More

    ಜನಪ್ರತಿನಿಧಿಗಳಿಲ್ಲದೇ 1 ವರ್ಷ

    ಹುಬ್ಬಳ್ಳಿ: ರಾಜ್ಯದ 2ನೇ ದೊಡ್ಡದಾಗಿರುವ ಹು-ಧಾ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೇ ಇಂದಿಗೆ (ಮಾರ್ಚ್ 6) ಸರಿಯಾಗಿ 1 ವರ್ಷ. ವಾರ್ಡ್​ಗಳ ಮರು ವಿಂಗಡಣೆ ಹಾಗೂ ಮೀಸಲಾತಿ ಸಂಬಂಧ ಎದ್ದಿದ್ದ ತಕರಾರು ಬಗೆಹರಿಯದೇ ಇರುವುದು ಈ ನಿರ್ವಾತಕ್ಕೆ ಕಾರಣ.

    ನಗರ ಸ್ಥಳೀಯ ಸಂಸ್ಥೆಗಳು ಜನರಿಗೆ ಹತ್ತಿರವಾದ ಸರ್ಕಾರವೇ ಆಗಿವೆ. ಇಂಥದೊಂದು ವ್ಯವಸ್ಥೆ ದೀರ್ಘ ಅವಧಿಯವರಿಗೆ ಖಾಲಿ ಉಳಿಯಬಾರದು. ಒಂದು ಆಡಳಿತ ಮಂಡಳಿಯ ಅವಧಿ ಮುಗಿದ ಮಾರನೇ ದಿನವೇ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳಬೇಕು ಎಂಬುದು ಸಂವಿಧಾನದ ಆಶಯ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವೂ ಹೌದು. ಅಧಿಕಾರಿಗಳಿಗೆ ಹೋಲಿಸಿದರೆ ಚುನಾಯಿತ ಪ್ರತಿನಿಧಿಗಳು ಜನರ ದೂರು-ದುಮ್ಮಾನಗಳು, ಸಮಸ್ಯೆಗಳಿಗೆ ಕಿಂಚಿತ್ತಾದರೂ ಸ್ಪಂದಿಸುತ್ತಾರೆ ಎಂಬ ಅಭಿಪ್ರಾಯವನ್ನು ಅಲ್ಲಗಳೆಯುವಂತಿಲ್ಲ. ಪಾಲಿಕೆ ಸದಸ್ಯರು ಮಾಜಿಗಳಾದರೂ ಕಳೆದ ಒಂದು ವರ್ಷದ ಅವಧಿಯಲ್ಲಿ ಎಷ್ಟೋ ಸಂದರ್ಭದಲ್ಲಿ ಅವಳಿ ನಗರದ ಜನತೆ ಅವರನ್ನೇ ಅವಲಂಬಿಸಿದ್ದಾರೆ.

    ಈ ಒಂದು ವರ್ಷದ ಅವಧಿಯಲ್ಲಿ ವಾರ್ಡ್​ಗಳ ವಿಂಗಡಣೆ ಮರು ನಿಗದಿಯಾಗಿದೆ ಹಾಗೂ 2 ಬಾರಿ ಮೀಸಲಾತಿ ಪ್ರಕಟಿಸಲಾಗಿದೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದ ಸಂದರ್ಭದಲ್ಲಿ ಮೊದಲ ಬಾರಿ 2011ರ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ವಾರ್ಡ್​ಗಳನ್ನು ಪುನರ್​ರಚಿಸಲಾಗಿತ್ತು. ವಾರ್ಡ್​ಗಳ ಸಂಖ್ಯೆ 67ರಿಂದ 82ಕ್ಕೆ ಏರಿಕೆಯಾಗಿದೆ.

    ವಾರ್ಡ್ ವಿಗಂಡಣೆಗೆ ಸರಿಯಾದ ಮಾನದಂಡ ಅನುಸರಿಸಿಲ್ಲ ಎಂಬುದು ಕೆಲವರ ತಕರಾರು. ಒಂದು ವಾರ್ಡ್ ವ್ಯಾಪ್ತಿಯ ಕೆಲ ಬಡಾವಣೆಗಳು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿದ್ದು ಆಕ್ಷೇಪಕ್ಕೆ ಮುಖ್ಯ ಕಾರಣ. ಯಾವುದೇ ಒಂದು ವಾರ್ಡ್ 2 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಬಾರದು, ಕೆಲವು ನಿರ್ದಿಷ್ಟ ಬಡಾವಣೆಗಳನ್ನು ಉದ್ದೇಶಪೂರ್ವಕವಾಗಿ ಬೇರೆ ವಾರ್ಡ್​ಗಳಿಗೆ ಸೇರಿಸಲಾಗಿದೆ, ಉದ್ದೇಶಪೂರ್ವವಾಗಿ ಮೀಸಲಾತಿ ಬದಲಾಯಿಸಲಾಗಿದೆ ಎಂಬುದು ನ್ಯಾಯಾಲಯಕ್ಕೆ ತಕರಾರು ಸಲ್ಲಿಸಿರುವವರ ವಾದ.

    ಸಂಜಯ ಕಪಟಕರ, ಕೃಷ್ಣ ಗಂಡಗಾಳೇಕರ, ನರೇಂದ್ರ ಕುಲಕರ್ಣಿ, ವಿಶ್ವನಾಥ ಸೋಮಾಪುರ, ಮಹಾವೀರ ಶಿವಣ್ಣವರ, ಪಾಂಡುರಂಗ ವೆರ್ಣೇಕರ, ಬಸವರಾಜ ಪೂಜಾರ, ಸಂಜಯ ಕತ್ರಿಮಲ್, ಶಿವಶಂಕರ ಗುರಗುಂಟಿ, ವೆಂಕಟೇಶ ಮೇಸ್ತ್ರಿ, ಉಮೇಶ ಲದ್ವಾ ಹಾಗೂ ದತ್ತುಸಾ ಚವ್ಹಾಣ ತಕರಾರು ಸಲ್ಲಿಸಿದವರು. ನಗರಾಭಿವೃದ್ಧಿ ಇಲಾಖೆಯ ನಿರ್ದೇಶನದ ಮೇರೆಗೆ ಇವರೆಲ್ಲರನ್ನು ಫೆ. 12ರಂದು ಧಾರವಾಡ ಜಿಲ್ಲಾಧಿಕಾರಿಯವರು ಕರೆಯಿಸಿ ಅಹವಾಲು ಕೇಳಿದ್ದರು. ಅದರಂತೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ರಾಜ್ಯ ಸರ್ಕಾರದಿಂದ ವಿಳಂಬ: ಅವಧಿ ಮುಗಿದ ಹು-ಧಾ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಿಲ್ಲ ಎಂಬುದು ಸ್ಪಷ್ಟ. ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ವಿಚಾರಣೆ ವೇಳೆ ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿಯನ್ನು ಮರು ಪರಿಶೀಲಿಸುವುದಾಗಿ ಸರ್ಕಾರ ಸೆಪ್ಟೆಂಬರ್(2019)ನಲ್ಲಿಯೇ ಹೇಳಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ 5 ತಿಂಗಳು ವಿಳಂಬ ಮಾಡಿ ಫೆಬ್ರುವರಿ (2020)ಯಲ್ಲಿ ಸೂಚನಾ ಪತ್ರ ಹೊರಡಿಸಿ ದಾವೆದಾರರನ್ನು ಕರೆಯಿಸಿ ಅಹವಾಲು ಆಲಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದೆ. ಇಷ್ಟು ವಿಳಂಬ ಮಾಡಿದ್ದು ಏಕೆ?

    ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಕಾರುಬಾರು ಇದ್ದಲ್ಲಿ ಶಾಸಕರ ಅಧಿಕಾರ ಬಹುಪಾಲು ಮೊಟಕುಗೊಳ್ಳುತ್ತದೆ. ಅತಿವೃಷ್ಟಿಯಿಂದ ಹಾನಿಯಾದ ಸಂದರ್ಭದಲ್ಲಿ ಅವಳಿ ನಗರದಲ್ಲಿ ಶಾಸಕರು ಪ್ರಧಾನವಾಗಿದ್ದರು. ಪಾಲಿಕೆ ಅಧಿಕಾರಿಗಳಿಗೆ ಸದಸ್ಯರ ತಲೆನೋವು ಇರಲಿಲ್ಲ. 1 ವರ್ಷದಿಂದ ಪಾಲಿಕೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರು. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಪಾಲಿಕೆಯ ಆಡಳಿತಾಧಿಕಾರಿಯಾಗಿದ್ದಾರೆ.

    ವಾರ್ಡ್ ನಂ. 44ರ ಜೀಹ್ವೇಶ್ವರ ದೇವಸ್ಥಾನ ಹಾಗೂ ಗುಡಿ ಓಣಿ ಭಾಗವನ್ನು ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲಿಸಿರುವ ಬಗ್ಗೆ ನಮ್ಮ ತಕರಾರು ಇರುತ್ತದೆ.
    | ಕೃಷ್ಣ ಗಂಡಗಾಳೇಕರ, ದಾವೆದಾರ

    ಪರಿಷ್ಕೃತ ಮೀಸಲಾತಿ ಪಟ್ಟಿಯಲ್ಲಿ ವಾರ್ಡ್ ನಂ. 58(ಹಳೇಯ ವಾರ್ಡ್ ನಂ. 44)ಕ್ಕೆ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿ ಮಹಿಳೆ ಎಂದು ಬದಲಾಯಿಸಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ. ಮೊದಲು ಪರಿಶಿಷ್ಟ ಜಾತಿ ಎಂದಿತ್ತು.
    | ವೆಂಕಟೇಶ ಮೇಸ್ತ್ರಿ, ದಾವೆದಾರ

    ಆಡಳಿತ ವ್ಯವಸ್ಥೆಯಲ್ಲಿ ಜನಪ್ರತಿನಿಧಿತ್ವ ಇಲ್ಲದಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು. ಹು-ಧಾ ಮಹಾನಗರ ಪಾಲಿಕೆಯಲ್ಲಿ 1 ವರ್ಷದಿಂದ ಜನ ಪ್ರತಿನಿಧಿಗಳ ಆಡಳಿತ ಖಾಲಿ ಉಳಿದಿದ್ದು ತುಂಬಾ ವಿಷಾದಕರ ಸಂಗತಿ.
    | ಡಾ. ಪಾಂಡುರಂಗ ಪಾಟೀಲ, ಮಾಜಿ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts