More

    ಜೆಡಿಎಸ್,ಬಿಜೆಪಿ ಮೈತ್ರಿ :ಬೇರೆ ಯುವಕನ ಮದುವೆಗಾಗಿ ನಾವುಗಳು ಓಡಾಡಬೇಕು

    ಹಾಸನ: ಮಂಡ್ಯ, ಹಾಸನ ಹಾಗು ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡಬೇಕಾಗಿದೆ. ಬೇರೆ ಯುವಕನ ಮದುವೆಗಾಗಿ ನಾವುಗಳು ಓಡಾಡಬೇಕಿದೆ ಎಂದು ಮಾಜಿ ಶಾಸಕ ಎಸ್.ಎ.ರಾಮದಾಸ್ ವ್ಯಂಗ್ಯವಾಗಿ ಹೇಳಿದರು.
    ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಬಿಜೆಪಿ ವಿವಿಧ ಮಂಡಲಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂರು ಜಿಲ್ಲೆಯ ಕಾರ್ಯಕರ್ತರಿಗೆ ಇದು ಕಷ್ಟದ ಕೆಲಸ ಎಂಬುದು ನಮಗೂ ಗೊತ್ತಿದೆ. ಈ ವಿಚಾರವಾಗಿ ಪ್ರೀತಂ ಜೆ.ಗೌಡ ಅವರನ್ನು ಮನವೊಲಿಸಿದ್ದು ಪ್ರಚಾರದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ ಎಂದರು.
    ಆರ್ಟಿಕಲ್ 370 ರದ್ದುಗೊಳಿಸಿದ ಸವಿನೆನಪಿಗಾಗಿ ಲೋಕಸಭೆಯಲ್ಲಿ ಬಿಜೆಪಿ ಸ್ವತಂತ್ರವಾಗಿ 370 ಸೀಟು ಗೆಲ್ಲಬೇಕು, ಎನ್‌ಡಿಎ ಮೈತ್ರಿಯಡಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಸ್ಥಳೀಯವಾಗಿ ಜೆಡಿಎಸ್ ಪರ ಕೆಲಸ ಮಾಡುವುದು ಬೇಸರ ತರಿಸುತ್ತದೆ. ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡುವಾಗ ಜೆಡಿಎಸ್‌ನವರು ಕರಪತ್ರ ಕೊಟ್ಟರೆ ಅದನ್ನೂ ಹಂಚಬೇಕು. ನಮ್ಮ ಉದ್ದೇಶ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬುದಷ್ಟೇ ಆಗಿರಬೇಕು ಎಂದು ಹೇಳಿದರು.
    ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮೆಲ್ಲರ ಉದ್ದೇಶವಾಗಿದ್ದು, 10 ವರ್ಷಗಳ ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ಮನದಟ್ಟು ಮಾಡಬೇಕು. ಲೋಕಸಭೆ ಚುನಾವಣೆಯ ಸ್ಟಾರ್ ಪ್ರಚಾರಕರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಬಿಜೆಪಿಯ ಇತರ 25 ಕ್ಷೇತ್ರಗಳಿಗೂ ಅವರು ಪ್ರಚಾರಕ್ಕೆ ಬರುತ್ತಾರೆ. ಆದ್ದರಿಂದ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡುವಂತೆ ಸಲಹೆ ನೀಡಿದರು.
    ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಕಾಂಗ್ರೆಸ್ ಸರ್ಕಾರ ಪತನವಾಗಿ ವಿಧಾನಸಭೆ ಚುನಾವಣೆ ಘೋಷಣೆಯಾದರೂ ಅಚ್ಚರಿಯಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳು ಹತ್ತಿರ ಇರುವುದರಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇದ್ದು, ಸಣ್ಣ ಕಾರಣಕ್ಕೆ ಅವಕಾಶ ಕೈಚೆಲ್ಲುವುದು ಬೇಡ ಎಂದರು.
    ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಮಾತನಾಡಿ, ಅತಿಯಾದ ಆತ್ಮವಿಶ್ವಾಸ ಮನುಷ್ಯನನ್ನು ಸೋಲಿನ ದವಡೆಗೆ ಸಿಲುಕುತ್ತದೆ. ಮೋದಿ ಮತ್ತೊಮ್ಮೆ ಗೆಲ್ಲುತ್ತಾರೆಂಬ ವಿಶ್ವಾಸ ಎಲ್ಲರಿಗೂ ಇದೆ. ಆದರೆ ಅತಿಯಾದ ಆತ್ಮವಿಶ್ವಾಸ ನಮ್ಮ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತದೆ. ಅಟಲ್ ಬಿಹಾರಿ ವಾಜಪೇಯಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದರೂ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಮೈಮರೆವಿನ ಫಲ ಘೋರ ಭೀಕರವಾಗಿರುತ್ತದೆ. ಮಾಜಿ ಶಾಸಕ ಪ್ರೀತಂ ಗೌಡರಿಗೆ ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದು, ಅವರನ್ನ ಮನವೊಲಿಸುತ್ತೇವೆ. ಜೆಡಿಎಸ್‌ನವರು ಯಾರನ್ನ ಅಭ್ಯರ್ಥಿ ಮಾಡುತ್ತಾರೋ ಅವರಿಗೆ ಬೆಂಬಲಿಸೋಣ. ಮೋದಿ ಪರ ಕೈ ಎತ್ತುವವರಿಗೆ ಬೆಂಬಲ ನಿಡೋಣ. ಮುಂದಿನ ಒಂದು ತಿಂಗಳು ಬಿಜೆಪಿ ಕಾರ್ಯಕರ್ತರು ದೇಶಕ್ಕಾಗಿ ದಿನಕ್ಕೆ 12 ರಿಂದ 13 ಗಂಟೆ ಕೆಲಸ ಮಾಡಬೇಕು ಎಂದರು.
    ಸಭೆಯಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ ನಾಗೇಂದ್ರ, ಮಾಜಿ ಅಧ್ಯಕ್ಷ ಬಿ.ಹೆಚ್.ರೇಣುಕುಮಾರ್, ಚುನಾವಣಾ ನಿರ್ವಹಣಾ ಸಮಿತಿ ಜಿಲ್ಲಾ ಸಂಚಾಲಕ ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ವೇಣುಗೋಪಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts