More

    ಗುರುಕುಲ ಮರುಸ್ಥಾಪಿಸುವ ಸಂಕಲ್ಪ

    ಚಿತ್ರದುರ್ಗ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಎಲ್ಲ ಹಂತದಲ್ಲೂ ಸದೃಢರನ್ನಾಗಿಸಬೇಕಿದೆ. ಹೀಗಾಗಿ ಹಿಂದಿನಂತೆಯೇ ಗುರುಕುಲ ವಿದ್ಯಾಭ್ಯಾಸ ಮರು ಸ್ಥಾಪಿಸುವ ನಿಟ್ಟಿನಲ್ಲಿ ಎಬಿವಿಪಿ ಸಂಕಲ್ಪ ಮಾಡಿದ್ದು, ಅದಕ್ಕಾಗಿ ಕಾರ್ಯಪ್ರವೃತ್ತವಾಗಿದೆ ಎಂದು ಪ್ರಾಧ್ಯಾಪಕ ಡಾ.ರಾಘವೇಂದ್ರ ತಿಳಿಸಿದರು.

    ಎಬಿವಿಪಿ ಸಂಘಟನೆಯಿಂದ ತರಾಸು ರಂಗಮಂದಿರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪಾಲಕರು, ಗುರು-ಹಿರಿಯರು, ಸಮಾಜ ಹಾಗೂ ಭಾರತಮಾತೆಯ ಋಣ ತೀರಿಸುವ ಚಿಂತನೆ ಇಲ್ಲದಿದ್ದರೆ ಎಷ್ಟೇ ಓದಿದರೂ ಪ್ರಯೋಜನ ಇಲ್ಲ ಎಂದರು.

    ದೇಶವೆಂದರೆ ಒಂದು ಭೌಗೋಳಿಕ ಭೂ ಭಾಗ ಮತ್ತು ಅಲ್ಲಿನ ಸರ್ಕಾರಗಳ ಆಡಳಿತ ವ್ಯವಸ್ಥೆಯಾಗಿದೆ. ಆದರೆ, ರಾಷ್ಟ್ರ ಎಂದರೆ ಸಂಸ್ಕೃತಿ, ಪರಂಪರೆ, ಕಲೆ ಸೇರಿ ಸರ್ವವನ್ನೂ ಒಳಗೊಂಡಿದೆ. ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.

    ದೇಶ ಕಟ್ಟಲಿಕ್ಕೆ ಏನು ಉಳಿದಿಲ್ಲ. ಆದರೆ, ರಾಷ್ಟ್ರ ನಿರ್ಮಾಣದ ಕೆಲಸಗಳು ಸಾಕಷ್ಟಿದ್ದು, ಯುವಸಮೂಹದಿಂದಲೇ ಆಗಬೇಕಿದೆ. ವಿದ್ಯಾರ್ಥಿ ಸಂಕುಲ ಮೌನಕ್ಕೆ ಜಾರಿದಷ್ಟು ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ನಿಮ್ಮ ಉನ್ನತಿ ಜತೆಗೆ ಭಾರತದ ಪ್ರಗತಿಯೂ ಆಗಬೇಕು ಎಂದು ಸಲಹೆ ನೀಡಿದರು.

    ಎಬಿವಿಪಿ ಎಂದರೆ ಅದ್ಭುತ, ಭವ್ಯ, ವೈವಿಧ್ಯ, ಪ್ರತಿಷ್ಠಿತ ಸಂಘಟನೆ. ಇಲ್ಲಿ ಸದಸ್ಯರಾಗಿ ಸಮಾಜ ಪರಿವರ್ತನೆಗಾಗಿ ಶ್ರಮಿಸುವ ಪುಣ್ಯ ಇಂದಿನ ವಿದ್ಯಾರ್ಥಿಗಳಿಗೆ ಯೋಗದ ಜತೆ ಯೋಗ್ಯತೆ ಎರಡೂ ಲಭಿಸಿದ್ದು, ನೀವುಗಳೇ ಧನ್ಯರು ಎಂದರು.

    ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ನಂತರ ದೇಶದ ಜನರನ್ನು ಕಾಯುವವರು ಯಾರು ಎಂಬ ಪ್ರಶ್ನೆಗೆ ನಿಮ್ಮಲ್ಲೇ ಉತ್ತರವಿದೆ. ತಲಾ 10 ಸಾವಿರ ಮೋದಿ, ಯೋಗಿ ಅಂಥವರನ್ನು ರಾಷ್ಟ್ರಕ್ಕೆ ನೀಡುವ ಶಕ್ತಿ ಎಬಿವಿಪಿಗೆ ಇದೆ ಎಂದು ಹೇಳಿದರು.

    ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರೇಮಾಶ್ರೀ ಮಾತನಾಡಿ, ವಿಶ್ವಕ್ಕೆ ಬೆಳಕು ಚೆಲ್ಲಿದ ಸ್ವಾಮಿ ವಿವೇಕಾನಂದರ ಸ್ಫೂರ್ತಿಯೊಂದಿಗೆ ಆರಂಭವಾದ ಎಬಿವಿಪಿ ಜಗತ್ತಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿ ಸದಸ್ಯರನ್ನು ಹೊಂದಿರುವ ಏಕೈಕ ಸಂಘಟನೆಯಾಗಿದೆ ಎಂದು ತಿಳಿಸಿದರು.

    ದೇಶ ಮತ್ತು ಸಮಾಜದಲ್ಲಿ ವಿದ್ಯಾರ್ಥಿಗಳಿಗಾಗಿ ಶ್ರಮಿಸುತ್ತಿರುವ ಸಂಘಟನೆಯಾಗಿರುವ ಎಬಿವಿಪಿ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರದ ಬೆಳವಣಿಗೆಯ ಚಿಂತನೆ ಹೊಂದಿದೆ. ಇದನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದಾಗ ಭಾರತ ವಿಶ್ವ ಗುರುವಾಗಲು ಸಾಧ್ಯ. ಅದಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ ಎಂದು ಸಲಹೆ ನೀಡಿದರು.

    ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿಗೆ ಸ್ವಯಂ ರಕ್ಷಣೆಯ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಶ್ರಮಿಸುತ್ತಿದೆ. ಸಮಾಜದ ಸಮಸ್ಯೆಯನ್ನು ತನ್ನದೆಂದು ಪರಿಗಣಿಸಿ ಹೋರಾಡುತ್ತಿದೆ ಎಂದರು.
    ಕಾರ್ಯಕಾರಿ ಸಮಿತಿ ಸದಸ್ಯ ಆದರ್ಶ ಇದ್ದರು.

    *ಕೋಟ್
    ಶಿಕ್ಷಣದ ಜತೆ ರಾಷ್ಟ್ರದ ಹಿತಾಸಕ್ತಿ ಮುಖ್ಯ. ಜ್ಞಾನ, ಶೀಲಾ, ಏಕತೆ ಮೂರು ಚಿಂತನೆಯೊಂದಿಗೆ ಸಂಘಟನೆ ಮುನ್ನಡೆಯುತ್ತಿದೆ. ಇದು ಸ್ವಾರ್ಥಕ್ಕಾಗಿ ಅಲ್ಲ, ರಾಷ್ಟ್ರಕ್ಕಾಗಿ ಇರುವ ಸಂಘಟನೆ ಎಂಬುದನ್ನು ಮರೆಯಬೇಡಿ.
    ಡಾ.ಅಜಯ್‌ಕುಮಾರ್
    ಎಬಿವಿಪಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts