More

    ಗ್ರಂಥಾಲಯಗಳು ವಿದ್ಯಾಸಂಸ್ಥೆಗಳ ಆತ್ಮ – ಡಾ. ಎಂ.ಜಿ. ಈಶ್ವರಪ್ಪ ಹೇಳಿಕೆ -ಎವಿಕೆ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹ

    ದಾವಣಗೆರೆ: ಗ್ರಂಥಾಲಯಗಳೇ ಶಾಲಾ-ಕಾಲೇಜುಗಳಿಗೆ ನಿಜವಾದ ಆತ್ಮ. ಜ್ಞಾನ ಬೆಳೆಯಬೇಕಾದರೆ ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕ ಇರಬೇಕು ಹಾಗೂ ಬಿಡುವಿನ ವೇಳೆ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರಬೇಕು ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.
    ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ಅಭಿರುಚಿ ಇದು ಓದುಗರ ವೇದಿಕೆ’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಓದು ನಮ್ಮ ಜೀವನವನ್ನೇ ಉತ್ತುಂಗದತ್ತ ಕೊಂಡೊಯ್ಯಲಿದೆ ಎಂದರು.
    ‘ಪುಸ್ತಕಂ ಹಸ್ತ ಲಕ್ಷಣಂ’ ಎಂಬ ಮಾತಿದೆ. ಕೈಯಲ್ಲಿ ಪುಸ್ತಕ ಇದ್ದರೆ ಅದುವೇ ಭೂಷಣ ಎಂಬುದು ಈ ಮಾತಿನ ಅರ್ಥ. ಜ್ಞಾನ ಬೇಕಾದರೆ ಪುಸ್ತಕ ಬೇಕೇ ಬೇಕು. ಎಲ್ಲರಲ್ಲೂ ಓದಿನ ರುಚಿ ಅಗತ್ಯ ಎಂದು ಹೇಳಿದರು.
    ಬಿಐಇಟಿ ಕಾಲೇಜಿನ ಗ್ರಂಥಪಾಲಕ ಕೆ.ವಿ. ಮಂಜುನಾಥ್ ಮಾತನಾಡಿ ಮೊಬೈಲ್‌ನಲ್ಲಿ ಪಿ.ಡಿ.ಎಫ್ ಇತ್ಯಾದಿ ರೂಪದಲ್ಲಿ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಮುದ್ರಿತ ಪುಸ್ತಕವನ್ನು ಕೈಯಲ್ಲಿಡಿದು ಓದಿದ್ದು ಸ್ಮರಣೀಯವಾಗಿ ಇರಲಿದೆ ಎಂದು ತಿಳಿಸಿದರು.
    ಪ್ರಾಸ್ತಾವಿಕ ಮಾತನಾಡಿದ ಎ.ವಿ.ಕೆ. ಕಾಲೇಜಿನ ಗ್ರಂಥಪಾಲಕ ಎಚ್. ಸತೀಶ, ವಿದ್ಯಾರ್ಥಿಗಳು ಕಾಲೇಜು ಪುಸ್ತಕಗಳನ್ನು ಬಿಟ್ಟು ನೋಟ್ಸ್‌ಗಳಿಗೆ ಅಂಟಿಕೊಂಡಿದ್ದಾರೆ. ಇದರಿಂದ ಅಂಕ ಗಳಿಸಿದರೂ ಸಹ, ಉದ್ಯೋಗಕ್ಕೆ ಅಗತ್ಯ ಕೌಶಲ ಸಿಗುವುದಿಲ್ಲ. ಪುಸ್ತಕಗಳು ಜ್ಞಾನ ಹಾಗೂ ಕೌಶಲದ ಮಾರ್ಗ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಎ.ವಿ.ಕೆ. ಕಾಲೇಜಿನ ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ್ ಮಾತನಾಡಿ, ಕಾಲೇಜು ಶಿಕ್ಷಣವಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಜ್ಞಾನ ಪುಸ್ತಕ ಹಾಗೂ ನಿಯತಕಾಲಿಕಗಳಿಂದ ಸಿಗುತ್ತದೆ. ಇಂತಹ ಸೌಲಭ್ಯ ಕಾಲೇಜಿನಲ್ಲಿದ್ದು ವಿದ್ಯಾರ್ಥಿನಿಯರು ಬಳಸಿಕೊಳ್ಳಬೇಕು ಎಂದರು.
    ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಹ ಸಂಚಾಲಕ ಪ್ರೊ.ಆರ್.ಆರ್. ಶಿವಕುಮಾರ್ ಇದ್ದರು. ಎಸ್.ಜಿ. ಪಲ್ಲವಿ ಪ್ರಾರ್ಥಿಸಿದರೆ, ಅನುಷಾ ಬಾಯಿ ಸ್ವಾಗತಿಸಿದರು. ಕೆ.ಎಂ. ಲಕ್ಷ್ಮೀ ಹಾಗೂ ಕೆ.ಪಿ. ಭಾರ್ಗವಿ ನಿರೂಪಿಸಿದರು. ಬಿ.ಎಚ್. ಅಕ್ಷತಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts