More

    ತಿಪ್ಪೆ ಎತ್ತುವಲ್ಲಿ ಭಾರತಕ್ಕೆ ವಿಶ್ವಗುರು ಪಟ್ಟ  -ಎ. ಜ್ಯೋತಿ ಟೀಕೆ -ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಮ್ಮೇಳನ

    ದಾವಣಗೆರೆ: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ, 125 ರಾಷ್ಟ್ರಗಳ ಪೈಕಿ 111ನೇ ಸ್ಥಾನಕ್ಕೆ ಕುಸಿದಿದೆ. ಬಡಾಯಿ ಕೊಚ್ಚಿಕೊಳ್ಳುತ್ತಿರುವ ವಿಶ್ವಗುರು ಪಟ್ಟ ತಿಪ್ಪೆ ಎತ್ತುವುದರಲ್ಲಿದೆ ಎಂದು ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಎ.ಜ್ಯೋತಿ ಟೀಕಿಸಿದರು.
    ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಇಲ್ಲಿನ ಪಂಪಾಪತಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಕ್ಕೂಟದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಅಪೌಷ್ಟಿಕತೆ ಹೆಚ್ಚಿದ್ದರೂ ಅಂಗನವಾಡಿ ಕೇಂದ್ರಗಳಲ್ಲಿ ಹಾಲು-ಮೊಟ್ಟೆ ಎಂಬುದು ಲೊಟ್ಟೆಯಾಗಿದೆ ಎಂದು ದೂರಿದರು.
    ಮಹಿಳಾ ಮೀಸಲಾತಿ ಸಂಬಂಧ ಸಂಘಟನೆ, 2021ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದಾಗಿ ಸುಪ್ರೀಂಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಹೀಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಮಹಿಳಾ ಮೀಸಲು ಮಸೂದೆ ಜಾರಿಗೊಳಿಸಿತು. ಆದರೆ ಜನಗಣತಿ, ಕ್ಷೇತ್ರ ಮರುವಿಂಗಡಣೆ ನಂತರದಲ್ಲಿ 2029ರಲ್ಲಿಯೇ ಇದರ ಲಾಭ ಸಿಗಲಿದೆ ಎಂದು ಸಬೂಬು ಹೇಳುವ ಮೂಲಕ ಮಹಿಳೆಯರಿಗೆ ಮೋಸ ಮಾಡುತ್ತಿದೆ ಎಂದೂ ಆರೋಪಿಸಿದರು.
    ಲೈಂಗಿಕ ಕಿರುಕುಳ ಆರೋಪದಡಿ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷನ ವಿರುದ್ಧ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದಾಗ ಮೌನ ತಾಳಿದ್ದ ಕೇಂದ್ರ ಸರ್ಕಾರದ ಬೇಟಿ ಪಡಾವೊ ಬೇಟಿ ಬಚಾವೊ ಘೋಷಣೆ ಎಲ್ಲಿ ಹೋಯಿತು? ಇದೊಂದು ಮಹಿಳಾ ವಿರೋಧಿ ಸರ್ಕಾರ ಎಂದು ಕಿಡಿ ಕಾರಿದರು.
    ರಾಜ್ಯದಲ್ಲಿ ಒಂದು ಸಾವಿರ ಮದ್ಯದಂಗಡಿ ತೆರೆಯುವ ತೀರ್ಮಾನದ ವಿರುದ್ಧದ ಹೋರಾಟ ನಡೆಸಿದ್ದರಿಂದಾಗಿ ರಾಜ್ಯ ಸರ್ಕಾರ ಇದರಿಂದ ಹಿಂದೆ ಸರಿದಿದ್ದು ಸ್ವಾಗತಾರ್ಹ. ದೇಶದಲ್ಲಿ ಇಂದು ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಹೆಚ್ಚಿವೆ. ಉದ್ಯೋಗಸ್ಥ ಸ್ತ್ರೀಯರಿಗೂ ಇಂದು ಸ್ವಾತಂತ್ರೃ ಸಿಕ್ಕಿಲ್ಲ. ಸ್ವಾತಂತ್ರೃ, ಸ್ವಾವಲಂಬನೆಗಾಗಿ ಮಹಿಳಾ ಹೋರಾಟ ನಡೆಯಬೇಕಿದೆ ಎಂದು ಹೇಳಿದರು.
    ಮಹಿಳಾ ವಿಜ್ಞಾನಿಗಳ ಫಲವಾಗಿ ಚಂದ್ರಯಾನದಂತಹ ಯಶಸ್ವಿ ಕಾರ್ಯಾಚರಣೆ ನಡುವೆಯೂ ಹೆಣ್ಣುಮಕ್ಕಳೇ ಹೆಣ್ಣುಭ್ರೂಣವನ್ನು ತಿರಸ್ಕರಿಸುವ ಹೀನ ಸ್ಥಿತಿ ಇಂದಿದೆ. ವರನಿಗೆ ವಧು ಸಿಗದಷ್ಟು ಲಿಂಗಾನುಪಾತ ಕಡಿಮೆಯಾಗಿದೆ. ಹೆಣ್ಣುಮಕ್ಕಳ ಸವಾಲುಗಳು ಸಾಕಷ್ಟಿವೆ. ಅವರನ್ನು ಮುಖ್ಯವಾಹಿನಿಗೆ ತರುವತ್ತ ಸಂಘಟನೆ ಶ್ರಮಿಸುತ್ತಿದೆ ಎಂದರು.
    ಭಾರತೀಯ ಮಹಿಳಾ ಒಕ್ಕೂಟದ ಬೆಂಗಳೂರು ಜಿಲ್ಲಾಧ್ಯಕ್ಷೆ ದಿವ್ಯಾ ಬಿರಾದಾರ್ ಮಾತನಾಡಿ ಮಹಿಳೆಯರಿಗೆ ಕಾನೂನು ಮತ್ತು ಸಂವಿಧಾನಿಕ ಸೌಲಭ್ಯಗಳನ್ನು ಕೊಡಿಸುವತ್ತ ಸಂಘಟನೆ ಕೆಲಸ ಮಾಡುತ್ತಿದೆ. ಡಿ.2,3ರಂದು ದಾವಣಗೆರೆಯಲ್ಲಿ ರಾಜ್ಯ ಸಮ್ಮೇಳನ ನಡೆಯುತ್ತಿದೆ. ಡಿ. 8ರಿಂದ ಮೂರು ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದರು.
    ಮಹಿಳೆಯರ ಸ್ಥಿತಿ ಉತ್ತಮವಾಗಿದ್ದಾಗ ಮಾತ್ರ ಕುಟುಂಬ, ದೇಶವೇ ಸುಸ್ಥಿತಿಯಲ್ಲಿ ಇರಲಿದೆ. ಭವಿಷ್ಯದಲ್ಲಿ ಶೇ.33ರ ಮೀಸಲಿನ ಲಾಭ ಪಡೆಯುವಷ್ಟರ ಮಟ್ಟಿಗೆ ಸ್ತ್ರೀಯರಲ್ಲೂ ರಾಜಕೀಯ ಅರಿವು ಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಒಕ್ಕೂಟದ ಜಿಲ್ಲಾ ಮುಖಂಡರಾದ ಎಂ.ಬಿ.ಶಾರದಮ್ಮ, ಎಸ್.ಎಸ್.ಮಲ್ಲಮ್ಮ, ಬಿ.ಚನ್ನಮ್ಮ, ಸರೋಜಾ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ಆನಂದರಾಜ್, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಉಮೇಶ್, ಪಿ.ಎಸ್.ನಾಗರಾಜ್, ಮೆಹಬೂಬ್ ಬಾಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts