಯ ಮಕ್ಕಳು ಪಾಠ ಇಲ್ಲದ್ದರಿಂದ ಸ್ವಚ್ಛತಾ ಕಾರ್ಯಕ್ಕೆ ನೆರವಾದರು!
    ಶಾಲೆಗಳ ಕಾರಿಡಾರನ್ನು ಪೈಪ್ ಮೂಲಕ ನೀರು ಹಾಯಿಸಿ ತೊಳೆಯುತ್ತಿದ್ದುದು ಕಂಡುಬಂದಿತು. ಅಕ್ಷರದಾಸೋಹ ಕೊಠಡಿಗಳಲ್ಲಿಯೂ ಧಾನ್ಯ ಸ್ವಚ್ಛತೆ ಹಾಗೂ ಸರಬರಾಜಾದ ಆಹಾರ ಪರಿಕರಗಳನ್ನು ಇಳಿಸಿ ದಾಸ್ತಾನು ರೂಂನಲ್ಲಿ ಇರಿಸಲಾಯಿತು. ಕೆಲವೆಡೆ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
    ಆಯಾ ಶಾಲೆಗಳ ಪ್ರಾಚಾರ್ಯರು, ಉಪ ಪ್ರಾಚಾರ್ಯರು ಶಿಕ್ಷಕರ ಸಭೆ ನಡೆಸಿ, ಆಯಾ ತರಗತಿ ಮಕ್ಕಳನ್ನು ಸೇರ್ಪಡೆ ಮಾಡಿಕೊಂಡು ಕನ್ನಡ, ಇಂಗ್ಲಿಷ್, ಗಣಿತ, ಸಮಾಜ, ವಿಜ್ಞಾನ ಹೀಗೆ ವಿಷಯವಾರು ಕ್ಲಬ್‌ಗಳನ್ನು ರಚಿಸಿ, ಕೆಲವು ಶಿಕ್ಷಕರಿಗೆ ವಾರ್ಷಿಕ ಚಟುವಟಿಕೆಗಳ ಜವಾಬ್ದಾರಿ ಹಂಚಿಕೆ ಮಾಡಿದರು.
    ಶಿಕ್ಷಣ ಇಲಾಖೆಯಿಂದಲೇ ನೀಡಲಾದ ಶೈಕ್ಷಣಿಕ ಮಾರ್ಗದರ್ಶಿ ಅನುಸಾರ ಮಾಹೆವಾರು ಪಾಠಗಳ ಹಂಚಿಕೆ ಮಾಡಿ ಬೋಧನೆ ಮಾಡಲು ಹಾಗೂ ವಾರ್ಷಿಕ ಕ್ರಿಯಾಯೋಜನೆ ರೂಪಿಸಿ ಪಾಲಿಸಲು, ಶಾಲೆಗೆ ಮಕ್ಕಳನ್ನು ಕರೆತರುವ ನಿಟ್ಟಿನಲ್ಲಿ ಜೂನ್ 1ರಿಂದ ಮಿಂಚಿನ ಸಂಚಾರ ಆಂದೋಲನ ನಡೆಸುವ ಬಗ್ಗೆ ಸೂಚನೆ ನೀಡಲಾಯಿತು.
    ಬುಧವಾರ ಅಧಿಕೃತವಾಗಿ ಶಾಲಾ ಪ್ರಾರಂಭೋತ್ಸವವನ್ನು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಾಡಲು, ಹಬ್ಬದ ವಾತಾವರಣ ನಿರ್ಮಿಸಲು, ಸಮವಸ್ತ್ರ- ಪಠ್ಯಪುಸ್ತಕ ವಿತರಣೆ, ಸಿಹಿಯೂಟ ಕಲ್ಪಿಸಲು ಹಾಗೂ ಜಾಥಾ ಹಮ್ಮಿಕೊಳ್ಳುವ ಬಗ್ಗೆಯೂ ಕೆಲವೆಡೆ ಚರ್ಚೆ ನಡೆಸಲಾಯಿತು. ತರಗತಿವಾರು ವೇಳಾಪಟ್ಟಿ ನಿಗದಿ ಮಾಡಲಾಯಿತು.
    ಸೋಮವಾರ ಕೆಲವು ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿಗೆ ಬೇಡಿಕೆ ಕಂಡುಬಂತು. ನಿಟ್ಟುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ (ಆಂಗ್ಲ ಮಾಧ್ಯಮ) ಒಂದನೇ ತರಗತಿ ದಾಖಲಾತಿಗೆ ನಿಯಾಮವಳಿಯಂತೆ 30 ಚಿಣ್ಣರಿಗೆ ಅವಕಾಶವಿದೆ.
    ಹೆಚ್ಚು ಪಾಲಕರು ವಿಚಾರಿಸಿ ಹೋಗುತ್ತಿದ್ದರು. ‘ಬುಧವಾರ ಬೆಳಗ್ಗೆ ಎಂಟೂವರೆಗೆ ಬಂದು ಕ್ಯೂ ನಿಲ್ಲಿ. 30 ಜನರಿಗೆ ಟೋಕನ್ ಕೊಡುತ್ತೇವೆ, ನಂತರ ಬಂದವರಿಗೆ ಅವಕಾಶ ಇಲ್ಲ’ ಎಂದು ಅಲ್ಲಿನ ಪ್ರಭಾರ ಪ್ರಾಚಾರ್ಯ ಚಂದ್ರಪ್ಪ ಹೇಳುತ್ತಲಿದ್ದರು.
    ‘8 ನೇ ತರಗತಿ ಪ್ರವೇಶಾತಿಗೆ ಹೆಚ್ಚು ಅರ್ಜಿ ಬರುತ್ತಿವೆ. ಕನಿಷ್ಠ ಜ್ಞಾನಾರ್ಜನೆ ಪರಿಶೀಲಿಸಿ ಮಕ್ಕಳನ್ನು ಸೇರಿಸಿಕೊಳ್ಳೋಣ, ಎಸ್ಸೆಸ್ಸೆಲ್ಸಿ ಫಲಿತಾಂಶ ಸರಿಯಾಗದಿದ್ದರೆ ಪಾಲಕರಿಗೇ ನಾವೇ ಉತ್ತರ ಹೇಳೋರು’ ಎಂಬುದಾಗಿ ಶಾಲೆಯೊಂದರ ಪ್ರಾಂಗಣದಲ್ಲಿ ಕೇಳಿಬಂತು.
    ವರ್ಗಾವಣೆ ಪತ್ರಕ್ಕೆ ಅರ್ಜಿ ಸಲ್ಲಿಸುವವರು ಬರುತ್ತಿದ್ದರು. ಅಲ್ಲಿನ ಸಿಬ್ಬಂದಿ ‘ದೇಣಿಗೆ ಕೊಡುತ್ತೀನಿ ಅಂದಿದ್ಯಲ್ಲ, ಇಷ್ಟು ಬೇಗ ಟಿಸಿ ತಗೊಂಡು ಹೋಗಲು ಬಂದಿದ್ದೀಯಾ’ ಎನ್ನುತ್ತಿದ್ದರು. ಕೆಲವೆಡೆ ಮಗುವಿನ ಸ್ಯಾಟ್ಸ್ ಸಂಖ್ಯೆ ಹೇಳಿ ಎಂದು ಕೇಳುತ್ತಿದ್ದರು.
    ರಾಜನಹಳ್ಳಿ ಸೀತಮ್ಮ ಪ್ರೌಢಶಾಲೆಗೆ ಪ್ರವೇಶ ಕೋರಿ 150 ಮಂದಿ ಅರ್ಜಿ ತೆಗೆದುಕೊಂಡು ಹೋಗಿದ್ದಾರೆ ಎಂದರು ಪ್ರಾಚಾರ್ಯ ಎ.ಆರ್.ಮಂಜಪ್ಪ. ನಮ್ಮಲ್ಲಿ ಹಿಂದಿ ವಿಷಯ ಬದಲಾಗಿ ಐಟಿ-ಬಿಟಿ ಕೋರ್ಸ್ ಇದೆ. ಬ್ಯೂಟಿ ಮತ್ತು ವೆಲ್‌ನೆಸ್ ವಿಷಯದಲ್ಲಿ ಓದುವ ಅವಕಾಶವಿದೆ. ಇದನ್ನು ಓದಿದವರು ಭವಿಷ್ಯದಲ್ಲಿ ಸ್ವ ಉದ್ಯಮ ಮಾಡಬಹುದು ಎಂದರು ಪ್ರಾಚಾರ್ಯ ಎ.ಆರ್.ಮಂಜಪ್ಪ.
    ಖಾಸಗಿ ಶಾಲೆಗಳ ಕ್ಯಾಂಪಸ್‌ನಲ್ಲೂ ಪಾಲಕರು ಚಿಣ್ಣರನ್ನು ಕರೆತಂದು ಶಾಲೆಗೆ ಸೇರಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು. ಸ್ವಾಗತಕಾರರು ‘ಸ್ಟೇಟಾ, ಸೆಂಟ್ರಲ್ ಸಿಲೆಬಸ್ಸಾ’ ಎಂದು ಕೇಳಿ ಕಳಿಸುತ್ತಿದ್ದರು. ಫೀಸ್ ಎಷ್ಟಾಗುತ್ತೆ? ಕಂತಿನ ರೂಪದಲ್ಲಿ ಕಟ್ಟಬಹುದಾ? ಯೂನಿಫಾರ್ಮ್, ಬುಕ್ಸ್ ಯಾವಾಗ ಕೊಡುತ್ತೀರಿ? ಎಂದೆಲ್ಲ ಪ್ರಶ್ನೆಗಳು ಈ ಕಡೆಯಿಂದ ಬರುತ್ತಿದ್ದವು.
    ಮಗುವಿಗೆ ಒಂದನೇ ತರಗತಿಗೆ ನೇರ ಪ್ರವೇಶ ಕಲ್ಪಿಸುವಂತೆ ಕೋರಿದ ಪಾಲಕರಿಗೆ ‘ನಿಮ್ಮ ಮಗುವಿಗೆ ಸಣ್ಣ ಪರೀಕ್ಷೆ ನಡೆಸಿ, ನಿರ್ಧರಿಸುತ್ತೇವೆ’ ಎಂಬ ಶಾಲಾ ಕಚೇರಿಗಳಿಂದ ಉತ್ತರ ಕೇಳಿಬರುತ್ತಿತ್ತು.
    ‘ಆನಗೋಡು ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಓದಿಗೆ ಬೇಡಿಕೆ ಇದೆ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಶಿಕ್ಷಕರು, ದಾನಿಗಳ ಸಹಕಾರದೊಂದಿಗೆ ಎಲ್‌ಕೆಜಿ, ಯುಕೆಜಿ, ತರಗತಿ ಆರಂಭಿಸಿದ್ದೇವೆ ಎಂದು ಪ್ರತಿಕ್ರಿಯಿಸಿದರು ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ.
    ಈ ದಿನ ಶಾಲೆಗೆ ಬಂದ ಮಕ್ಕಳ ಸಂಖ್ಯೆ ಕಡಿಮೆ. ದಾಖಲಾತಿಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ, ಪಾಲಕರಿಗೆ ಕರೆ ಮಾಡಿ ಮಕ್ಕಳನ್ನು ಶಾಲೆಗೆ ಕರೆತರುವಂತೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು ಹಳೇಪೇಟೆ ಸರ್ಕಾರಿ ಶಾಲೆಯ ಶಿಕ್ಷಕಿ ಎಂ.ಎನ್.ನಮಿತಾ.
    —-
    ಕೋಟ್
    ಶೈಕ್ಷಣಿಕ ವರ್ಷಾರಂಭದಲ್ಲೇ ಅತಿಥಿ ಶಿಕ್ಷಕರ ನೇಮಕವಾಗಿರುವುದೇ ಜಿಲ್ಲೆಯ ಪಾಲಿಗೆ ಗುಡ್‌ನ್ಯೂಸ್. ಪ್ರಾಥಮಿಕ ಶಿಕ್ಷಣದಲ್ಲಿ 973 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು 665 ಮಂದಿಯನ್ನು ಬಸಿಕೊಳ್ಳಲಾಗುವುದು. ಪ್ರೌಢಶಾಲೆಗಳಲ್ಲಿ 80 ಶಿಕ್ಷಕರ ಹುದ್ದೆ ಮಂಜೂರಾಗಿದ್ದು 76 ಮಂದಿಯನ್ನು ನಿಯೋಜಿಸಲಾಗುವುದು.
    ಜಿ.ಆರ್. ತಿಪ್ಪೇಶಪ್ಪ
    ಡಿಡಿಪಿಐ, ದಾವಣಗೆರೆ.
    —————————-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts