More

    ಗ್ರಾಮೀಣ ರಸ್ತೆ ಹಾಳು, ಜನರ ಗೋಳು!

    ಬೆಳಗಾವಿ: ರಸ್ತೆಗಳು ಅಭಿವೃದ್ಧಿಯ ಆತ್ಮ ಇದ್ದಂತೆ ಎಂಬ ಮಾತಿದೆ. ಗ್ರಾಮೀಣ ಹಾಗೂ ನಗರ ಭಾಗದ ರಸ್ತೆಗಳು ಸುಸ್ಥಿತಿಯಲ್ಲಿದ್ದಷ್ಟು ಆ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಇಂಬು ನೀಡಿದಂತಾಗುತ್ತದೆ. ಆದರೆ, ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಗ್ರಾಮೀಣ ರಸ್ತೆಗಳು, ಕೆಲ ಮುಖ್ಯ ರಸ್ತೆಗಳೂ ಹದಗೆಟ್ಟು ಹೋಗಿವೆ. ದುಸ್ಥಿತಿಯಲ್ಲಿರುವ ರಸ್ತೆಗಳಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ವರ್ಷಗಳಾದರೂ ಇಲ್ಲ ದುರಸ್ತಿ: ಗ್ರಾಮೀಣ ಭಾಗದ ರಸ್ತೆಗಳಲ್ಲಿ ವಾಹನ ಓಡಾಟ ಅಷ್ಟಾಗಿರದಿದ್ದರೂ ಕಬ್ಬು ಕಟಾವು ಹಂಗಾಮಿನಲ್ಲಿ ಭಾರಿ ವಾಹನ ಸಂಚಾರ ಹೆಚ್ಚಾಗುತ್ತದೆ. ದಿನಕ್ಕೆ ನೂರಾರು ವಾಹನಗಳು ಕಬ್ಬು ಸಾಗಿಸುವುದರಿಂದ ಸಣ್ಣ ರಸ್ತೆಗಳು ಹದಗೆಡುತ್ತಿವೆ. ಅಲ್ಪ ಪ್ರಮಾಣದಲ್ಲಿ ಹಾಳಾದ ರಸ್ತೆಗಳಿಗೆ ತುರ್ತು ದುರಸ್ತಿ ಕೈಗೊಂಡರೆ ಕೆಲ ದಿನಗಳಾದರೂ ಸಂಚಾರಕ್ಕೆ ಯೋಗ್ಯವಾಗುತ್ತವೆ. ಆದರೆ, ಮೊಣಕಾಲುದ್ದ ಗುಂಡಿ ಬಿದ್ದರೂ ಪ್ಯಾಚ್ ವರ್ಕ್ ಆಗಲಿ ಸುಧಾರಣೆಯಾಗಲಿ ನಡೆಯದ್ದರಿಂದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗುತ್ತಿವೆ. ರಸ್ತೆಗಳು ಹದಗೆಟ್ಟು ವರ್ಷಗಳೇ ಆದರೂ ದುರಸ್ತಿ ಮಾತ್ರ ಆಗುತ್ತಿಲ್ಲ.

    ಜಿಲ್ಲೆಯಲ್ಲಿ 2019 ಮತ್ತು 2020ರಲ್ಲಿ ಧಾರಾಕಾರ ಮಳೆ, ನದಿ ಪ್ರವಾಹದಿಂದಾಗಿ ಸುಮಾರು 850 ಕಿ.ಮೀ. ಗ್ರಾಮೀಣ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ರಸ್ತೆಗಳು ಹಾಳಾಗಿವೆ. ಆದರೆ, ದುರಸ್ತಿ ಕಾಮಗಾರಿ ನಡೆದಿಲ್ಲ. ಇಂಥ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ಕೆಲವೆಡೆ ಸಾರಿಗೆ ಬಸ್ ಸಂಚಾರವನ್ನೇ ನಿಲ್ಲಿಸಲಾಗಿದೆ. ಇದರಿಂದ ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ. ಶಾಲೆ-ಕಾಲೇಜಿಗೆ ಹೋಗುವುದು ಅನಿವಾರ್ಯವಾದ್ದರಿಂದ ಸಾರಿಗೆ ಬಸ್ ಇಲ್ಲದಿದ್ದರೂ ವಿದ್ಯಾರ್ಥಿಗಳು ಪ್ರತಿನಿತ್ಯ 4 ರಿಂದ 5 ಕಿ.ಮೀ. ಕಾಲ್ನಡಿಗೆ ಮೂಲಕ ಸಂಚರಿಸುತ್ತಿದ್ದಾರೆ. ಪಟ್ಟಣಗಳಿಗೆ ತೆರಳುವ ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಿಗಳು ಬಸ್ ಸಂಚಾರವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.

    ಎಲ್ಲೆಲ್ಲಿ ಸಮಸ್ಯೆ?: ಮೂಡಲಗಿ ತಾಲೂಕಿನ ಕಳ್ಳಿಗುದ್ದಿ- ಕೌಜಲಗಿ, ಯಾದವಾಡ- ಹುಲಕುಂದ, ಕುಲಗೋಡ- ಹೊನಕುಪ್ಪಿ, ಹುಣಶ್ಯಾಳ ಪಿ.ವೈ- ಕುಲಗೋಡ, ಯಾದವಾಡ- ಗುಲಗಂಜಿಕೊಪ್ಪ, ಸುಣಧೋಳಿ ಗ್ರಾಮದ ರಸ್ತೆ, ಸವದತ್ತಿ ತಾಲೂಕಿನ ಸತ್ತಿಗೇರಿ- ಇಟ್ನಾಳ, ಯರಗಟ್ಟಿ- ಮುಗಳಿಹಾಳ, ಮುರಗೋಡ- ಹಲಕಿ ಕ್ರಾಸ್, ನೇಸರಗಿ, ರಾಮದುರ್ಗ ತಾಲೂಕಿನ ಹುಲಕುಂದ-ಬಾಗೋಜಿಕೊಪ್ಪ, ಚಂದರಗಿ, ಸಾಲಹಳ್ಳಿ ಸೇರಿ ವಿವಿಧ ತಾಲೂಕಿನ ರಸ್ತೆಗಳು ಹಾಳಾಗಿವೆ. 10 ವರ್ಷ ಕಳೆದರೂ ದುರಸ್ತಿ ನಡೆಯದಿರುವುದು ದುರಂತ. ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಆಯಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಳ ರಸ್ತೆಗಳೂ ದುರಸ್ತಿಗೆ: ಗ್ರಾಮದಲ್ಲಿನ ರಸ್ತೆಗಳು ಕೆಲವೆಡೆ ಸಂಪೂರ್ಣ ಹಾಳಾಗಿವೆ. ವಿವಿಧ ಯೋಜನೆಗಳಡಿ ಸರ್ಕಾರ ಗ್ರಾಮ ಪಂಚಾಯಿತಿ ಮೂಲಕ ಗ್ರಾಮದ ಒಳ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲು ಸಾಕಷ್ಟು ಅನುದಾನ ನೀಡುತ್ತಿದೆ. ಕೆಲವೆಡೆ ಸಿಸಿ ರಸ್ತೆ ನಿರ್ಮಿಸಲಾಗಿದೆಯಾದರೂ ಅವು ಸಂಪೂರ್ಣವಾಗಿಲ್ಲ. ಕೆಲವೆಡೆ ಇದ್ದ ಟಾರ್ ರಸ್ತೆಗಳು ಕಿತ್ತು ಹೋಗಿದ್ದು, ರಸ್ತೆ ಮಧ್ಯೆಯೇ ನೀರು ಸಂಗ್ರಹವಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

    ಪಾಸ್ ಇದೆ, ಬಸ್ ಇಲ್ಲ!

    ನಮ್ಮ ಊರುಗಳಿಂದ ಶಾಲೆ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿದೆ. ಆದರೆ, ಬಸ್‌ಗಳು ಇಲ್ಲ. ಬಸ್‌ಗಾಗಿ ನಿತ್ಯ 4 ಕಿಮೀ ನಡೆದುಕೊಂಡು ಹೋಗುತ್ತಿದ್ದೇವೆ. ಬೆಳಗ್ಗೆ 6 ಗಂಟೆಗೆ ಒಂದು ಬಸ್ ಬರುತ್ತದೆ. ತದನಂತ ರಾತ್ರಿ 8 ಗಂಟೆಗೆ ಒಂದು ಬಸ್ ಬರುತ್ತದೆ. ನಮ್ಮ ಶಾಲೆ ಬೆಳಗ್ಗೆ 9:45ಕ್ಕೆ ಆರಂಭವಾಗುತ್ತದೆ. ಹಾಗಾಗಿ, ನಾವು ಬಸ್‌ನಲ್ಲಿ ಪ್ರಯಾಣಿಸಬೇಕಾದರೆ 4 ಕಿ.ಮೀ. ನಡೆದುಕೊಂಡು ಹೋಗಬೇಕು ಎಂದು ವಿದ್ಯಾರ್ಥಿಗಳಾದ ಶಿವು ಮಾದರ, ವಿಠ್ಠಲ ಭಜಂತ್ರಿ, ರೇಣುಕಾ ನಾಯಕ ಇತರರು ದೂರಿದ್ದಾರೆ.

    ಅತಿವೃಷ್ಟಿ, ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ ಹಾಳಾದ ರಸ್ತೆ ದುರಸ್ತಿ ಆಗದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಸ್ತೆ ದುರಸ್ತಿ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.
    | ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts