More

    ಚಿಕ್ಕಜಾತ್ರೆಗೆ ಸಿದ್ಧಗೊಂಡ ಬಿಳಿಗಿರಿರಂಗನಬೆಟ್ಟ

    ಡಿ.ಪಿ.ಮಹೇಶ್ ಯಳಂದೂರು
    ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಕ್ರಾಂತಿ ಪ್ರಯುಕ್ತ ಶ್ರೀ ಬಿಳಿಗಿರಿ ರಂಗನಾಥಸ್ವಾಮಿಯ ಚಿಕ್ಕಜಾತ್ರೆ ಜ. 16ರಂದು ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆದಿವೆ.

    ಪ್ರಸಿದ್ಧ ಪ್ರವಾಸಿ ಕ್ಷೇತ್ರ, ಚಂಪಕಾರಣ್ಯ, ಶ್ವೇತಾದ್ರಿ ಇನ್ನಿತರ ಹೆಸರಿನಿಂದ ಕರೆಯಲ್ಪಡುವ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಒಡಲಲ್ಲಿ ಇಟ್ಟುಕೊಂಡಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬದ ಮಾರನೇ ದಿನ ಜಾತ್ರೋತ್ಸವ ಜರುಗುತ್ತದೆ. ಅಂತೆಯೆ, ಜಾತ್ರಾ ಮಹೋತ್ಸವಕ್ಕಾಗಿ ಸೋಲಿಗರು ಅಗತ್ಯವಾದ ಮರಗಳನ್ನು ಕಾಡಿನಿಂದ ತಂದು ರಥವನ್ನು ಸಿದ್ಧಗೊಳಿಸಿದ್ದಾರೆ.

    ಬಿಳಿಗಿರಿರಂಗನಬೆಟ್ಟ ಯಳಂದೂರು ತಾಲೂಕು ಕೇಂದ್ರದಿಂದ 24 ಕಿ.ಮೀ ದೂರದಲ್ಲಿದೆ. ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಪ್ರದೇಶವಾಗಿದ್ದು, ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ಬಿಳಿಗಿರಿರಂಗಸ್ವಾಮಿ ಹಾಗೂ ಅಲಮೇಲಮ್ಮ ಇಲ್ಲಿನವರ ಆರಾಧ್ಯ ದೈವವಾಗಿದ್ದಾರೆ. ಸೋಲಿಗ ಸಮುದಾಯವರು ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.

    ಜ. 16ರಂದು ಬೆಳಗ್ಗೆ 11.54 ರಿಂದ 12.05ರ ಶುಭ ಮೀನ ಲಗ್ನದಲ್ಲಿ ರಥೋತ್ಸವ ಜರುಗಲಿದೆ. ಜಾತ್ರೆ ಪ್ರಯುಕ್ತ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

    ತಿ.ನರಸಿಪುರ, ನಂಜನಗೂಡು, ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಯಳಂದೂರು ಸೇರಿದಂತೆ ವಿವಿಧ ಕಡೆಗಳಿಂದ 100 ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪಟ್ಟಣದ ಶ್ರೀ ಮಾರಮ್ಮನ ದೇವಸ್ಥಾನ ಆವರಣದಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಟ್ಯಾಂಕರ್‌ಗಳ ಮೂಲಕ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

    ಪ್ರಾಣಿಬಲಿ, ಪ್ಲಾಸ್ಟಿಕ್ ನಿಷೇಧ
    ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತಾರಣ್ಯವಾಗಿರುವುದರಿಂದ ಬೆಟ್ಟದಲ್ಲಿ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜತೆಗೆ, ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದು, ಭಕ್ತರು ಹಾಗೂ ಪ್ರವಾಸಿಗರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ಹಾಗೂ ಎಲ್ಲೆಂದರಲ್ಲಿ ಬೀಸಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ.

    ದ್ವಿಚಕ್ರ ವಾಹನ ನಿರ್ಬಂಧ
    ಜಾತ್ರೆ ಪ್ರಯುಕ್ತ ಗುಂಬಳ್ಳಿ ಹಾಗೂ ಹೊಂಡರಬಾಳು ಚೆಕ್ ಪೋಸ್ಟ್‌ನಲ್ಲಿ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಸ್‌ನಲ್ಲೇ ತೆರಳಲು ಸೂಚಿಸಲಾಗುತ್ತಿದೆ. ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

    ಬಿಳಿಗಿರಿರಂಗನಾಥಸ್ವಾಮಿ ಚಿಕ್ಕಜಾತ್ರೆಯ ಅಂಗವಾಗಿ ರಾಜ್ಯದ ಹಲವು ಕಡೆಗಳಿಂದ ಸಾವಿರಾರು ರಂಗಪ್ಪನ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಬಸ್, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗಿದೆ.
    ಮೋಹನ್ ಕುಮಾರ್
    ಕಾರ್ಯನಿರ್ವಾಹಕ ಅಧಿಕಾರಿ, ಬಿಳಿಗಿರಿರಂಗನಬೆಟ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts