More

    ಚುನಾವಣೆ ಕಣದಲ್ಲಿ 420 ಅಭ್ಯರ್ಥಿಗಳು

    ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಗುರುವಾರದವರೆಗೆ ವಿವಿಧ ವಾರ್ಡ್ ಗಳಲ್ಲಿ ನಾಮಪತ್ರ ಸಿಂಧುವಾಗಿದ್ದ 486 ಅಭ್ಯರ್ಥಿಗಳ ಪೈಕಿ 66 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.

    82 ವಾರ್ಡ್​ಗಳಲ್ಲಿ ಅಂತಿಮವಾಗಿ 420 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

    ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳು ಎಲ್ಲ 82 ವಾರ್ಡ್ ಗಳಲ್ಲಿ ಕಣದಲ್ಲಿದ್ದಾರೆ. ಜೆಡಿಎಸ್ 9, ಸಿಪಿಐ (ಎಂ)1, ಬಿಎಎಸ್​ಪಿ 7, ಎಎಪಿ 41, ಉತ್ತಮ ಪ್ರಜಾಕೀಯ 1, ಕರ್ನಾಟಕ ರಾಷ್ಟ್ರ ಸಮಿತಿ , ಎಐಎಂಐಎಂ 12, ಎಸ್​ಡಿಪಿಐ 4, ಕರ್ನಾಟಕ ಶಿವಸೇನೆ , ಕರ್ನಾಟಕ ಜನಸೇವೆ ಪಾರ್ಟಿ, ಪಕ್ಷೇತರ 122 ಸೇರಿ ಒಟ್ಟು 420 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

    ಸಾಮಾನ್ಯ ವಾರ್ಡ್ 8ರಲ್ಲಿ ಅತಿ ಹೆಚ್ಚು ಅಂದರೆ 11 ಜನ ಉಮೇದುವಾರರು ಕಣದಲ್ಲಿ ಇದ್ದಾರೆ. ಹಿಂದುಳಿದ ಬ ವರ್ಗಕ್ಕೆ ಮೀಸಲಿರುವ ವಾರ್ಡ್ ಸಂಖ್ಯೆ 14, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ವಾರ್ಡ್ ಸಂಖ್ಯೆ 19, 44, 57, 80 ಹಾಗೂ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಾರ್ಡ್ 58ರಲ್ಲಿ ಅತಿ ಕಡಿಮೆ ಅಂದರೆ ತಲಾ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದ್ದಾರೆ.

    ವೆಚ್ಚ ವೀಕ್ಷಕರ ನೇಮಕ

    ಅಭ್ಯರ್ಥಿಗಳ ಚುನಾವಣಾ ಖರ್ಚು- ವೆಚ್ಚದ ಮೇಲೆ ನಿಗಾ ಇಡಲು ವಾರ್ಡ್ ಸಂಖ್ಯೆ 1ರಿಂದ 41ರವರೆಗೆ ಲೆಕ್ಕ ಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಪಿ. ಅನಿತಾ ಹಾಗೂ ವಾರ್ಡ್ 42ರಿಂದ 82ರವರೆಗೆ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ ಅವರನ್ನು ನೇಮಿಸಲಾಗಿದೆ.

    ವೋಟಿಂಗ್ ಅವಧಿ ವಿಸ್ತರಣೆ

    ಧಾರವಾಡ: ಪಾಲಿಕೆ ಚುನಾವಣೆಗೆ ಸೆ. 3ರಂದು ಮತದಾನ ನಡೆಯಲಿದ್ದು, ಮತದಾನದ ಅವಧಿ (ಸಂಜೆ 5 ಗಂಟೆ ಬದಲು 6ರವರೆಗೆ)ಯನ್ನು 1 ತಾಸು ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾವಣಾ ಆಯೋಗದ ಆದೇಶದಂತೆ ಪಾಲಿಕೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಕರೊನಾ ಕಾರಣಕ್ಕೆ ಹಾಗೂ ಕೇಂದ್ರ ಗೃಹ ಮಂತ್ರಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಅನ್ವಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಚುನಾವಣೆ ನಡೆಸುವುದು ಅವಶ್ಯ. ಮತಗಟ್ಟೆಗಳಿಗೆ ಕೋವಿಡ್ ಸುರಕ್ಷತಾ ಕಿಟ್​ಗಳನ್ನು ಜಿಲ್ಲಾಡಳಿತದ ಮೂಲಕ ಪೂರೈಸಲು ಆಯೋಗದಿಂದ ಕ್ರಮ ಕೈಗೊಳ್ಳಲಾಗಿದೆ. ಮತದಾರರು ಪರಸ್ಪರ ಅಂತರ ಕಾಯ್ದುಕೊಂಡು ಮುಕ್ತವಾಗಿ ಮತದಾನ ಮಾಡಲು ಅನುಕೂಲ ಕಲ್ಪಿಸಲು ರಾಜ್ಯ ಚುನಾವಣಾ ಆಯೋಗ ಒಂದು ಗಂಟೆ ಅವಧಿ ವಿಸ್ತರಿಸಿ ಆದೇಶಿಸಿದೆ. ಮತದಾರರು ಇದರ ಸದುಪಯೋಗ ಪಡೆಯಬೇಕು ಎಂದು ನಿತೇಶ ಪಾಟೀಲ ತಿಳಿಸಿದ್ದಾರೆ.

    ಸೃಜನಾತ್ಮಕ ಪ್ರಚಾರಕ್ಕೂ ಶುಲ್ಕ

    ಧಾರವಾಡ: ಹು- ಧಾ ಮಹಾನಗರ ಪಾಲಿಕೆ ಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದಿದ್ದು, ಎಲ್ಲ ವಾರ್ಡ್​ಗಳಲ್ಲಿ ಪ್ರಚಾರದ ಭರಾಟೆ ಆರಂಭಗೊಂಡಿದೆ. ಸಾಮಾಜಿಕ ಜಾಲತಾಣದ ಮೂಲಕ ಸೃಜನಾತ್ಮಕ ಪ್ರಚಾರ ಕೈಗೊಂಡರೂ ಅದು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಜಮೆಯಾಗಲಿದೆ.

    ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಸಾಮಾನ್ಯ ವೆಚ್ಚದ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ಫೇಸ್​ಬುಕ್, ಟ್ವಿಟರ್​ನಂಥ ಸೋಷಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಆಗುವ ಫೋಟೋ, ಪೋಸ್ಟರ್ ವಿಡಿಯೋಗಳಿಗೂ ವೆಚ್ಚ ನಿಗದಿಪಡಿಸಲಾಗಿದೆ.

    ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚುನಾವಣಾ ಪ್ರಚಾರಕ್ಕೆ ಹಲವಾರು ಕಟ್ಟಳೆಗಳನ್ನು ವಿಧಿಸಿದೆ. ಅಭ್ಯರ್ಥಿ ಜೊತೆಗೆ ಗುಂಪುಗೂಡುವುದು, ಬಹಿರಂಗ ಸಭೆ- ಸಮಾವೇಶ, ರ‍್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ತಾಂತ್ರಿಕತೆಯ ಮೊರೆ ಹೋಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ಯಥೇಚ್ಛ ಪ್ರಚಾರ ಕೈಗೊಂಡಿದ್ದಾರೆ.

    ವಾಟ್ಸ್​ಆಪ್ ಗ್ರುಪ್ ಪ್ರಚಾರ: ವಾಟ್ಸ್​ಆಪ್ ಮೂಲಕ ಕ್ಷಣಾರ್ಧದಲ್ಲಿ ನೂರಾರು ಜನರಿಗೆ ಸಂದೇಶ ತಲುಪಿಸಬಹುದು. ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಮೂಲಕ ವಾಟ್ಸ್​ಆಪ್ ಗ್ರುಪ್​ಗಳನ್ನು ರಚಿಸಿಕೊಂಡಿದ್ದಾರೆ. ದಿನದ ಪ್ರಚಾರ ಕಾರ್ಯಕ್ರಮ, ಮಾಹಿತಿ ಸೇರಿದಂತೆ ಮತ ಕೋರಿಕೆಯ ಪೋಸ್ಟರ್​ಗಳನ್ನು ಹರಿಬಿಡುವುದು ಸಾಮಾನ್ಯವಾಗಿದೆ. ಅದರ ಮೇಲೂ ಕಣ್ಣಿಟ್ಟಿರುವ ಆಯೋಗ, ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಆಗುವ ಪ್ರತಿಯೊಂದು ಸೃಜನಾತ್ಮಕ ವಿಡಿಯೋಗೆ 5,000 ರೂ., ಪೋಸ್ಟರ್​ಗಳಿಗೆ 500 ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಯ ಪರವಾಗಿ ಬೇರೆಯವರು ಅಪ್​ಲೋಡ್ ಮಾಡಿದರೂ ಅಭ್ಯರ್ಥಿಯ ವೆಚ್ಚಕ್ಕೆ ಜಮೆಯಾಗಲಿದೆ. ಆದರೆ, ಸಾಮಾನ್ಯ ಫೋಟೊ, ವಿಡಿಯೋಗಳಿಗೆ ವೆಚ್ಚವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts