More

    ಜನಸ್ನೇಹಿಯಾಗಿ ಕೆಲಸ ಮಾಡಿ

    ತುಮಕೂರು: ಜನಸ್ನೇಹಿ ಪೊಲೀಸ್ ಆಗಬೇಕು. ಠಾಣೆಗೆ ಬರುವ ಜನರ ಸಮಸ್ಯೆ ಆಲಿಸಿ, ಕೂಡಲೇ ಕಾನೂನು ರೀತಿ ಕ್ರಮ ಜರುಗಿಸಬೇಕು. ಹೀಗೆಂದು ಪೊಲೀಸರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಕಿವಿಹಿಂಡಿದರು.

    ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರೊಂದಿಗೆ ವಿಶ್ವಾಸದಿಂದ ಮಾತನಾಡಿ, ಸ್ನೇಹದಿಂದ ವರ್ತಿಸಿ (ಬೀ ಫ್ರೆಂಡ್ಲಿ ವಿತ್ ಪೀಪಲ್) ಎಂದು ಸಲಹೆ ಕೊಟ್ಟರು.

    ಖಡಕ್ ಆಗಿರಿ: ಅಪರಾಧಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಖಡಕ್ ಆಗಿ ಪೊಲೀಸರು ವರ್ತಿಸಬೇಕು. ಕ್ರಿಮಿನಲ್‌ಗಳ ವಿರುದ್ಧ ತಡ ಮಾಡದೇ ಕಾನೂನು ಕ್ರಮಕೈಗೊಳ್ಳಬೇಕು. ನಿರಪರಾಧಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಹಾಗಾಗಿ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಪರಮೇಶ್ವರ ಸೂಚನೆ ನೀಡಿದರು.

    ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಇರುವಂತಹ ಸಮಸ್ಯೆಗಳು ಏನು..? ಯಾವ ರೀತಿ ಕ್ರಮಕೈಗೊಂಡಿದ್ದಾರೆ ಎಂಬುದನ್ನು ಪರೀಶಿಲಿಸಿದ್ದು, ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆ ಶಾಂತಿಯಿಂದ ಕೂಡಿದೆ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದಾಗ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ ಎಂದರು. ಮುಂದಿನ ಮೂರು ತಿಂಗಳಲ್ಲಿ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡೋಣ. ಡ್ರಗ್ಸ್ ಬಳಸುವ ವಿದ್ಯಾರ್ಥಿಗಳು, ಯುವಕರಿದ್ದಾರೆ. ಡ್ರಗ್ಸ್ ಪೆಡ್ಲರ್ಸ್ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿಲ್ಲ. ಹಾಗಾಗಿ, ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪೊಲೀಸರು ಪ್ರಾಮಾಣಿಕರಾಗಿ ಶ್ರಮಿಸಬೇಕು. ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ದೊಡ್ಡ ಆಂದೋಲನವನ್ನು ಆರಂಭ ಮಾಡಲಾಗುವುದು ಎಂದರು.

    ಇನ್‌ಸ್ಪೆಕ್ಟರ್ ಮೇಲಿನ ಹಂತದ ಅಧಿಕಾರಿಗಳು ತಿಂಗಳಿಗೊಮ್ಮೆ ಶಾಲಾಕಾಲೇಜುಗಳಿಗೆ ಭೇಟಿ ಕೊಡಬೇಕು. ವಿದ್ಯಾರ್ಥಿಗಳಿಗೆ ಕಾನೂನು ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳು ದಾರಿತಪ್ಪದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
    ಐಜಿಪಿ ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಎಎಸ್ಪಿ ಮರಿಸ್ವಾಮಿ ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts