More

    ಗ್ರಾಮ ಮಟ್ಟದಲ್ಲಿ ಪ್ರಯತ್ನಿಸಿ

    ಧಾರವಾಡ: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಫಲಾನುಭವಿಗಳನ್ನು ಪಾರದರ್ಶಕತೆಯಿಂದ ಆಯ್ಕೆ ಮಾಡಲು ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ವಿಶೇಷ ಪ್ರಯತ್ನ ಮಾಡಬೇಕು. ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ನಿಯಮಾನುಸಾರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸೂಚನೆ ನೀಡಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವೈಬೆಕ್ಸ್ ಮೂಲಕ ದೆಹಲಿಯಿಂದಲೇ ಮಂಗಳವಾರ, ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ (ದಿಶಾ) ನಡೆಸಿದ ಸಚಿವರು, ಮಹತ್ವಾಕಾಂಕ್ಷಿ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿ ಮತ್ತು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವಂತೆ ಅಧಿಕಾರಿಗಳು ಪ್ರಯತ್ನಿಸಬೇಕು ಎಂದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಭೂಮಿ ಹಾಗೂ ಇತರ ಸಹಕಾರ ನೀಡಲಾಗುತ್ತಿದೆ. ಫಲಾನುಭವಿಗಳಿಂದ ವಾಟ್ಸ್ಯಾಪ್ ಮೂಲಕ ಅರ್ಜಿ ಸ್ವೀಕರಿಸಿ ತಕ್ಷಣ ಅನುಮೋದಿಸಲಾಗುತ್ತಿದೆ. ಪ್ರತಿ ತಾಲೂಕಿಗೆ ಪ್ರತ್ಯೇಕ ವಾಟ್ಸ್ಯಾಪ್ ನಂಬರ್​ಗಳಿದ್ದು, ಜನರ ಮಾಹಿತಿಗೆ ಈಗಾಗಲೇ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಆಧಾರ್ ಸೀಡಿಂಗ್ ಕಾರ್ಯವೂ ಪ್ರಗತಿಯಲ್ಲಿದೆ ಎಂದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಅನರ್ಹ ಫಲಾನುಭವಿಗಳನ್ನು ಯೋಜನೆಗಳಿಗೆ ಆಯ್ಕೆ ಮಾಡಿದರೆ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ವಸತಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದಾಗಿ ಹೇಳಿದರು.

    ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಸ್ವಾಗತಿಸಿದರು.

    ಜಿಪಂ ಸಿಇಒ ಬಿ.ಸಿ. ಸತೀಶ ತರಾಟೆಗೆ: ಕುಂದಗೋಳ ತಾಲೂಕಿನಲ್ಲಿ ಕೆಲ ವರ್ಷಗಳ ಹಿಂದೆ ನರೇಗಾದಲ್ಲಿ ಅಕ್ರಮ ವ್ಯವಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಅವರನ್ನು ಸಚಿವ ಪ್ರಲ್ಹಾದ ಜೋಶಿ ಅವರು ತರಾಟೆಗೆ ತೆಗೆದುಕೊಂಡರು.

    ಕಳೆದ ಬಾರಿ ನಡೆಸಿದ ದಿಶಾ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಸೂಚಿಸಲಾಗಿತ್ತು. ಆದಾಗ್ಯೂ ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

    ಕುಂದಗೋಳ ತಾಲೂಕಿನ ವಾಲೀಕಾರ ಎಂಬ ಮಹಿಳೆ 3 ವರ್ಷಗಳ ಹಿಂದೆ ಆವಾಸ್ ಯೋಜನೆಯಲ್ಲಿ ತಾವೇ ಮನೆ ಕಟ್ಟಿಸಿಕೊಂಡಿದ್ದಾರೆ. ಆದರೆ, ಅಲ್ಲಿನ ತಾಪಂ ಇಒ ಇವರ ಹೆಸರಿನಲ್ಲಿ ನರೇಗಾ ಬಿಲ್ ತೆಗೆದು ಹಣ ದುರುಪಯೋಗ ಮಾಡಿದ್ದಾರೆ. ಈ ಕುರಿತು ದೂರಿನ ಹಿನ್ನೆಲೆಯಲ್ಲಿ ಪ್ರತಿ ಸಭೆಯಲ್ಲೂ ಚರ್ಚೆ ನಡೆಸಲಾಗಿತ್ತು. ಕಳೆದ ಬಾರಿಯ ಸಭೆಯಲ್ಲೂ ಚರ್ಚೆ ನಡೆಸಿ, ಕಾನೂನು ಕ್ರಮಕ್ಕೆ ಸಚಿವರು ಆದೇಶಿಸಿದ್ದರು. ಆದಾಗ್ಯೂ ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗರಂ ಆದರು.

    ಈ ವಿಷಯವಾಗಿ ಸಿಇಒ ಡಾ. ಸತೀಶ ಅವರು ಎಷ್ಟೇ ಸಮಜಾಯಿಷಿ ನೀಡಲು ಮುಂದಾದರೂ ಸಚಿವರು ಮಾತ್ರ ಕೇಳಲಿಲ್ಲ. ಈ ಅವ್ಯವಹಾರದ ಸಂಪೂರ್ಣ ದಾಖಲಾತಿಗಳು ನನ್ನ ಬಳಿ ಇವೆ. ‘ನಮ್ಮ ಮನೆಯಲ್ಲಿ ಯಾರೂ ನರೇಗಾ ಕೆಲಸ ಮಾಡಿಲ್ಲ. ನಾವೇ ಮನೆ ಕಟ್ಟಿಸಿಕೊಂಡಿದ್ದೇವೆ. ನನ್ನ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ಪಡೆದಿದ್ದಾರೆ’ ಎಂದು ವಾಲೀಕಾರ ಬರೆದುಕೊಟ್ಟಿದ್ದಾರೆ. ಆದಾಗ್ಯೂ ನೀವು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ನಿಮ್ಮ ಬೇಜವಾಬ್ದಾರಿತನ ಕುರಿತು ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗುವುದು ಎಂದರು.

    ಸುಳ್ಳು ವರದಿ ನೀಡಿದ ತಾಪಂ ಇಒ ಅವರನ್ನು ಮೊದಲು ಅಮಾನತು ಮಾಡಿ. ವಾಲೀಕಾರ ಅವರ ಮನೆಗೆ ಒಬ್ಬರನ್ನು ಕಳುಹಿಸಿ ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಭಾಗಿಯಾದ ಇಒ ಸೇರಿ ಎಲ್ಲರ ಮೇಲೂ ಕಾನೂನು ಕ್ರಮವಾಗಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

    ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಅಕ್ರಮದಲ್ಲಿ ಯಾವೆಲ್ಲ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts