More

    ಡಿ.ಬಿ. ಇನಾಮದಾರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

    ಎಂ.ಕೆ.ಹುಬ್ಬಳ್ಳಿ: ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗ ಳೊಂದಿಗೆ ಬುಧವಾರ ನೆರವೇರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಚಿವ ಡಿ.ಬಿ.ಇನಾಮದಾರ ನಿಧನರಾದ ಹಿನ್ನೆಲೆಯಲ್ಲಿ ಬೈಲಹೊಂಗಲದ ತಾಲೂಕಿನ ನೇಗಿನಹಾಳ ಗ್ರಾಮದ ಡಿ.ಬಿ.ಇನಾಮದಾರ ಅವರ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು. ಡಿ.ಬಿ.ಇನಾಮದಾರ ಸರಳ-ಸಜ್ಜನ ನಾಯಕರಾಗಿದ್ದರು.

    ಐದು ಬಾರಿ ಶಾಸಕರಾಗಿದ್ದ ಅವರು ನಮ್ಮ ತಂದೆಯವರ ಜತೆ ಅನ್ಯೋನ್ಯತೆ ಹೊಂದಿದ್ದರು. ನನ್ನನ್ನು ಸಹ ಬಹಳ ಪ್ರೀತಿ ಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು. ಇನಾಮದಾರ ನಿಧನ ನನಗೂ ನೋವು ತರಿಸಿದೆ. ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ. ದೇವರು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

    ಸೊಸೆ ಲಕ್ಷ್ಮೀ ವಿಕ್ರಂ ಇನಾಮದಾರ, ಪುತ್ರಿ ಬಿನಿತಾ, ಅಳಿಯ ವಿಜಯ ಸೋನಾಲಕರ್, ಶಾಸಕ ಮಹಾಂತೇಶ ದೊಡಗೌಡರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇತರರಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಡಿ.ಬಿ.ಇನಾಮದಾರ (75) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

    ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಡಿ.ಬಿ.ಇನಾಮದಾರ್ ಅವರು ಕಳೆದೊಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಡಿ.ಬಿ.ಇನಾಮದಾರ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಂಗಳೂರಿನಿಂದ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮಕ್ಕೆ ತರಲಾಗುವುದು. ಬಳಿಕ ಗ್ರಾಮದ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಏ.26ರಂದು ಡಿ.ಬಿ.ಇನಾಮದಾರ ಅವರ ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

    ಡಿಬಿಐ ರಾಜಕೀಯ ಹಿನ್ನೆಲೆ: ಡಿ.ಬಿ.ಇನಾಮದಾರ ಅವರು ಮಲಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಒಂಬತ್ತು ಬಾರಿ ಚುನಾವಣೆ ಎದುರಿಸಿದ್ದರು. 1983, 1985ರಲ್ಲಿ ಜನತಾ ಪಕ್ಷದಿಂದ, 1994, 1999, 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೀಗೆ ಐದು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು.

    ದೇವರಾಜ್ ಅರಸು, ಎಸ್.ಎಂ. ಕೃಷ್ಣ ಹಾಗೂ ಎಸ್.ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1983ರಲ್ಲಿ ಜನತಾ ಪಕ್ಷದಿಂದ ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ 1994ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಇಂದಿವರೆಗೂ ಅದೇ ಪಕ್ಷದಲ್ಲಿ ಮುಂದುವರಿದಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಒಡನಾಟ ಹೊಂದಿದ್ದರು. ಈ ಬಾರಿಯೂ ಚುನಾವಣೆಯಲ್ಲೂ ಇನಾಮದಾರ್ ಕಿತ್ತೂರು ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಅನಾರೋಗ್ಯದ ಕಾರಣದಿಂದಾಗಿ ಇನಾಮದಾರ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿತು. ಇನಾಮದಾರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಬಾಬಾಸೇಹಬ್ ಪಾಟೀಲ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

    ಕಿತ್ತೂರು ಕ್ಷೇತ್ರ, ನಾಡಿಗೆ ತುಂಬಲಾರದ ನಷ್ಟ: ಚನ್ನಮ್ಮನ ಕಿತ್ತೂರು: ಮಾಜಿ ಸಚಿವ ಡಿ.ಬಿ.ಇನಾಮದಾರ ಅಗಲಿಕೆಯಿಂದ ಕಿತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು. ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ರಂಭಾಪೂರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಡಿ.ಬಿ.ಇನಾಮದಾರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ, ಇನಾಮದಾರ ಅವರು ಎಲ್ಲ ಸಮುದಾಯದ ಜನರ ಜತೆ ಬೆರೆತು ಸಹಜ ಜೀವನ ನಡೆಸಿದವರು. ಅವರ ಅಗಲಿಕೆ ವೈಯಕ್ತಿಕವಾಗಿ ನನ್ನನ್ನು ದುಃಖಕ್ಕೆ ನೂಕಿದೆ ಎಂದರು. ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿದರು. ಮುಖಂಡರಾದ ಚಿನ್ನಪ್ಪ ಮುತ್ನಾಳ, ಶ್ರೀಕರ ಕುಲಕರ್ಣಿ, ಪ್ರಕಾಶ ಮೂಗಬಸವ, ಅಪ್ಪಣ್ಣ ಪಾಗಾದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts