More

    ಚುನಾವಣೆ ಗಂಭೀರತೆ ಅರಿವಿರಬೇಕು, ಜಿಲ್ಲಾಧಿಕಾರಿ ರವೀಂದ್ರ ಸೂಚನೆ, ಗ್ರಾಪಂ ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆ

    ಬೆಂಗಳೂರು ಗ್ರಾಮಾಂತರ: ಗ್ರಾಪಂ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಗಂಭೀರತೆ ಅರಿತು ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದರು.

    ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಗ್ರಾಪಂ ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು.

    ಇತರ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಆಯ್ಕೆ ಪ್ರಕ್ರಿಯೆ ಹರಾಜು ಮೂಲಕ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಇಂತಹ ಪ್ರಕ್ರಿಯೆ ನಡೆಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಮತಪತ್ರ ಮುದ್ರಣಕ್ಕೆ ಕಳುಹಿಸುವ ಮುನ್ನ ಸಂಬಂಧಪಟ್ಟ ತಹಸೀಲ್ದಾರ್‌ಗಳು ಲೋಪದೋಷದ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಮತಪತ್ರ, ಲಕೋಟೆ, ನಮೂನೆ, ಲೇಖನ ಸಾಮಗ್ರಿ, ಹಂಚಿಕೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.

    ಚುನಾವಣೆ ಸಂಬಂಧಿತ ದೂರು ಸಲ್ಲಿಸುವ ಕಂಟ್ರೋಲ್ ರೂಂ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಮೂರು ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಬೇಕು, ಕರೊನಾ ಸೋಂಕಿತರರಿಗೆ ಮತದಾನದ ದಿನದ ಕೊನೆಯ 1 ಗಂಟೆಗೆ ಮತದಾನಕ್ಕೆ ಅವಕಾಶ ನೀಡುವುದು, ಈ ವೇಳೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ನೆಲಮಂಗಲ ಹಾಗೂ ಹೊಸಕೋಟೆ ಸೂಕ್ಷ್ಮ ಕ್ಷೇತ್ರಗಳಾಗಿದ್ದು, ಇಲ್ಲಿ ಹೆಚ್ಚು ರೌಡಿಶೀಟರ್‌ಗಳಿರುವ ಕಾರಣ ಪೊಲೀಸ್ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಬೇಕು. ಅಭ್ಯರ್ಥಿಗಳಿಗೆ ಬೆದರಿಕೆಗಳು ಬರುವ ಸಾಧ್ಯತೆ ಇರುವುದರಿಂದ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.

    ಮತಗಟ್ಟೆಗಳಾಗಿ ಆಯ್ಕೆಯಾಗಿರುವ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಕರೊನಾ ಹಿನ್ನೆಲೆಯಲ್ಲಿ ಇದುವರೆಗೂ ತೆರೆಯದಿಲ್ಲ. ಆದ್ದರಿಂದ ಸ್ವಚ್ಛತೆ, ಶೌಚಗೃಹ ಕುಡಿಯುವ ನೀರು, ದೀಪ, ಬಾಗಿಲು, ಕಿಟಕಿ ವ್ಯವಸ್ಥೆ ಸರಿಯಾಗಿದೆಯೇ ಎಂದು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

    ಚುನಾವಣೆ ಕುರಿತ ಜಾಗೃತಿ ಮೂಡಿಸುವ ಬ್ಯಾನರ್ ಪ್ರದರ್ಶಿಸಲು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮವಹಿಸಬೇಕು ಎಂದರು.
    ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್ ಮಾತನಾಡಿ, ಚುನಾವಣೆ ನಿಷ್ಪಕ್ಷಪಾತ, ಶಾಂತಿಯುತ ಹಾಗೂ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ ಹಾಗೂ ರೌಡಿಶೀಟರ್‌ಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಸೂಚನೆ ನೀಡಲಾಗಿದೆ. ನಾಲ್ಕು ಜನರನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಮತದಾರರಿಗೆ ಬೆದರಿಕೆ ಬಂದಲ್ಲಿ ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts