More

    ಜೀವಾತ್ಮ-ಪರಮಾತ್ಮ ಭಾವದ ಮಿಲನವೇ ಯೋಗ : ತ್ಯಾಗೀಶ್ವರಾನಂದಜೀ ಮಹರಾಜ್

    ದಾವಣಗೆರೆ: ನಮ್ಮಲ್ಲಿನ ಜೀವಾತ್ಮ ಭಾವದಿಂದ ಪರಮಾತ್ಮ ಭಾವದೊಂದಿಗೆ ಕೂಡುವುದೇ ಯೋಗ ಮಾರ್ಗವಾಗಿದೆ ಎಂದು ನಗರದ ರಾಮಕೃಷ್ಣ ಮಿಷನ್‌ನ ಶ್ರೀ ಸ್ವಾಮಿ ತ್ಯಾಗೀಶ್ವರಾನಂದಜೀ ಮಹರಾಜ್ ತಿಳಿಸಿದರು.

    ನಗರದ ಆದರ್ಶ ಯೋಗ ಪ್ರತಿಷ್ಠಾನದಿಂದ ಮಹಾಮಾಯಿ ವಿಶ್ವಯೋಗ ಮಂದಿರದಲ್ಲಿ ಬುಧವಾರ, ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ‘ನಿತ್ಯ ಜೀವನದಲ್ಲಿ ಯೋಗ ಮತ್ತು ಧ್ಯಾನದ ಅವಶ್ಯಕತೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
    ಯೋಗ ಪದದ ಅರ್ಥ ಅಗಾಧವಾದುದು. ಇವುಗಳಲ್ಲಿ ನಾಲ್ಕು ಯೋಗ ಮಾರ್ಗಗಳು ನಮ್ಮ ಜೀವನಕ್ಕೆ ಹತ್ತಿರವಾಗಿವೆ. ಜ್ಞಾನ ಯೋಗ, ಭಕ್ತಿಯೋಗ, ರಾಜಯೋಗ, ಕರ್ಮಯೋಗಗಳಿಂದ ನಾವು ಸಾಧನೆಯ ಮಾರ್ಗದಲ್ಲಿ ಸಾಗಬಹುದು. ನಮ್ಮ ಸ್ವಭಾವಕ್ಕೆ ತಕ್ಕಂತೆ ಯೋಗ ಮಾಡಬೇಕು ಎಂದು ಹೇಳಿದರು.
    ಭಕ್ತಿ ಯೋಗದಿಂದ ಭಗವಂತನೊಂದಿಗೆ ಸುಲಭವಾಗಿ ಶರಣಾಗತಿ ಭಾವವನ್ನು ಹೊಂದಬಹುದು. ನಾವು ದೇವರಲ್ಲಿ ನಂಬಿಕೆ ಇಡದಿದ್ದರೂ ಪರವಾಗಿಲ್ಲ. ನಮ್ಮ ಬಗ್ಗೆ ನಂಬಿಕೆ ಹೊಂದಬೇಕು. ಇದರಿಂದ ನಾವು ಪರಮಾತ್ಮನಲ್ಲಿ ಸಮರ್ಪಣೆ ಮಾಡಿಕೊಳ್ಳಬಹುದು. ನಾವು ಹೇಗಿರಬೇಕು, ಏನು ಮಾಡಬೇಕೆಂಬ ಅರಿವೇ ನಮಗೆ ಸರಿದಾರಿ ತೋರಿಸಬಲ್ಲದು ಎಂದು ತಿಳಿಸಿದರು.
    ಯೋಗಾಭ್ಯಾಸ ಮಾಡುವ ಮುನ್ನ ನಮ್ಮೊಳಗೆ ಕೃಷಿ ಮಾಡಿಕೊಳ್ಳಬೇಕು. ಆಗ ಎತ್ತರಕ್ಕೆ ಬೆಳೆಯುತ್ತೇವೆ. ನಮ್ಮೊಳಗಿನ ಬೇಕು-ಬೇಡಗಳನ್ನು ಗಮನಿಸಿ ಶಾಂತ ಮನಸ್ಸಿನಿಂದ ಯೋಚಿಸಿ ಧ್ಯಾನಿಸಿದಾಗ ಮನಸ್ಸು ಹಗುರವಾಗುತ್ತದೆ. ಅಹಂ ಬಿಟ್ಟು ಯೋಚಿಸಿದಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದು ಧ್ಯಾನದಿಂದ ಸಾಧ್ಯವಾಗುತ್ತದೆ. ನಮ್ಮನ್ನು ನಾವು ನಿಗ್ರಹಿಸಿಕೊಳ್ಳುವುದೇ ಯೋಗ. ಎಂದು ವಿವರಿಸಿದರು.
    ಅಗ್ನಿಹೋತ್ರ ಹೋಮ ಬಳಿಕ ಶಿಷ್ಟಾಚಾರದಂತೆ ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು. ಕಾರ್ಯಕ್ರಮದಲ್ಲಿ ಯೋಗಗುರು ಡಾ.ರಾಘವೇಂದ್ರ ಗುರೂಜಿ, ಯೋಗ ಶಿಕ್ಷಕ ವಿ. ಲಲಿತ್‌ಕುಮಾರ್ ಜೈನ್, ವಿಶ್ವನಾಥಯ್ಯ, ಸಲಹೆಗಾರ ಎಚ್.ಮಂಜುನಾಥ್, ಬಾಳೆಎಲೆ ವ್ಯಾಪಾರಿ ರುದ್ರೇಶ್, ಭಾಗ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts