More

    ಗೌರವಧನ ಹೆಚ್ಚಳಕ್ಕೆ ಒತ್ತಾಯ  -ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು

    ದಾವಣಗೆರೆ: ಮಾಸಿಕ 15 ಸಾವಿರ ರೂ.ಗೆ ಗೌರವಧನ ಹೆಚ್ಚಿಸಬೇಕು. ನಿವೃತ್ತಿ ವೇಳೆ 3 ಲಕ್ಷ ರೂ. ನೀಡಬೇಕು. ಮಾಸಿಕ 5 ಸಾವಿರ ರೂ.ಗಳ ಪಿಂಚಣಿ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

    ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು ಉಪವಿಭಾಗಾಧಿಕಾರಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
    ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ್ದ ಮೊಬೈಲ್‌ಗಳು ಕಳಪೆಯದಾಗಿದ್ದು ಅದರಲ್ಲಿ ಮಾಹಿತಿ ಸಂಗ್ರಹ ಸೇರಿ ಇತರೆ ಕೆಲಸ ಮಾಡುವುದು ಕಷ್ಟಸಾಧ್ಯವಾಗಿದೆ. ಇದರ ಬದಲಾಗಿ ಹೊಸ ಮೊಬೈಲ್ ಅಥವಾ ಮಿನಿ ಟ್ಯಾಬ್‌ಗಳನ್ನು ವಿತರಿಸಬೇಕೆಂದು ಆಗ್ರಹಿಸಿದರು.
    ಆರೋಗ್ಯ ಇಲಾಖೆಯ ಇ-ಸಮೀಕ್ಷೆಯನ್ನು ನಡೆಸಿ ಅವರ ಮೊಬೈಲ್‌ಗಳಲ್ಲಿ ಮಾಹಿತಿ ಅಪ್‌ಲೋಡ್ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಇದನ್ನು ಮಾಡದವರ ಗೌರವಧನ ಕಡಿತ ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಲಾಗುತ್ತಿದೆ. ಈ ಕೆಲಸದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
    ಎನ್‌ಆರ್‌ಸಿ ಕೇಂದ್ರಕ್ಕೆ ಮಕ್ಕಳನ್ನು ಸೇರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅಡುಗೆ ಕೆಲಸಕ್ಕೆ ಅಂಗನವಾಡಿ ಸಹಾಯಕಿಯರನ್ನು ತೆಗೆದುಕೊಳ್ಳಬಾರದು. ಅಂಗನವಾಡಿ ಕೇಂದ್ರಗಳ ಬಾಕಿ ಇರುವ ಬಾಡಿಗೆ ಹಣ ಬಿಡುಗಡೆಗೊಳಿಸಬೇಕು. ಬಹುವರ್ಷದಿಂದ ಒಂದೆಡೆ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು-ಮೇಲ್ವಿಚಾರಕಿಯರು ಸೇರಿ ಎಲ್ಲ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಬೇಕು.
    ಟೆಂಡರ್ ಪರಿಣಾಮ ಅಂಗನವಾಡಿಗಳಿಗೆ ಪೂರೈಸಲಾಗುವ ಮೊಟ್ಟೆಗಳು ಕಡಿಮೆ ಗಾತ್ರ ಹಾಗೂ ಕಳಪೆಯಾಗಿವೆ. ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸಕಾಲಕ್ಕೆ ಸರಬರಾಜು ಮಾಡುತ್ತಿಲ್ಲ. ಹೀಗಾಗಿ ಮೊಟ್ಟೆ ಖರೀದಿ ಜವಾಬ್ದಾರಿಯನ್ನು ಬಾಲವಿಕಾಸ ಸಮಿತಿಗೆ ನೀಡಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಮ್ಮ, ಆವರಗೆರೆ ವಾಸು, ಕೆ.ಸಿ.ನಿರ್ಮಲಾ, ಗೀತಾ, ಸರ್ವಮ್ಮ, ಆವರಗೆರೆ ವಾಸು, ಜಿ. ರೇಣುಕಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts