More

    ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಪ್ರಾಣವಾಯು ಚಿಂತೆ

    ಗದಗ: ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ತೀವ್ರ ಕೊರತೆ ಇತ್ತು. ಆಕ್ಸಿಜನ್ ಕೊರತೆಯಿಂದ ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಣಾಮ ಎಚ್ಚೆತ್ತ ಜಿಲ್ಲಾಡಳಿತ, ನಿತ್ಯ ಬೇಕಾಗುವಷ್ಟು ಆಕ್ಸಿಜನ್ ತರಿಸಿಕೊಳ್ಳುತ್ತಿದೆಯಾದರೂ ಕೊರತೆ ಪೂರ್ಣ ಪ್ರಮಾಣದಲ್ಲಿ ನೀಗಿಲ್ಲ.

    ಜಿಲ್ಲೆಯಲ್ಲಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್್ಸ), ಮುಂಡರಗಿ, ನರಗುಂದ, ರೋಣ, ಗಜೇಂದ್ರಗಡ, ಶಿರಹಟ್ಟಿ, ಲಕ್ಷೆ್ಮೕಶ್ವರ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು ಎಂಟು ಸರ್ಕಾರಿ ಆಸ್ಪತ್ರೆಗಳು ಹಾಗೂ ಗದಗ ನಗರದಲ್ಲಿ 12 ಮತ್ತು 1 ಲಕ್ಷೆ್ಮೕಶ್ವರ ಹಾಗೂ 13 ಖಾಸಗಿ ಸೇರಿದಂತೆ ಜಿಲ್ಲೆಯ 21 ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ನಿತ್ಯ 13ರಿಂದ 14 ಟನ್ ಆಮ್ಲಜನಕದ ಅವಶ್ಯಕತೆ ಇದೆ.

    ಸದ್ಯ ಸರ್ಕಾರಿ ಆಸ್ಪತ್ರೆಗಳಿಗೆ ನಾಲ್ಕು ಏಜೆನ್ಸಿಗಳು ಆಕ್ಸಿಜನ್ ಪೂರೈಸುತ್ತಿವೆ. ಬಳ್ಳಾರಿ ಜಿಲ್ಲೆಯ ತೋರಣಗಲ್​ನಿಂದ ಧಾರವಾಡ ಗ್ಯಾಸ್ ಇಂಡಸ್ಟ್ರೀಸ್​ಗೆ ಆಕ್ಸಿಜನ್ ಪೂರೈಕೆಯಾಗುತ್ತದೆ. ಅಲ್ಲಿಂದ ನಗರದ ಜಿಮ್್ಸ ಹಾಗೂ ಇತರೆ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರು ಅವಶ್ಯಕತೆಗೆ ತಕ್ಕಂತೆ ನೇರವಾಗಿ ಆಕ್ಸಿಜನ್ ತರಿಸಿಕೊಳ್ಳುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್​ಗಳ ಸಂಖ್ಯೆ (550ಕ್ಕೂ ಹೆಚ್ಚು ) ಹೆಚ್ಚಿರುವುದರಿಂದ ಆಕ್ಸಿಜನ್ ಸಹ ಹೆಚ್ಚು ಬೇಕಾಗಿದೆ. ಧಾರವಾಡ ಗ್ಯಾಸ್ ಇಂಡಸ್ಟ್ರೀಸ್ ಜತೆಗೆ ಕೊಪ್ಪಳ ಜಿಲ್ಲೆಯ ಗಿಣಗೇರಾದ ಗದಗ ಆಕ್ಸಿಜನ್ ಪ್ರೖೆವೇಟ್ ಲಿಮಿಟೆಡ್, ರುಕ್ಮಿಣ ಆಕ್ಸಿಜನ್ ಪ್ರೖೆ ಲಿಮಿಡೆಟ್ ಹಾಗೂ ಕೊಪ್ಪಳದ ಎಂಎಸ್​ಪಿಎಲ್ ನಿಂದ ಆಕ್ಸಿಜನ್ ತರಿಸಿಕೊಳ್ಳಲಾಗುತ್ತಿದೆ. ಈ ನಾಲ್ಕು ಏಜೆನ್ಸಿಗಳಿಂದ 14ರಿಂದ 15 ಟನ್ ಆಮ್ಲಜನಕ ಪೂರೈಕೆಯಾಗುತ್ತಿದೆ. ಸದ್ಯಕ್ಕೆ ಲಭ್ಯವಿರುವ ಆಕ್ಸಿಜನ್​ನಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೇಸ್​ಗಳ ಸಂಖ್ಯೆ ಹೆಚ್ಚಾದರೆ ಮತ್ತಷ್ಟು ಆಕ್ಸಿಜನ್ ಬೇಕಾಗಬಹುದು ಎಂದು ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಖಾಸಗಿ ಆಸ್ಪತ್ರೆಯವರು ಸಹ ನೇರವಾಗಿ ಏಜೆನ್ಸಿಯೊಂದಿಗೆ ಆಕ್ಸಿಜನ್ ಖರೀದಿಸಿ ಬಳಕೆ ಮಾಡುತ್ತಿದ್ದಾರೆ. ಆಕಸ್ಮಾತ್ ಖಾಸಗಿ ಆಸ್ಪತ್ಸೆಗಳಿಗೆ ಆಕ್ಸಿಜನ್ ಕೊರತೆ ಕಂಡುಬಂದರೆ ಸರ್ಕಾರಿ ಆಸ್ಪತ್ರೆಗಳಿಗೆ ಬೇಕಿರುವ ಆಮ್ಲಜನಕ ಇಟ್ಟುಕೊಂಡು ಹೆಚ್ಚುವರಿ ಆಕ್ಸಿಜನ್ ಅವರಿಗೆ ನೀಡುತ್ತೇವೆ. ಸರ್ಕಾರಿ ಆಸ್ಪತ್ತೆಗಳಿಗೆ ತೊಂದರೆ ಮಾಡಿಕೊಂಡು ರಿಸ್ಕ್ ಮೈಮೇಲೆ ಎಳೆದುಕೊಂಡು ಯಾವುದೇ ಕಾರಣಕ್ಕೂ ಆಕ್ಸಿಜನ್ ಕೊಡಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. ಅಲ್ಲದೆ, ಅಗತ್ಯಕ್ಕೆ ಅನುಸಾರವಾಗಿ ಮಿತವಾಗಿ ಆಕ್ಸಿಜನ್ ಬಳಸಬೇಕು ಎಂಬ ಸೂಚನೆಯನ್ನು ವೈದ್ಯರಿಗೆ ಜಿಲ್ಲಾಡಳಿತ ನೀಡಿದೆ.

    ಇದಲ್ಲದೆ, ಇತ್ತೀಚೆಗೆ ಬೆಂಗಳೂರು ಮೂಲದ ಯುನೈಟೆಡ್ ವೇ ಎಂಬ ಸಂಸ್ಥೆಯೊಂದು ಜಿಲ್ಲೆಗೆ 100 ಜಂಬೋ ಸಿಲಿಂಡರ್ ನೀಡಿದೆ. ಸ್ಥಳೀಯ ಕೈಗಾರಿಕೆಗಳಿಂದಲೂ ಆಕ್ಸಿಜನ್ ಪಡೆದುಕೊಳ್ಳುವ ಪ್ರಯತ್ನ ಮುಂದುವರಿದಿದೆ.

    ಗದಗ ಜಿಲ್ಲೆಯಲ್ಲಿ ಒಟ್ಟು 5890 ಎಲ್​ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ ದೊರೆತಿದೆ. ಗದಗ ನಗರದ ಜಿಮ್್ಸ ಆವರಣದಲ್ಲಿ ಕೇಂದ್ರ ಗಣಿ ಭೂ ವಿಜ್ಞಾನ ಇಲಾಖೆಯಿಂದ 1000 ಎಲ್​ಪಿಎಂ (ಲೀಟರ್ ಪರ್ ಮಿನಿಟ್), ರಾಜ್ಯ ಸರ್ಕಾರದಿಂದ ಗದಗದಲ್ಲಿ 1500 ಎಲ್​ಪಿಎಂ, ನರಗುಂದಕ್ಕೆ 390 ಎಲ್​ಪಿಎಂ ಸೇರಿ ಒಟ್ಟು 2890 ಎಲ್​ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಹಸಿರು ನಿಶಾನೆ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಅಲ್ಲದೆ, ಇದನ್ನು ಹೊರತುಪಡಿಸಿ ಗದಗ ನಗರದಲ್ಲಿ 3000 ಎಲ್​ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಬಹುತೇಕ ಒಪ್ಪಿಗೆ ನೀಡಿದೆ.

    | ಸಿ.ಸಿ.ಪಾಟೀಲ

    ಜಿಲ್ಲಾ ಉಸ್ತುವಾರಿ ಸಚಿವ

    ದಾಸ್ತಾನಿಟ್ಟುಕೊಳ್ಳಲು ಶಾಸಕ ಎಚ್.ಕೆ. ಪಾಟೀಲ ಸಲಹೆ

    ಗದಗ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಹಾಗೂ ಸೌಲಭ್ಯ ಒದಗಿಸುವ ವಿಷಯದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ, ನಿಧಾನಗತಿಯ ಕಾರ್ಯವೈಖರಿ ಖಂಡಿಸಿ ಶಾಸಕ ಎಚ್.ಕೆ. ಪಾಟೀಲ ಅವರು ಸಚಿವ ಸಿ.ಸಿ.ಪಾಟೀಲ ಅವರಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದರೆ ಅವಘಡ ಸಂಭವಿಸುವ ಸಾಧ್ಯತೆಗಳಿದ್ದು, ಕೂಡಲೇ ಜಿಲ್ಲಾಡಳಿತ ಹೆಚ್ಚುವರಿ ಆಕ್ಸಿಜನ್ ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಜಿಲ್ಲಾಡಳಿತ ಭವನದಲ್ಲಿ ಮೇ 3ರಂದು ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಗೆ ಅಗತ್ಯವಿರುವ ಪ್ರಮುಖ 12 ಸಲಹೆಗಳನ್ನು ನೀಡಲಾಗಿತ್ತು. ಸರ್ಕಾರ ನೀಡಿರುವ ವೆಂಟಿಲೇಟರ್​ಗಳಿಗೆ ಕನೆಕ್ಟರ್​ಗಳಿಲ್ಲ. ಹೀಗಾಗಿ ಕಳೆದ ಆರು ದಿನಗಳಿಂದ 25 ವೆಂಟಿಲೇಟರ್​ಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ವೆಂಟಿಲೇಟರ್ ಇಲ್ಲದೆ ಹತ್ತಾರು ಜನ ಸಾವಿಗೀಡಾಗಿದ್ದಾರೆ. ಆಕ್ಸಿಜನ್ ವಿಷಯವಂತೂ ಭಾರಿ ಗೊಂದಲಮಯವಾಗಿದೆ. ಜಿಲ್ಲೆಗೆ ಎಷ್ಟು ಆಕ್ಸಿಜನ್ ಬೇಕೋ ಅಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಿಕೊಳ್ಳಲು ಗಂಭೀರ ಪ್ರಯತ್ನ ನಡೆದಿಲ್ಲ. ಸರ್ಕಾರ ಆಕ್ಸಿಜನ್ ಹಂಚಿಕೆಯಲ್ಲಿ ಗದಗ ಜಿಲ್ಲೆಯನ್ನು ಕಡೆಗಣಿಸಿದೆ. 70 ಕಿಮೀ ದೂರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವಿದ್ದರೂ ನಮಗೆ ಬೇಕಾದ ಕೇವಲ 15ರಿಂದ 20 ಟನ್ ಆಕ್ಸಿಜನ್ ದೊರೆಯುತ್ತಿಲ್ಲ. ಪ್ರತಿದಿನ ಆಕ್ಸಿಜನ್ ಕೊರತೆಯಿಂದ ಹಾಗೂ ಸೂಕ್ತ ಸಮಯಕ್ಕೆ ಬೆಡ್ ಸಿಗದ ಕಾರಣ ನಿತ್ಯವೂ ಹಲವಾರು ಜನ ಮೃತಪಡುತ್ತಿದ್ದಾರೆ. ಪ್ರತಿದಿನ ನಮಗೆ 18 ರಿಂದ 20 ಟನ್ ಆಕ್ಸಿಜನ್ ಒದಗಿಸದೇ ಹೋದರೆ ಗದಗ ಜಿಮ್್ಸ, ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟೆ ಏಕೆ, ಆಕ್ಸಿಜನ್, ಬೆಡ್ ಸಿಗದೆ ಆಸ್ಪತ್ರೆ ಆವರಣದಲ್ಲಿಯೇ ಸೋಂಕಿತರು ಸಾವಿಗೀಡಾಗಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ದಯವಿಟ್ಟು ಅಗತ್ಯ ಪೂರೈಕೆಯನ್ನು ತುರ್ತಾಗಿ ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಪತ್ರದ ಮೂಲಕ ಸಚಿವರಿಗೆ ಕೋರಿದ್ದಾರೆ.

    ಉತ್ಪಾದನಾ ಘಟಕ ಶೀಘ್ರ ಆರಂಭಿಸಿ

    ಜಿಲ್ಲೆಯಲ್ಲಿ 5890 ಎಲ್​ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ ದೊರೆತಿದೆ ಎಂದು ಸಚಿವ ಸಿ.ಸಿ.ಪಾಟೀಲ ಇತ್ತೀಚೆಗೆ ಹೇಳಿದ್ದಾರೆ. ಜನರ ಪ್ರಾಣ ಹೋದ ಮೇಲೆ ಘಟಕ ಸ್ಥಾಪಿಸುವುದರಲ್ಲಿ ಅರ್ಥವಿಲ್ಲ. ಕೂಡಲೇ ಘಟಕದ ಕಾಮಗಾರಿ ಆರಂಭಿಸಿ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಇದರ ಜತೆಗೆ ಇತ್ತೀಚೆಗೆ ಜಿಲ್ಲೆಗೆ ಬಂದಿರುವ ವೆಂಟಿಲೇಟರ್​ಗಳ ಅಳವಡಿಕೆ ಕಾರ್ಯ ಇದುವರೆಗೂ ಪೂರ್ಣಗೊಂಡಿಲ್ಲ. ವೆಂಟಿಲೇಟರ್​ಗಾಗಿ ಜನರು ಪರದಾಡುತ್ತಿದ್ದಾರೆ. ಆದ್ದರಿಂದ ಬೇಗನೆ ವೆಂಟಿಲೇಟರ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ ಸೋಂಕಿತರ ಪ್ರಾಣ ರಕ್ಷಣೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts