More

    ಜ್ಞಾನದ ಬೆಳಕು ವಿಶ್ವದೆಲ್ಲೆಡೆ ಪಸರಿಸಲಿ

    ಗೋಕರ್ಣ: ವಿದ್ಯಾ ವಿಶ್ವ ವರ್ತಮಾನ ಜಗತ್ತಿನ ಅಗತ್ಯವಾಗಿದೆ. ಇದರ ಮೂಲಕ ಅರಿವಿನ ಹಣತೆಯನ್ನು ಎಲ್ಲೆಡೆ ಹಚ್ಚುವ ಕಾರ್ಯವಾಗಬೇಕು. ಕಾರಣ ಗುರು ಪೂರ್ಣಿಮೆಯ ಈ ಶುಭ ಪರ್ವದಲ್ಲಿ ಅರಿವಿನ ಹಣತೆ ಹಚ್ಚೋಣ. ವಿದ್ಯಾ ವಿಶ್ವವ ಕಟ್ಟೋಣ ಎಂದು ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಶ್ರೀಮಠದ ಮೂಲ ತಾಣ ಅಶೋಕೆಯಲ್ಲಿ ಭಾನುವಾರ ವ್ಯಾಸಪೂಜೆ ನೆರವೇರಿಸಿ, ಚಾತುರ್ವಸ್ಯ ದೀಕ್ಷಾ ಬದ್ಧರಾದ ಶ್ರೀಗಳು ನಂತರ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು. ಇಂದು ನಮ್ಮ ದೇಶವನ್ನು ವಿಪತ್ತುಗಳೆಂಬ ಮೂರು ತಿಮಿರಾಂಧಕಾರಗಳು ಮುತ್ತಿಕೊಂಡಿವೆ. ಮೊದಲನೆಯದು ಕರೊನಾ ಎಂಬ ಅಂಧಕಾರ, ಎರಡನೆಯದು ಕರೊನಾದಿಂದ ದೇಶಕ್ಕೆ ಉಂಟಾದ ಆರ್ಥಿಕ ಸಂಕಟ. ಸಮಸ್ತ ದೇಶ ಇಂದು ತೀವ್ರವಾದ ಹಿಂಜರಿತಕ್ಕೆ ಸಿಲುಕಿ ಅಭಿವೃದ್ಧಿ ಕುಂಠಿತವಾಗಿದೆ. ಇವಿಷ್ಟು ಸಾಲದೆಂಬಂತೆ ಇದೇ ವೇಳೆ ಚೀನಾ ದೇಶದ ದುಸ್ಸಾಹಸಗಳು ದೇಶಕ್ಕೆ ಸವಾಲಾಗಿ ಪರಿಣಮಿಸಿವೆ. ಇವೆಲ್ಲವನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಗುರು ಪೂರ್ಣಿಮೆಯ ಈ ಪುಣ್ಯ ದಿನ ದೇಶಕ್ಕೆ ದಯಪಾಲಿಸಲಿ. ಈ ದೇಶವನ್ನು ಆವರಿಸಿದ ಈ ಎಲ್ಲ ತಿಮಿರಗಳು ಸುಜ್ಞಾನದ ಬೆಳಕಿನಿಂದ ನಾಶವಾಗಲಿ ಎಂದು ಶ್ರೀಗಳು ಹೇಳಿದರು.

    ಗುರುಕುಲ ಶಿಕ್ಷಣ: ದೇಶವನ್ನು ಮುತ್ತಿಕ್ಕುವ ಅಂಧಕಾರವನ್ನು ಇವತ್ತಿನ ಆಧುನಿಕ ಶಿಕ್ಷಣ ಪದ್ಧತಿಯಿಂದ ನಿವಾರಿಸಲು ಅಸಾಧ್ಯ ಎಂಬುದು ಹಲವು ನಿದರ್ಶನಗಳಿಂದ ಋಜುವಾತಾಗಿದೆ. ಈ ಕತ್ತಲನ್ನು ನಮ್ಮ ಸನಾತನವಾದ ಗುರುಕುಲ ಮಾದರಿ ಶಿಕ್ಷಣ ಮಾತ್ರ ಮರೆಯಾಗಿಸಲು ಸಾಧ್ಯ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀಮಠದ ವಿದ್ವಾನ್ ಕೆ. ಸತ್ಯನಾರಾಯಣ ಶರ್ಮ ಈ ವರ್ಷದ ವಿದ್ಯಾ ಚಾತುರ್ವಸ್ಯದ ಬಗ್ಗೆ ವಿವರಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಮೂಲಮಠ ಸಮಿತಿಯ ಡಿ.ಡಿ. ಶರ್ಮ ಮುಂತಾದವರು ನಿರ್ವಹಿಸಿದರು.

    ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳಿಂದ ಚಾತುರ್ವಸ್ಯ ಆರಂಭ
    ಹೊನ್ನಾವರ ತಾಲೂಕಿನ ರ್ಕ ದೈವಜ್ಞ ಮಠದ ಶ್ರೀ ಜ್ಞಾನೇಶ್ವರಿ ಪೀಠದಲ್ಲಿ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರು 35ನೇ ಚಾತುರ್ವಸ್ಯ ವ್ರತವನ್ನು ಭಾನುವಾರ ಆರಂಭಿಸಿದರು. ಶ್ರೀ ಜ್ಞಾನೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ಶ್ರೀಗಳು ವ್ಯಾಸಪೂಜೆ ನೆರವೇರಿಸಿದರು. ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ಸರಳವಾಗಿ ಧಾರ್ವಿುಕ ಆಚರಣೆಗಳನ್ನು ನಡೆಸಲಾಯಿತು. ಪಾದಪೂಜೆ, ವಿಶೇಷಪೂಜೆ, ಮಂತ್ರಾಕ್ಷತೆ ಮಂತಾದವುಗಳನ್ನು ನಿರ್ಬಂಧಿಸಲಾಗಿದ್ದು, ಯಾವುದೇ ರೀತಿಯ ಸನ್ಮಾನ, ಉತ್ಸವಗಳನ್ನು ನಡೆಸದೇ ಸರಳವಾಗಿ ಚಾತುರ್ವಸ್ಯ ಆರಂಭಿಸಲಾಯಿತು. ದೈವಜ್ಞ ಬ್ರಾಹ್ಮಣ ಸಮಾಜದ ಸಂಘಟನೆಗಳ ಪ್ರಮುಖರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಗಳು ಸೆ. 2ರವರೆಗೆ ಮಠದಲ್ಲಿ ಚಾತುರ್ವಸ್ಯ ವ್ರತಾಚರಣೆ ಅನುಷ್ಠಾನಗೊಳಿಸುವರು.

    ವೇದವ್ಯಾಸರನ್ನು ಪ್ರಾರ್ಥಿಸಬೇಕಿದೆ
    ಭಟ್ಕಳ:
    ಧರ್ಮದ ಸಾರ, ತತ್ತ್ವ, ವೇದದ ತಾತ್ಪರ್ಯವನ್ನು ಬ್ರಹ್ಮ ಸೂತ್ರದಲ್ಲಿ ರಚಿಸಿ ಎಲ್ಲರಿಗೂ ಸರಳವಾಗಿ ಅರ್ಥವಾಗಿಸುವಂತೆ ಮಾಡಿದವರು ಭಗವಾನ್ ಶ್ರೀ ವೇದವ್ಯಾಸರು ಎಂದು ಚಿತ್ರಾಪುರ ಮಠಾಧೀಶ ಶ್ರೀಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು. ಶಿರಾಲಿಯ ಚಿತ್ರಾಪುರ ಮಠದಲ್ಲಿ ಭಾನುವಾರ ಚಾತುರ್ವಸ್ಯ ವ್ರತದ ಪೂಜಾ ವಿಧಿವಿಧಾನಗಳನ್ನು ನಿರ್ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ವೇದದ ತಾತ್ಪರ್ಯ ಜ್ಞಾನದಲ್ಲಿದೆ. ಇದನ್ನು ಬ್ರಹ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಎಂದರು.

    ಕರೊನಾ ಕಂಟಕ ಭೂಮಂಡಲವನ್ನು ಇನ್ನಿಲ್ಲದಂತೆ ಹಿಂಡುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ಭಗವಾನ್ ವೇದವ್ಯಾಸರನ್ನು ಪ್ರಾರ್ಥಿಸಬೇಕಿದೆ. ತನ್ಮಯತೆ, ಏಕಾಗ್ರತೆಯಿಂದ ಜಪ, ತಪದಲ್ಲಿ ಮಗ್ನರಾದರೆ ದೇವ-ಮಾನವರ ಸಂಬಂಧ ಹತ್ತಿರವಾಗುತ್ತದೆ. ಪ್ರಾರ್ಥಿಸುವಾಗ ಅನುಸಂದಾನ, ವ್ಯವಹರಿಸುವಾಗ ಅನುಸ್ಮರಣೆ ಮಾಡಬೇಕು. ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ದೇವರ ಪೂಜೆ, ಅನುಷ್ಠಾನಗಳನ್ನು ವೀಕ್ಷಿಸುವ ಪರಿಪಾಠ ಹೆಚ್ಚುತ್ತಿದೆ. ಸಾಧವಾದಷ್ಟು ಅನುವು ಮಾಡಿಕೊಂಡು ಜಾಗೃತ ಶಕ್ತಿಯ ಅನುಭವ ಪಡೆಯಬೇಕು ಎಂದರು. ಇದೆ ಮೊದಲ ಬಾರಿಗೆ ಅಂತರ್ಜಾಲದಲ್ಲಿ ಶ್ರೀಗಳ ಚಾತುರ್ವಸ್ಯ ವ್ರತದ ಪೂಜಾ ವಿಧಿವಿಧಾನಗಳನ್ನು, ಮಠದ ಕಾರ್ಯಕ್ರಮಗಳನ್ನು ಭಕ್ತರು ವೀಕ್ಷಿಸಿದರು. ಮಠದ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ ಹಾಗೂ ಮಠದ ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಆಚರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts