More

    ಜನರ ಮಧ್ಯೆ ಇದ್ದು ಕಷ್ಟ, ಸುಖಗಳಲ್ಲಿ ಭಾಗಿಯಾಗುವೆ

    ಮದ್ದೂರು: ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ನನ್ನನ್ನು ಕ್ಷೇತ್ರದ ಜನರು ಶಾಸಕರನ್ನಾಗಿ ಮಾಡಿದ್ದಾರೆ. ಇದಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.


    ಸಮೀಪದ ಸೋಮನಹಳ್ಳಿ ತಿಮ್ಮದಾಸ್ ಹೋಟೆಲ್ ಬಳಿ ಕ್ಷೇತ್ರದ ಮತದಾರರಿಗೆ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೋಮವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.


    ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಕ್ಷೇತ್ರದ ಮತದಾರರು ನನ್ನನ್ನು ಸುಲಭವಾಗಿ ಸಂಪರ್ಕಿಸಲು ಅವಕಾಶ ಮಾಡಿಕೊಟ್ಟು, ಜನರ ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದರು.


    ಮದ್ದೂರು ಕ್ಷೇತ್ರದ ಮತದಾರರು ರಾಜಕೀಯಕ್ಕೆ ಘಟಾನುಘಟಿ ನಾಯಕರನ್ನು ನೀಡಿದ್ದಾರೆ. ಎಸ್.ಎಂ.ಕೃಷ್ಣ ಅವರು ತಮ್ಮ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಸೇರಿದಂತೆ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಚ್.ಕೆ.ವೀರಣ್ಣಗೌಡ, ಮಂಚೇಗೌಡ, ಜಿ.ಮಾದೇಗೌಡ, ಎಂ.ಎಸ್.ಸಿದ್ದರಾಜು ಸೇರಿದಂತೆ ಹಲವಾರು ಮಹಾನ್ ನಾಯಕರು ಜನಪರವಾಗಿ ಹೋರಾಟ ಮಾಡುವ ಮೂಲಕ ರಾಜ್ಯಕ್ಕೆ ಮತ್ತು ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ತಾಲೂಕಿನಲ್ಲಿ ನಾನೂ ಶಾಸಕನಾಗಿ ಆಯ್ಕೆಯಾಗಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.
    ಕಾಂಗ್ರೆಸ್ ಪಕ್ಷದ ವರಿಷ್ಠರು ನನಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಿದಾಗ ವಿರೋಧ ಪಕ್ಷದವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು, ಗೊಂದಲ ಮೂಡಿಸಿದರು. ನಾನು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ತಾಲೂಕಿನಲ್ಲಿ ಅಪಪ್ರಚಾರ ಮಾಡಿದರು. ಇಂತಹ ಯಾವುದೇ ಉಹಾಪೋಹಗಳಿಗೆ ತಾಲೂಕಿನ ಜನರು ತಲೆಕೆಡಿಸಿಕೊಳ್ಳದೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂದರು.


    ತಾಲೂಕಿನಲ್ಲಿ ಸಾಕಷ್ಟು ದೊಡ್ಡ ಸಮಸ್ಯೆಗಳಿದ್ದು, ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ತಾಲೂಕನ್ನು ರಾಜ್ಯದಲ್ಲೇ ಮಾದರಿ ತಾಲೂಕಿನ್ನಾಗಿ ಮಾಡುವುದು ನನ್ನ ಗುರಿಯಾಗಿದೆ. ಕ್ಷೇತ್ರದಲ್ಲಿ ಶಿಕ್ಷಣ, ಕುಡಿಯುವ ನೀರು, ನೀರಾವರಿ, ಆರೋಗ್ಯ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.


    ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಿಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಅಲ್ಲಿಯ ಕುಂದುಕೊರತೆಗಳನ್ನು ಪಟ್ಟಿ ಮಾಡಿಕೊಂಡು ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ಭ್ರಷ್ಟಚಾರ ನಡೆಯುತ್ತಿದ್ದು, ಇದರಿಂದ ರೈತರು ಮತ್ತು ಸಾರ್ವಜನಿಕರು ರೋಸಿಹೋಗಿದ್ದಾರೆ. ಪಟ್ಟಣದ ತಾಲೂಕು ಕಚೇರಿಯಲ್ಲಿ ಶಾಸಕರ ಕಚೇರಿ ಆರಂಭಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಮಾಡಲಾಗುವುದು ಮತ್ತು ತಾಲೂಕಿನ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಹಣ ಕೇಳಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಂದಾಗುವುದು ಶಾಸಕ ಕೆ.ಎಂ.ಉದಯ್ ತಿಳಿಸಿದರು.


    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತೀನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್ ಕುಮಾರ್, ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ, ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಮಾಜಿ ಸದಸ್ಯ ಅಣ್ಣೂರು ರಾಜೀವ್, ತಾಪಂ ಮಾಜಿ ಸದಸ್ಯರಾದ ತೈಲೂರು ಚಲುವರಾಜು, ಕೆ.ಆರ್.ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಮುಖಂಡರಾದ ತೈಲೂರು ರಘು, ಟಿ.ಲಿಂಗಯ್ಯ, ಮನ್ಸೂರ್ ಖಾನ್, ಎಂ.ಡಿ. ಮಹಾಲಿಂಗಯ್ಯ, ಎಚ್.ಹೊಂಬಯ್ಯ, ಕೆ.ಎಂ.ರವಿಕುಮಾರ್, ಲಿಂಗನದೊಡ್ಡಿ ರಾಮಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts