More

    ಜೀಪಿಗೆ ಲಾರಿ ಡಿಕ್ಕಿಯಾಗಿ 8 ಮಂದಿ ದುರ್ಮರಣ. ಸ್ಥಳದಲ್ಲೇ 6 ಜನ, ಆಸ್ಪತ್ರೆಯಲ್ಲಿ ಇಬ್ಬರು ಸಾವು, ಮದನಪಲ್ಲಿ-ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ದುರಂತ

    ಚಿಕ್ಕಬಳ್ಳಾಪುರ/ಚಿಂತಾಮಣಿ: ಮದನಪಲ್ಲಿ-ಚಿಂತಾಮಣಿ ಹೆದ್ದಾರಿಯ ಮರಿನಾಯಕನಹಳ್ಳಿ ಸಮೀಪ ಭಾನುವಾರ ಸಂಜೆ ಸಿಮೆಂಟ್ ಲಾರಿ ಮತ್ತು ಜೀಪಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು 8 ಮಂದಿ ಮೃತಪಟ್ಟು, 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜೀಪಿನ ಚಾಲಕ ರಾಯಲ್ಪಾಡು ರಮೇಶ್ (49), ಸೊಣ್ಣಶೆಟ್ಟಹಳ್ಳಿಯ ನಾರಾಯಣಸ್ವಾಮಿ (60), ಗೌಪಲ್ಲಿಯ ಮುನಿರತ್ನ (50), ಆಂಧ್ರದ ಮದನಪಲ್ಲಿಯ ವೆಂಕಟಲಕ್ಷ್ಮಮ್ಮ (45), ಬೆಂಗಳೂರಿನ ಮುನಿಕೃಷ್ಣ (40), ಶ್ರೀನಿವಾಸಪುರ ತಾಲೂಕಿನ ಕುಸಂದ್ರದ ನಿಖಿಲ್ (35), ಬಳ್ಳಾರಿ ಜಿಲ್ಲೆಯ ಕೂಳಗಿಯ ಜೆಸಿಬಿ ಆಪರೇಟರ್ ರಾಜಪ್ಪ (28), ಈತನ ಪತ್ನಿ ಮೌನಿಕಾ (25)ಮೃತಪಟ್ಟಿದ್ದಾರೆ.

    ಗಾಯಗೊಂಡವರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ತಾಲೂಕಿನ ತಾಡಿಗೋಲಿ ಕ್ರಾಸ್‌ನಿಂದ ಚಿಂತಾಮಣಿಗೆ ಪ್ರಯಾಣಿಕರನ್ನು ಕರೆತರುತ್ತಿದ್ದ ಜೀಪಿಗೆ, ಬೆಂಗಳೂರಿನಿಂದ ಮದನಪಲ್ಲಿಗೆ ಸಿಮೆಂಟ್ ಸಾಗಿಸುತ್ತಿದ್ದ ಆಂಧ್ರದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ನಾಲ್ವರ ಪರಿಸ್ಥಿತಿ ಗಂಭೀರ: ಶ್ರೀನಿವಾಸಪುರ ತಾಲೂಕಿನ ನಂಬವಾರಿಪಲ್ಲಿಯ ಸತ್ಯಪ್ಪ (50), ಸೋಮಕಲಹಳ್ಳಿ ವೆಂಕಟಲಕ್ಷ್ಮಮ್ಮ (55), ರಾಯಲ್ಪಾಡುವಿನ ಕಸ್ತೂರಮ್ಮ (42), ಬೆಂಗಳೂರಿನ ಕೆ.ಆರ್.ಪುರಂನ ಅಂಬರೀಷ್ (38), ಚಿಂತಾಮಣಿ ತಾಲೂಕಿನ ಕೊಂಡವೆನಕಪಲ್ಲಿಯ ಕೃಷ್ಣಮ್ಮ(48), ಶಿಡ್ಲಘಟ್ಟ ತಾಲೂಕಿನ ದಿಬ್ಬೂರು ಹಳ್ಳಿಯ ಯಶೋಧಮ್ಮ (52), ಮಣಿಗಾನಹಳ್ಳಿಯ ವೆಂಕಟಲಕ್ಷ್ಮಮ್ಮ(53), ಮಣಿಗಾನಪಲ್ಲಿ ಮೌನೇಶ್ (8), ಮಂಜುಳಾ (32), ಒಂದು ವರ್ಷದ ಹೆಣ್ಣು ಮಗು ಮತ್ತು 30 ವರ್ಷದ ವ್ಯಕ್ತಿ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಜೀಪಿನಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

    ಚೆಲ್ಲಾಪಿಲ್ಲಿಯಾಗಿ ಬಿದ್ದರು: ಡಿಕ್ಕಿಯ ರಭಸಕ್ಕೆ ಜೀಪಿನ ಟಾಪ್ ಕಿತ್ತು ಬಂದಿದೆ. ಇಬ್ಬರು ಮಕ್ಕಳು ಸೇರಿ 14 ಮಂದಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು. 6 ಮೃತದೇಹಗಳ ನಡುವೆ ಕೈ ಕಾಲು ಮುರಿದುಕೊಂಡು 8 ಮಂದಿ ನರಾಳುಡುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ 3 ಆಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಚಿಂತಾಮಣಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಆತಂಕದಲ್ಲಿ ಆಸ್ಪತ್ರೆಗೆ ಬಂದ ಸಂಬಂಧಿಕರು: ಸಂಬಂಧಿಕರು ತೆರಳುತ್ತಿದ್ದ ಜೀಪು ಅಪಘಾತಕ್ಕೆ ತುತ್ತಾಗಿದೆ ಎಂಬುದನ್ನು ತಿಳಿದ ಕುಟುಂಬ ಸದಸ್ಯರು ಆಸ್ಪತ್ರೆಗೆ ಬಂದರು. ತಮ್ಮವರ ನಿಧನದ ವಿಚಾರ ಅರಿಗೆ ಬರುತ್ತಿದ್ದಂತೆ ದುಃಖದ ಕಟ್ಟೆ ಒಡೆದು ರೋದಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

    ನಿಯಮ ಉಲ್ಲಂಘಿಸಿ ಪ್ರಯಾಣಿಕರ ಸಾಗಾಟ: ಜೀಪು ಪ್ರಯಾಣಿಕರ ಸಾಗಾಟಕ್ಕೆ ಅನುಮತಿ ಪಡೆದಿರಲಿಲ್ಲ. ವೈಟ್ ಬೋರ್ಡ್ ಹಾಕಿಕೊಂಡೇ ಶ್ರೀನಿವಾಸಪುರ ಮತ್ತು ಚಿಂತಾಮಣಿ ಮಾರ್ಗವಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ನಿಗದಿತ ಸಂಖ್ಯೆಗಿಂತಲೂ ಹೆಚ್ಚಿನ ಜನರನ್ನು ಹತ್ತಿಸಿಕೊಳ್ಳಲಾಗಿತ್ತು.

    ಲಕ್ಷ್ಮೀಪುರ ಕ್ರಾಸ್‌ನಲ್ಲಿ ಜೀಪ್ ಹತ್ತಿ ಚಿಂತಾಮಣಿಗೆ ಹೋಗುತ್ತಿದ್ದೆ. ಮರಿನಾಯಕನಹಳ್ಳಿ ಬಳಿ ಇದ್ದಕ್ಕಿದ್ದಂತೆ ಲಾರಿ ಡಿಕ್ಕಿ ಹೊಡೆಯಿತು. ನಂತರ ಏನಾಯಿತೋ ಗೊತ್ತಾಗಲಿಲ್ಲ. ರಸ್ತೆಯಲ್ಲಿಯೇ ಬಿದ್ದಿದ್ದ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ್ರು.
    ಗಾಯಾಳು

    ಶಾಸಕರ ಭೇಟಿ: ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾಜಿ ಸ್ಪೀಕರ್, ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್, ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾಹಿತಿ ಪಡೆದರು. ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷ್ಣಾರೆಡ್ಡಿ ತಿಳಿಸಿದರು.

    ಮಾಹಿತಿ ನೀಡಿದ ಮಾಲೂರು ಶಾಸಕ: ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದ ಮಾಲೂರು ಶಾಸಕ ವೈ.ಎ.ನಂಜೇಗೌಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಮರಿನಾಯಕನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದರ ಜತೆಗೆ ಗಾಯಾಳುಗಳನ್ನು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಾಯಿತು ಎಂದು ಶಾಸಕರು ತಿಳಿಸಿದರು.

    ಡಿಕ್ಕಿ ಹೊಡೆದ ತಕ್ಷಣ ಲಾರಿಯೊಳಗಿದ್ದ ಚಾಲಕ ಓಡಿ ಹೋದ. ಜೀಪಿನ ಹತ್ತಿರ ಬಂದು ನೋಡಿದಾಗ 6 ಮಂದಿ ಮೃತಪಟ್ಟಿದ್ದರು. ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
    ರಮೇಶ್, ಪ್ರತ್ಯಕ್ಷದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts