More

    ಟಿಕೆಟ್ ಬೇಡ ಎಂದು ನಾನೇ ವರಿಷ್ಠರಿಗೆ ಕೇಳಿಕೊಂಡಿದ್ದೆ : ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಸ್ಪಷ್ಟನೆ

    ಹಾಸನ : ನಾನು ಬಿಜೆಪಿ ಸೇರ್ಪಡೆಗೊಂಡಿದ್ದು ಯಾವುದೇ ಅಧಿಕಾರದ ಆಸೆಯಿಂದಲ್ಲ. ನನ್ನ ಅಭಿಮಾನಿಗಳು, ಕಾರ್ಯಕರ್ತರನ್ನು ನಡುನೀರಿನಲ್ಲಿ ಕೈ ಬಿಡುವುದು ಬೇಡ ಎಂಬ ಕಾರಣದಿಂದ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
    ರಾಜ್ಯದ ನಾಯಕರು ಬಿಜೆಪಿ ಕೇಂದ್ರದ ಮುಖಂಡರು ಸಹ ಅಭ್ಯರ್ಥಿಯಾಗುವಂತೆ ಕೇಳಿಕೊಂಡರು. ಆದರೆ, ನಾನೇ ಟಿಕೆಟ್ ಬೇಡ ಎಂದು ವರಿಷ್ಠರಿಗೆ ಒತ್ತಡ ಹಾಕಿದ್ದೆ. ನನಗೆ ಕ್ಷೇತ್ರದಲ್ಲಿ ಟಿಕೆಟ್ ನೀಡದೆ ಇರುವುದು ಜನರಿಗೆ ತಪ್ಪು ಮಾಹಿತಿ ಹೋಗುತಿದ್ದೆ. ಹೀಗಾಗಿ ಈ ವಿಷಯದಲ್ಲಿ ಗೊಂದಲ ಸೃಷ್ಟಿಯಾಗುವುದು ಬೇಡ. ಕಾರ್ಯಕರ್ತರು, ಮತದಾರರು ಅನ್ಯತಾ ಭಾವಿಸಬೇಡಿ. ನನ್ನ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ರಾಜಕೀಯ ಈಗ ಒಂದು ವ್ಯಾಪಾರವಾಗಿ ಮಾರ್ಪಟ್ಟಿದೆ. ಚುನಾವಣೆಯಲ್ಲಿ ಗೆಲ್ಲಲು 50, 60 ಕೋಟಿ ರೂ. ಹಣವನ್ನು ಬಂಡವಾಳವಾಗಿ ಹೂಡುತ್ತಿದ್ದಾರೆ. ಅವರು ಗೆದ್ದಾಗ ಹಾಕಿದ್ದ ಬಂಡವಾಳವನ್ನು ಮತ್ತೆ ವಾಪಸ್ ಪಡೆಯಲೇಬೇಕು. ಹೀಗೆ ಹಣ ಬಲದಿಂದ ಅಧಿಕಾರ ಬಲಾಡ್ಯರ ಪಾಲಾಗುತ್ತಿದೆ. ಬಡವರ ಬದುಕು ಮೂರಾಬಟ್ಟೆಯಾಗುತಿದ್ದೆ. ಆದ್ದರಿಂದ ನಾನು ದೆಹಲಿಯಲ್ಲಿ ಕೇಂದ್ರ ಸಚಿವರ ಜತೆ ಚರ್ಚಿಸಿ ಚುನಾವಣೆ ಪ್ರಕ್ರಿಯೆ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಣ ಬಲದಿಂದ ಅಧಿಕಾರ ಬಲಾಡ್ಯರ ಪಾಲಾಗದೆ ದಿಟ್ಟ ನಾಯಕನ ಪಾಲಾಗಬೇಕು ಮತ್ತು ಬಡವರ ಪರ ಧ್ವನಿಯಾಗುವವರ ಪಾಲಾಗಬೇಕು ಎಂದು ಹೇಳಿದರು.
    ಚುನಾವಣೆಯಲ್ಲಿ ಎರಡು ‘ಸಿ’ ‘ಸಿ’ ಗಳು ಕಾರ್ಯನಿರ್ವಹಿಸುತ್ತದೆ. ಒಂದು ಕ್ಯಾಶ್ ಮತ್ತು ಕಾಸ್ಟ್ . ಇದನ್ನು ಹೊರತುಪಡಿಸಿ ಚುನಾವಣೆ ನಡೆಯಲು ಕೇಂದ್ರದ ವರಿಷ್ಠರು ಕ್ರಮ ಕೈಗೊಳ್ಳಬೇಕು. ಇವೆರಡನ್ನು ತಡೆ ಹಿಡಿದರೆ ಉತ್ತಮ ನಾಯಕ ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅಧಿಕಾರ ಬಲಾಡ್ಯರ ಪಾಲಾಗಿ ಜನರು ಸಂಕಷ್ಟ ಅನುಭವಿಸುತ್ತಾರೆ. ನನ್ನ ರಾಜಕೀಯ ಬದುಕಿನಲ್ಲಿ ತಪ್ಪನ್ನು ತಪ್ಪೆಂದು, ಸರಿಯನ್ನು ಸರಿಯೆಂದು ಹೇಳಿಕೊಂಡು ಬಂದಿದೇನೆ. ಜನರಿಗೆ ನ್ಯಾಯಯುತವಾಗಿ ಕೆಲಸ ಮಾಡಿದ್ದೇನೆ ಎಂದರು.
    ಅರಕಲಗೂಡು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಅವರು ನಿಮ್ಮನ್ನ್ನು ವಿರೋಧಿಸುತ್ತಿದ್ದರು. ಅವರಿಗೆ ನಿಮ್ಮ ಬೆಂಬಲ ಇದಿಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಸ್ವಾಮಿ ಅವರು, ರಾಜಕೀಯ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಯಾರೂ ಸಹ ಎದುರಾಳಿಯನ್ನು ಹಿಯಾಳಿಸಬಾರದು. ಅವರು ಪಕ್ಷದ ಅಭ್ಯರ್ಥಿ. ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿಕೊಳ್ಳೋಣ ಎಂದು ಬಹಿರಂಗವಾಗಿ ಕಾರ್ಯಕರ್ತರಿಗೆ ಹೇಳಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾನು ಕೆಲಸ ಮಾಡುತ್ತಿದ್ದೆ. ನನಗೆ ನನ್ನ ಮತದಾರರ ಹಿತರಕ್ಷಣೆ ಮುಖ್ಯ. ಯೋಗಾ ರಮೇಶ್ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಅವರ ಗೆಲುವಿಗೆ ಏನೇನೂ ಕಾರ್ಯನಿರ್ವಹಿಸಬೇಕೋ ಅವೆಲ್ಲವನ್ನೂ ಒಟ್ಟಾಗಿ ಒಗ್ಗಟ್ಟಾಗಿ ಮಾಡುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts