More

    ಜಿಂಕೆ ಬೇಟೆ ಪ್ರಕರಣದ ಪ್ರಮುಖ ಆರೋಪಿ ಸೆರೆ

    ಆಯನೂರು: ಕೆಲದಿನಗಳ ಹಿಂದೆ ಕುಂಸಿಯ ಕೆಂಪಿನಕೊಪ್ಪ ಗ್ರಾಮದಲ್ಲಿ ನಡೆದಿದ್ದ ಜಿಂಕೆ ಬೇಟೆ ಪ್ರಕರಣದ ಪ್ರಮುಖ ಆರೋಪಿ ಹುವೇಜ್ ಅಹಮದ್ (42)ನನ್ನು ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಶಿವಮೊಗ್ಗದ ಆತನ ಮನೆಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಆಯನೂರು ವಲಯ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುವಾಗ ಅರಣ್ಯ ಇಲಾಖೆಯವರು ದಾಳಿ ಮಾಡಿದಾಗ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಆಗ ಜಮೀರ್ ಅಹಮದ್ ಎಂಬಾತನನ್ನು ಬಂಧಿಸಲಾಗಿತ್ತು. ಉಳಿದ 4 ಜನರು ತಪ್ಪಿಸಿಕೊಂಡಿದ್ದರು. ಈತನ ಮನೆಯಲ್ಲಿ 4 ಜಿಂಕೆಗಳ ಚರ್ಮ, 8 ಜಿಂಕೆ ಕೊಂಬುಗಳ ಟ್ರೋಫಿ, ಕಾಡುಕೋಣದ ಟ್ರೋಫಿ, ಕಾರು, ಬೈಕು, ಏರ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು.

    ಅರಣ್ಯ ಇಲಾಖೆ ಅಧಿಕಾರಿಗಳು ಹುವೇಜ್ ಅಹಮದ್​ನ ಶಿವಮೊಗ್ಗದ ಮನೆಗೆ ದಾಳಿ ನಡೆಸಿದಾಗ ಆತ ಹೆಂಡತಿ ಮಕ್ಕಳೊಡನೆ ಇದ್ದನು. ಆದರೆ ಈತನ ಹೆಂಡತಿ ಗಂಡ ಮನೆಯಲ್ಲಿಯೇ ಇದ್ದರೂ ಇಲ್ಲ ಎಂದು ಸುಳ್ಳು ಹೇಳಿದ್ದು ತಕ್ಷಣವೇ ಮನೆಯನ್ನು ಶೋಧಿಸಿದಾಗ ಅವಿತು ಕುಳಿತಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.

    ಈತನ ಸಹಚರರಾದ ಚಂದ್ರು, ರಾಘು, ಹಾಗೂ ಸಂತೋಷ್ ಎಂಬುವವರು ತಪ್ಪಿಸಿಕೊಂಡಿದ್ದು ಉಳಿದ ಮೂವರ ಶೋಧ ಕಾರ್ಯ ನಡೆಯುತ್ತಿದೆ. ಶೀಘ್ರವೇ ಅವರನ್ನೂ ಬಂಧಿಸಲಾಗುವುದು ಎಂದು ಆಯನೂರು ಆರ್​ಎಫ್​ಒ ಕೆ.ರವಿ ತಿಳಿಸಿದರು.

    ಸಂಚಾರಿ ದಳದ ಡಿಸಿಎಫ್ ರವಿಶಂಕರ್, ಪ್ರಾದೇಶಿಕ ಡಿಸಿಎಫ್ ಜಿ.ಯು.ಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಂಚಾರಿ ದಳದ ಎಸಿಎಫ್ ಬಾಲಚಂದ್ರ, ಎಸಿಎಫ್ ಆರ್.ಡಿ.ಪುಟ್ನಳ್ಳಿ, ಆರ್​ಎಫ್​ಒ ಸಂಜಯ್, ಕೆ.ರವಿ, ಡಿಆರ್​ಎಫ್​ಒಗಳಾದ ಆರ್.ಸಿ.ಹಿರೇಮಠ್, ಹನುಮಂತರಾಯ, ಪ್ರಶಾಂತ ರೆಡ್ಡಿ, ವಸಂತಕುಮಾರ್, ಅರಣ್ಯ ರಕ್ಷಕರಾದ ರೋಹಿತ್, ಎಂ.ವಿಜಯ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts