More

    ಜಿಲ್ಲೆಗೆ ಮರಳುವವರ ಕ್ವಾರಂಟೈನ್​ಗೆ ಸಿದ್ಧತೆ

    ಧಾರವಾಡ: ಲಾಕ್​ಡೌನ್​ನಿಂದ ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ವಿುಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಇತರ ಜನರು ರೈಲ್ವೆ ಇಲಾಖೆಯು ಆರಂಭಿಸಿರುವ ಶ್ರಮಿಕ ಎಕ್ಸ್​ಪ್ರೆಸ್ ವಿಶೇಷ ರೈಲುಗಳ ಮೂಲಕ ಮೇ 15ರಿಂದ 17ರವರೆಗೆ ಜಿಲ್ಲೆಗೆ ಆಗಮಿಸಲಿದ್ದಾರೆ. ಇವರೆಲ್ಲರ ವೈದ್ಯಕೀಯ ತಪಾಸಣೆ ಮತ್ತು ಸಾಂಸ್ಥಿಕ ಕ್ವಾರಂಟೈನ್​ಗಾಗಿ ಅಗತ್ಯ ಸಿದ್ಧತೆಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

    ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಿಂಧದುರ್ಗ- ವಿಜಯಪುರ, ದೆಹಲಿ- ಬೆಂಗಳೂರು ವಿಶೇಷ ಶ್ರಮಿಕ ಎಕ್ಸ್​ಪ್ರೆಸ್ ರೈಲು ಸೇರಿ ಇನ್ನು ಕೆಲವು ರೈಲುಗಳು ಅವಳಿನಗರದಲ್ಲಿ ನಿಲುಗಡೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ಜನರು ಸೇರಿ ನೆರೆಯ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಹುಬ್ಬಳ್ಳಿ ಮತ್ತು ಧಾರವಾಡ ರೈಲು ನಿಲ್ದಾಣಗಳಲ್ಲಿ ಇಳಿದುಕೊಳ್ಳಲಿದ್ದಾರೆ. ರೈಲು ಆರಂಭದ ಸ್ಥಳದಿಂದ ಹೊರಟ ಕೂಡಲೇ ಪ್ರಯಾಣಿಕರ ನಿಖರ ಸಂಖ್ಯೆ ಮತ್ತು ಜಿಲ್ಲೆಗಳ ವಿವರ ದೊರೆಯಲಿದೆ. ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳ ಜನರ ಪಟ್ಟಿ ಮತ್ತು ಸಂಖ್ಯೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅವರಿಗೆ ವಾಹನ ಏರ್ಪಾಟು ಮಾಡಬೇಕು ಎಂದರು.

    ಧಾರವಾಡ ಜಿಲ್ಲೆಯ ಪ್ರಯಾಣಿಕರನ್ನು ಅವಳಿನಗರದ ವಿವಿಧ ಸ್ವಾ್ಯಬ್ ಸಂಗ್ರಹಣಾ ಕೇಂದ್ರಗಳಿಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿ, ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸುವ ಕಾರ್ಯ ನಿರ್ವಹಿಸಲು ಸಾರಿಗೆ ಸಂಸ್ಥೆಯ ಬಸ್​ಗಳನ್ನು ಪಡೆಯಬೇಕು. ಇದಕ್ಕೆ ಅಗತ್ಯ ಸಿಬ್ಬಂದಿ, ವೈದ್ಯಕೀಯ ತಪಾಸಣಾ ತಂಡಗಳನ್ನು ರಚಿಸಿ ಅವರಿಗೆ ಸ್ವಯಂರಕ್ಷಣಾ ಸಾಮಗ್ರಿಗಳನ್ನು ಒದಗಿಸಿ ಮುಂಜಾಗ್ರತೆಯೊಂದಿಗೆ ಕರ್ತವ್ಯ ನಿರ್ವಹಿಸಲು ತಿಳಿವಳಿಕೆ ನೀಡಬೇಕು ಎಂದರು.

    ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ಅವಳಿನಗರದಲ್ಲಿ ಸ್ಥಾಪಿಸಲಾಗಿರುವ ಎಲ್ಲ ಸಾಂಸ್ಥಿಕ ಮತ್ತು ಹೋಟೆಲ್ ಕ್ವಾರಂಟೈನ್ ಕೇಂದ್ರಗಳಿಗೆ ಬೀಟ್ ಪೊಲೀಸರನ್ನು ನಿಯೋಜಿಸಲಾಗುವುದು. ಹೆಚ್ಚು ಪ್ರಯಾಣಿಕರು ಏಕಕಾಲಕ್ಕೆ ಬರುವುದರಿಂದ ರೈಲು ನಿಲ್ದಾಣ, ವೈದ್ಯಕೀಯ ತಪಾಸಣಾ ಕೇಂದ್ರ ಹಾಗೂ ನೋಂದಣಿ ಕೇಂದ್ರಗಳಲ್ಲಿ ಸಾಕಷ್ಟು ಭದ್ರತೆ ಒದಗಿಸಲಾಗುವುದು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಕಿಮ್್ಸ ವೈದ್ಯಾಧಿಕಾರಿ ಡಾ. ಲಕ್ಷ್ಮಿಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ನಿಯಮ ಉಲ್ಲಂಘಿಸಿದರೆ ಸಾಂಸ್ಥಿಕ ಕ್ವಾರಂಟೈನ್

    ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್​ಗೆ ಒಳಪಡಿಸಿರುವ ಅಂತರ ಜಿಲ್ಲೆಗಳ ಪ್ರವಾಸಿಗರು ಹಾಗೂ ಸೋಂಕಿತ ವ್ಯಕ್ತಿಗಳೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ ವ್ಯಕ್ತಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಂತಹ ವ್ಯಕ್ತಿಗಳು ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರುವುದು ಕಡ್ಡಾಯ. ಮನೆಗಳಿಂದ ಹೊರಬಂದರೆ ತಕ್ಷಣ ಮಾಹಿತಿ ಲಭ್ಯವಾಗುವಂತೆ ತಂತ್ರಜ್ಞಾನ ಬಳಸಿ ಜಿಯೋ ಫೆನ್ಸಿಂಗ್ ಅಳವಡಿಸಲಾಗಿದೆ. ಆ ಮೂಲಕ ಹೋಂ ಕ್ವಾರಂಟೈನ್​ನಲ್ಲಿರುವ ಎಲ್ಲ ವ್ಯಕ್ತಿಗಳ ನಿಖರ ಮಾಹಿತಿ ತ್ವರಿತವಾಗಿ ದೊರೆಯುತ್ತಿದೆ. ಹೋಂ ಕ್ವಾರಂಟೈನ್ ಅವಧಿಗೆ ಮುನ್ನ ಹೊರಗಡೆ ಸುತ್ತಾಡಿದರೆ ಅವರನ್ನು ಪುನಃ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಹಾಗೂ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ (ಕೋವಿಡ್ 19) ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts