More

    ತುಮಕೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ; ಸ್ವಪಕ್ಷೀಯರಿಂದಲೇ ಸಹಿ

    ತುಮಕೂರು: ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಜಿಪಂ ಅಧ್ಯಕ್ಷೆ ಎಂ.ಲತಾ ವಿರುದ್ಧ ಉಪಾಧ್ಯಕ್ಷೆ ಶಾರದಾ ಸೇರಿ 50 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದು ಪದಚ್ಯುತಿ ಬಹುತೇಕ ಸನ್ನಿಹಿತವಾಗಿದೆ.

    ಲತಾ ಪ್ರತಿನಿಧಿಸುವ ಜೆಡಿಎಸ್ ಸದಸ್ಯರು ಸೇರಿ ಮಿತ್ರಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರೆಲ್ಲ ಒಟ್ಟಾಗಿ ಆರ್‌ಡಿಪಿಆರ್ ಕಾರ್ಯದರ್ಶಿ ಅತೀಕ್ ಅವರಿಗೆ ಅವಿಶ್ವಾಸದ ಪತ್ರ ನೀಡಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

    ಒಟ್ಟು 57 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್ 18, ಉಪಾಧ್ಯಕ್ಷೆ ಶಾರದಾ ಸೇರಿ ಬಿಜೆಪಿಯ 19 ಹಾಗೂ ಜೆಡಿಎಸ್‌ನ 13 ಸದಸ್ಯರು ಸೇರಿ ಒಟ್ಟು 50 ಸದಸ್ಯರು ಅವಿಶ್ವಾಸಕ್ಕೆ ಸಹಿಹಾಕಿದ್ದು, ಮಾಜಿ ಶಾಸಕ ಕೆ.ಎನ್.ರಾಜಣ್ಣ ಬೆಂಬಲಿಗ 4 ಕಾಂಗ್ರೆಸ್ ಸದಸ್ಯರು ಸಹಿ ಮಾಡಿಲ್ಲ. 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿರುವ 6 ಕೋಟಿ ರೂ. ಅನುದಾನ ಸೇರಿ ವಿವಿಧ ಕಾರ್ಯಯೋಜನೆಗಳಿಗೆ ಅನುಮೋದನೆ ನೀಡುವ ಉದ್ದೇಶದಿಂದ ಗುರುವಾರ ಕರೆದಿದ್ದ ಸಭೆಯಿಂದ ಸದಸ್ಯರೆಲ್ಲ ದೂರ ಉಳಿದ ಕಾರಣಕ್ಕೆ ಸಭೆ ರದ್ದಾಯಿತು. ರದ್ದಾದ ಬೆನ್ನಲ್ಲೇ ಸದಸ್ಯರೆಲ್ಲ ಒಟ್ಟಾಗಿ ತುಮಕೂರಿನಲ್ಲಿ ಜಿಪಂ ಸಿಇಒ ಶುಭಾಕಲ್ಯಾಣ್ ಹಾಗೂ ಬೆಂಗಳೂರಿನಲ್ಲಿ ಆರ್‌ಡಿಪಿಆರ್ ಕಾರ್ಯದರ್ಶಿ ಅತೀಕ್ ಅವರಿಗೆ ಅವಿಶ್ವಾಸದ ಪತ್ರ ನೀಡಿದರು.

    ಬಿಜೆಪಿ, ಜೆಡಿಎಸ್ ರಾಜಕೀಯ: ಅಧ್ಯಕ್ಷೆ ವಿರುದ್ಧ ದಿಢೀರ್ ಪದಚ್ಯುತಿ ಪ್ರಹಸನದ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಒಳ ರಾಜಕೀಯವಿದೆ ಎಂಬ ಗುಸುಗುಸು ಜಿಪಂ ಆವರಣದಲ್ಲಿ ಕೇಳಿಬಂತು. ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಆರಂಭದ ಒಪ್ಪಂದದಂತೆ ಯಾದವ ಸಮುದಾಯದ ಯಶೋದಾ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಿತ್ತು.

    ಆದರೆ, ಬಿಜೆಪಿ ಮುಖಂಡರು ಹಾಗೂ ಅಧ್ಯಕ್ಷೆ ಲತಾ ನಡುವಿನ ಒಳರಾಜಕೀಯದಿಂದ ಅಧಿಕಾರ ಹಸ್ತಾಂತರವಾಗದೆ ಯಾದವ ಸಮುದಾಯದ ಕೆಂಗಣ್ಣಿಗೆ ಎರಡೂ ಪಕ್ಷದ ಮುಖಂಡರು ಗುರಿಯಾಗಿದ್ದರು. ಪ್ರಸ್ತುತ ಶಿರಾ ಉಪಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವು ನಿರ್ಧರಿಸುವ ಶಕ್ತಿ ಇರುವ ಕಾಡುಗೊಲ್ಲರ ವಿಶ್ವಾಸಗಳಿಸಲು ಈ ಅವಿಶ್ವಾಸ ಪ್ರಹಸನ ಸೃಷ್ಟಿಸಿದ್ದಾರೆ ಎನ್ನಲಾಗಿದ್ದು ಉಳಿದ ಎಂಟು ತಿಂಗಳಿಗೆ ಯಾದವರಿಗೆ ಅವಕಾಶ ನೀಡುವ ಆಶ್ವಾಸನೆಯೊಂದಿಗೆ ಉಪಚುನಾವಣೆಯಲ್ಲಿ ಲಾಭ ಪಡೆಯುವ ಕಸರತ್ತು ನಡೆದಿದೆ.

    6 ಕೋಟಿ ಅನುದಾನ ಬಳಸಲು ಅಧ್ಯಕ್ಷರ ಆಸಕ್ತಿ: 15ನೇ ಹಣಕಾಸು ಯೋಜನೆಯ 6 ಕೋಟಿ ರೂಪಾಯಿ ಅನುದಾನಕ್ಕೆ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲು ಜಿಪಂ ಅಧ್ಯಕ್ಷೆ ಲತಾ ವಿಶೇಷ ಆಸಕ್ತಿ ತೋರಿದರು. ಅಧಿಕಾರವಧಿ 8 ತಿಂಗಳಷ್ಟೇ ಇದ್ದು ಅನುಮೋದನೆಯ ಅವಶ್ಯಕತೆಯಿದೆ, ಸದಸ್ಯರು ಸಭೆ ನಡೆಸಲು ಅವಕಾಶ ನೀಡಬೇಕು ಎಂದು ಮಾಡಿಕೊಂಡ ಮನವಿಗೆ ಸದಸ್ಯರು ಕಿವಿಗೊಡಲಿಲ್ಲ. ಅಧ್ಯಕ್ಷರು ಆಡಳಿತ ನಡೆಸುವಲ್ಲಿ ವಿಲವಾಗಿದ್ದು ಜಿಪಂನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ನೀಡಿದ್ದರೂ ತನಿಖೆಗೆ ಹಿಂದೇಟು ಹಾಕಿದ್ದಾರೆ ಎಂದು ಸದಸ್ಯರು ಆರೋಪಿಸಿ, ರಾಜೀನಾಮೆಗೆ ಆಗ್ರಹಿಸಿದ್ದಾರೆ.

    6 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ಹಾಗೂ ವಿವಿಧ ಇಲಾಖೆಗಳ ಲಿಂಕ್ ಡಾಕ್ಯುಮೆಂಟ್ ಯೋಜನೆಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವುದು ತುರ್ತು ಅಗತ್ಯವಿದೆ, ಪೂರ್ವಬಾವಿ ಸಭೆಗೆ ನಮ್ಮನ್ನು ಕರೆದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಸದಸ್ಯರು ಸಭೆಯಿಂದ ದೂರ ಉಳಿದಿದ್ದು ಬೇಸರ ತರಿಸಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ.
    ಎಂ.ಲತಾ ಜಿಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts