More

    ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ಕೆಂಡ

    ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂದು ಶಬ್ದದ ಅರ್ಥದ ಕುರಿತು ಮಾಹಿತಿ ಕಲೆ ಹಾಕಿರುವುದನ್ನು ಮೊದಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ್‌ಗೆ ಸಲ್ಲಿಸಿ, ಬಳಿಕ ಅವರಿಂದ ಪ್ರಮಾಣ ಪತ್ರದ ಪಡೆದು ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಸವಾಲು ಹಾಕಿದರು.
    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಎನ್ನುವುದು ಭಾರತೀಯರ ಅಸ್ಮಿತೆ. ಇದನ್ನು ಕೆಣಕಿ ತಮ್ಮ ಕಾಂಗ್ರೆಸ್ ನಾಯಕರಿಂದಲೇ ಛೀಮಾರಿ ಹಾಕಿಕೊಂಡಿರುವ ಸತೀಶ ಜಾರಕಿಹೊಳಿ ಅವರು ಮೊದಲು ಅವರನ್ನು ಸಮಾಧಾನ ಪಡಿಸಲಿ. ಬಳಿಕ ಬಿಜೆಪಿಯವರನ್ನು ಬಹಿರಂಗ ಚರ್ಚೆಗೆ ಕರೆಯಲಿ. ಹಿಂದು ಪದದ ಬಗ್ಗೆ ಮಾತನಾಡುವ ಮುನ್ನ ಸಮಗ್ರ ಅಧ್ಯಯನ ನಡೆಸಲಿ ಎಂದಿದ್ದಾರೆ.

    ಬಿಜೆಪಿ ವಕ್ತಾರ ಎಂ.ಬಿ. ಝಿರಲಿ ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಮಗ್ರ ಚರ್ಚೆ ನಡೆಸಿ ಹಿಂದು ಎಂದರೆ ಇದೊಂದು ಜೀವನ ಕ್ರಮ. ಸಿಂಧೂ ನಾಗರಿಕತೆಯಿಂದ ಬಂದಿದ್ದು ಇದನ್ನು ಭಾರತವಲ್ಲ ಇಡಿ ಪ್ರಪಂಚವೇ ಒಪ್ಪಿಕೊಂಡಿದೆ. ಶ್ರೇಷ್ಠ ವಿದ್ವಾಂಸರು ಹಿಂದು ಧರ್ಮದ ಶ್ರೇಷ್ಠತೆ ಎತ್ತಿ ಹಿಡಿದಿದ್ದಾರೆ. ಆದರೆ, ಇದೀಗ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆ ಅಕ್ಷಮ್ಯ ಅಪರಾಧ ಎಂದರು.

    ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಹಿಂದು ಹಿಂದುತ್ವ ಎನ್ನುವದು ಭಾರತೀಯರ ಜೀವನಾಡಿಯಲ್ಲಿ ರಕ್ತಗತವಾದ ವಿಷಯ. ಇಂತಹ ವಿಷಯವನ್ನು ವ್ಯರ್ಥ ಚರ್ಚೆಗೆ ತಂದು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುಲು ಗಿಮಿಕ್ ಮಾಡುವ ಸತೀಶ ಜಾರಕಿಹೊಳಿ ಮೊದಲು ತಾವು ಹಿಂದು ಹೌದೋ ಅಲ್ವೋ ಎಂಬುವದನ್ನು ಬಹಿರಂಗಪಡಿಸಬೇಕು. ಮೂಢನಂಬಿಕೆ ವಿರೋಧ ಮಾಡುವ ನೆಪದಲ್ಲಿ ಜನರ ಭಾವನೆಯನ್ನೇ ಮೂಢಾಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಹಿಂದು ಎನ್ನುವುದು ಭಾರತೀಯರ ಅಸ್ಮಿತೆ. ಆದರೆ, ಕಾಂಗ್ರೆಸ್‌ನವರಿಗೆ ಹಿಂದು, ಹಿಂದುತ್ವ ಎಂಬುದರ ಅರ್ಥ ಗೊತ್ತಿಲ್ಲ. ಹಾಗಾಗಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹೇಳಿಕೆ ಖಂಡಿಸಿ ಬುಧವಾರ ನಗರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು. ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಶರದ ಪಾಟೀಲ, ಪ್ರಜ್ವಲ್ ಅಥಣಿಮಠ, ರುದ್ರಣ ಚಂದರಗಿ, ಪ್ರಸಾದ ದೇವರಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts