More

    ಡೋಣಿ ನದಿ ತೀರದಲ್ಲಿ ಸಚಿವ ಉಮೇಶ ಕತ್ತಿ ಸಂಚಾರ, ಮಳೆ-ನೆರೆ ಹಾನಿಗೆ ತ್ವರಿತ ಪರಿಹಾರ

    ವಿಜಯಪುರ: ಡೋಣಿ ನದಿ ಪಾತ್ರದಲ್ಲಿ ಉಂಟಾದ ಮಳೆ ಹಾಗೂ ನೆರೆ ಹಾನಿಗೆ ಸಂಬಂಧಿಸಿದಂತೆ ಸತತ ಎರಡು ದಿನಗಳ ಕಾಲ ಪರಿಶೀಲನೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಮರ್ಪಕವಾಗಿ ಸಮೀಕ್ಷೆ ನಡೆಸಿ ತ್ವರಿತವಾಗಿ ಪರಿಹಾರ ಕಲ್ಪಿಸಲು ಸೂಚಿಸಿದ್ದಾರೆ.

    ಬಬಲೇಶ್ವರ, ತಿಕೋಟಾ, ದೇವರಹಿಪ್ಪರಗಿ, ಮುದ್ದೇಬಿಹಾಳ ಹಾಗೂ ತಾಳಿಕೋಟೆ ಭಾಗದಲ್ಲಿ ಮಂಗಳವಾರ ಮತ್ತು ಬುಧವಾರ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಂಡು ಕಟ್ಟಿಕೊಂಡು ಸಚಿವ ಉಮೇಶ ಕತ್ತಿ ಸಂಚರಿಸಿದ್ದಾರೆ. ಈ ವೇಳೆ ಸಾರ್ವಜನಿಕರಿಂದ ಸಮಸ್ಯೆಗಳ ಸರಮಾಲೆಯೇ ಎದುರಾಗಿದ್ದು, ಶಾಶ್ವತ ಪರಿಹಾರಕ್ಕೆ ಬೇಡಿಕೆ ಬಂದಿತು.
    ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಬಳಿ ಡೋಣಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಸೇತುವೆ ವೀಕ್ಷಣೆ ಮಾಡಿದರು. ಇಲ್ಲಿ ಸಚಿವರು ಬರೋ ಮುನ್ನ ನದಿ ತಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಸಿಗಳನ್ನು ನೆಟ್ಟು ಮುಳ್ಳು ಬೇಲಿ ಹಾಕೋ ದೃಶ್ಯ ಎಲ್ಲರ ಗಮನ ಸೆಳೆಯಿತು.

    ಸಾತಿಹಾಳ ಸೇತುವೆಗೆ ಭೇಟಿ ನೀಡಿದ ಬಳಿಕ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಸಾತಿಹಾಳ ಸೇತುವೆ ಎತ್ತರಿಸೋ ಭರವಸೆ ನೀಡಿದ ಬಳಿಕ ಸಾತಿಹಾಳ ಗ್ರಾಮದಲ್ಲಿ ಮಳೆಯಿಂದ ಸಮಸ್ಯೆಗೀಡಾದ ಪರಿಶಿಷ್ಟ ಜಾತಿ ಕಾಲನಿಗೂ ಭೇಟಿ ನೀಡಿ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಬಳಿಕ ತಾಳಿಕೋಟೆ ಪಟ್ಟಣದ ಹೊರ ಭಾಗದ ಸೇತುವೆ ಬಳೀ ಪ್ರವಾಹ ವೀಕ್ಷಣೆ ಮಾಡಿದರು. ಇಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರೋ ಸೇತುವೆ ಬಿರುಕು ಬಿಟ್ಟು ವಾಲಿರೋ ಕಾರಣ ಹಳೆಯ ಸೇತುವೆ ಮೇಲೆ ಸಂಚಾರ ಮಾಡಲಾಗುತ್ತಿದೆ. ಡೋಣಿ ಪ್ರವಾಹದಲ್ಲಿ ಹಳೆಯ ಸೇತುವೆ ಜಲಾವೃತವಾಗಿ ಸಂಚಾರ ಬಂದ್ ಆಗುತ್ತದೆ ಎಂಬ ಮಾಹಿತಿ ಅರಿತ ಸಚಿವರು ಕೂಡಲೇ ಹೊಸ ಸೇತುವೆ ದುರಸ್ಥಿ ಕಾರ್ಯಕ್ಕೆ ಸೂಚನೆ ನೀಡಿದರು.

    ಬಳಿಕ ತಾಳಿಕೋಟೆ ಪ್ರವಾಸಿ ಮಂದಿರಲ್ಲಿ ಪ್ರವಾಹ ಸಂತ್ರಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು. ಅಲ್ಲಿಂದ ಬೋಳವಾಡ ಗ್ರಾಮಕ್ಕೆ ತೆರಳಿ ಪ್ರವಾಹ ವೀಕ್ಷಣೆ ಮಾಡಿದರು. ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಚಿವ ಉಮೇಶ ಕತ್ತಿ ಓರ್ವ ವಿದ್ಯಾರ್ಥಿನಿಗೆ ನಾನ್ಯಾರು ಎಂದು ಪ್ರಶ್ನೆ ಮಾಡಿದರು. ನೀವು ಪೊಲೀಸ್ ಎಂದು ಉತ್ತರಿಸಿದ ವಿದ್ಯಾರ್ಥಿನಿಗೆ ನಾನು ಜಿಲ್ಲಾ ಪಾಲಕ್ ಮಂತ್ರಿ, ನಿಮ್ಮವ್ವ ಅಪ್ಪ ಓಟ್ ಹಾಕಿ ಆಯ್ಕೆಯಾದವ ಎಂದರು.

    ಮುದ್ದೇಬಿಹಾಳ ಪಟ್ಟಣಕ್ಕೆ ಭೇಟಿ ನೀಡಿ ಪರಿಹಾರ ಚೆಕ್ ವಿತರಿಸಿದರು. ಒಟ್ಟಾರೆ ಎರಡು ದಿನಗಳ ಕಾಲ ಸಚಿವ ಉಮೇಶ ಕತ್ತಿ ಮಳೆ ಹಾಗೂ ನೆರೆ ಹಾನಿ ಪ್ರದೇಶಗಳಲ್ಲಿ ಸಂಚರಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts