More

    ಜಲಧಾರೆ ಸಮಾರೋಪ ಸಿದ್ಧತೆ ಪರಿಶೀಲನೆ, ನೆಲಮಂಗಲಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ, ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಉಪಸ್ಥಿತಿ

    ನೆಲಮಂಗಲ: ಜನತಾ ಜಲಧಾರೆ ಸಮಾರೋಪ ಸಮಾರಂಭ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಮೇ 13ಕ್ಕೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಭರದ ಸಿದ್ಧತೆ ಸಾಗಿದೆ. ಗುರುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.

    ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಜನತಾ ಜಲಧಾರೆಯ ಸಮಾರೋಪ ಸಮಾರಂಭಕ್ಕೆ 4 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಮೇ 13ರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಗಂಗಾರತಿ ಹಮ್ಮಿಕೊಳ್ಳಲಾಗಿದೆ. ವಾರಾಣಸಿಯಿಂದ 25ಕ್ಕೂ ಹೆಚ್ಚು ಅರ್ಚಕರು ಆಗಮಿಸಿ ಗಂಗಾರತಿ ನಡೆಸಿಕೊಡಲಿದ್ದಾರೆ ಎಂದರು.

    ನಾಡಿನಾದ್ಯಂತ ಇರುವ ನದಿಗಳ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡುವುದರಿಂದ ನಾಗರಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ನೆಲಮಂಗಲದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಜನರಿಗೂ ಅನುಕೂಲವಾಗಲಿದೆ ಎಂದರು.

    ಬಿಬಿಎಂಪಿ ಕಮಿಷನ್: ಬಿಬಿಎಂಪಿಯಲ್ಲೂ ಶೇ.40 ಕಮಿಷನ್ ಪಡೆದ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇದು ಮುಖ್ಯವಲ್ಲ. ಸರ್ಕಾರದಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ವ್ಯವಹಾರ ನಿಲ್ಲಬೇಕು. ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಪರ್ಸೆಂಟೇಜ್ ನಿಲ್ಲಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಮಾಜಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

    ಪಿಎಸ್‌ಐ ಹಗರಣದಲ್ಲಿ ಅಮಾಯಕರು ಬಲಿಪಶು: ರಾಜ್ಯ ಪೊಲೀಸ್ ಇಲಾಖೆಯ ಪಿಎಸ್‌ಐ ಪರೀಕ್ಷೆಯ ಅಕ್ರಮದಲ್ಲಿ ಸಾಕಷ್ಟು ಪ್ರಭಾವಿಗಳು ಪಾತ್ರವಹಿಸಿದ್ದಾರೆ. ಆದರೆ, ಸರ್ಕಾರ ಅಮಾಯಕರನ್ನು ಬಲಿಪಶು ಮಾಡುತ್ತಿದೆ. ಈ ಪ್ರಕರಣದಲ್ಲಿ ಪ್ರಭಾವಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಇದನ್ನು ಪ್ರಶ್ನಿಸಿ ಈಗಾಗಲೇ ಕೆಲ ವಕೀಲರು ಎಸಿಬಿಗೆ ದೂರು ನಿಡಿದ್ದಾರೆ. ಸಮರ್ಪಕವಾದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹೇಳಿದರು.

    ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯಣ್ಣ, ಜೆಡಿಎಸ್ ತಾಲೂಕು ಉಪಾಧ್ಯಕ್ಷ ಕೆಂಪರಾಜು, ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್, ನಗರಸಭೆ ಸದಸ್ಯ ನರಸಿಂಹಮೂರ್ತಿ, ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಜಗಜ್ಯೋತಿಬಸವೇಶ್ವರ, ತಾಪಂ ಮಾಜಿ ಸದಸ್ಯ ವರದನಾರಾಯಣ್, ಮುಖಂಡ ಕೋಡಪ್ಪನಹಳ್ಳಿ ವೆಂಕಟೇಶ್, ಶಿವಕುಮಾರ್, ಗೋಪಿ, ಬಾವಿಕೆರೆ ಅಂಜನಮೂರ್ತಿ, ಸಿದ್ದರಾಜು, ಜಕ್ಕನಹಳ್ಳಿ ಸುರೇಶ್, ಕೃಷ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts