More

    ಗಾಯಗೊಂಡ ಕಾಡಾನೆ ಸಾವು

    ಮುಂಡಗೋಡ: ತಾಲೂಕಿನ ಗುಂಜಾವತಿ ಅರಣ್ಯ ಪ್ರದೇಶದ ಅರಳಿಕಟ್ಟೆ ಕೆರೆಯಲ್ಲಿ ಕಳೆದ ಮೂರು ದಿನಗಳಿಂದ ಅಸ್ವಸ್ಥಗೊಂಡು ಬಿದ್ದಿದ್ದ ಹೆಣ್ಣು ಕಾಡಾನೆ ಗುರುವಾರ ಸಂಜೆ ಮೃತಪಟ್ಟಿದೆ.

    ಬಲ ಭಾಗದ ಕಿವಿಗೆ ಹುಳುಗಳು ಬಿದ್ದಿದ್ದರಿಂದ ಕಾಡಾನೆಯು 3 ದಿನಗಳಿಂದ ಆಹಾರ ಸೇವಿಸದೆ ಸಾವು ಬದುಕಿನ ನಡುವೆ ಹೋರಾಡುತ್ತ ಬಿದ್ದು ನರಳಾಡುತ್ತಿತ್ತು. ಈ ಕುರಿತು ಏ. 17ರಂದು ವಿಜಯವಾಣಿಯಲ್ಲಿ ಕಾಡಾನೆ ಕಿವಿಯಲ್ಲಿ ಕಾಣಿಸಿಕೊಂಡ ಹುಳು ಎಂಬ ಶೀರ್ಷಿಕೆ

    ಯಡಿ ವರದಿ ಪ್ರಕಟವಾಗಿತ್ತು. ಅಂದಾಜು 15-20 ವರ್ಷದ ಈ ಹೆಣ್ಣು ಕಾಡಾನೆ ಕಳೆದ 15 ದಿನಗಳ ಹಿಂದೆಯೇ ಮೊದಲು ಕ್ಯಾತನಳ್ಳಿಯ ಅರಣ್ಯದ ಕೆರೆಯೊಂದರಲ್ಲಿ ಬಲಭಾಗದ ಕಿವಿಗೆ ಗಾಯದ ಜತೆಗೆ ಹುಳುಗಳು ಬಿದ್ದು ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ವೇಳೆ ಸೂಕ್ತವಾದ ಚಿಕಿತ್ಸೆ ನೀಡಿದ್ದರೆ ಅದು ಗುಣಮುಖವಾಗಬಹುದಿತ್ತು. ಅದರ ದೇಹದಲ್ಲಿ ಹುಳುಗಳು ಹೆಚ್ಚಾಗಿ ಅದು ಬರೀ ಕೆರೆಗಳನ್ನೇ ಅರಸುತ್ತ ಬಡ್ಡಿಗೇರಿ, ಕಳ್ಳ ಬೊಮ್ಮನಳ್ಳಿ, ಮೂಕನಕಟ್ಟಿ ಕೆರೆಗಳನ್ನು ಸುತ್ತಾಡಿತ್ತು. ಸದ್ಯ ಗುಂಜಾವತಿಯ ಅರಳಿಕಟ್ಟಿ ಕೆರೆಯಲ್ಲಿ ಬಂದು ಗಾಯವಾದ ಬಲ ಭಾಗವನ್ನು ನೀರಿನಲ್ಲಿ ಮುಳುಗಿಸಿಕೊಂಡು ಒದ್ದಾಡುತ್ತಿತ್ತು. ಆಹಾರ ಸೇವಿಸದೆ ನಿತ್ರಾಣವಾಗಿತ್ತು.

    ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಎಸಿಎಫ್ ಶ್ರೀಶೈಲ ವಾಲಿ, ಆರ್​ಎಫ್​ಒ ಸುರೇಶ ಕುಳ್ಳೊಳ್ಳಿ, ಕಾತೂರ ಆರ್​ಎಫ್​ಒ ಅಜಯ ನಾಯ್ಕ ಮತ್ತು ಸಿಬ್ಬಂದಿ ಆನೆಯನ್ನು ನೀರಿನಿಂದ ಹೊರಗೆ ತೆಗೆಯಲು ಕ್ರೇನ್ ಅನ್ನು ತರಿಸಿದ್ದರು. ಆದರೆ, ಕ್ರೇನ್​ನ ಸಹಾಯದಿಂದ ಆನೆಯನ್ನು ಮೇಲೆತ್ತುವಾಗ ಆನೆ ದಡಕ್ಕೆ ಬರುವಷ್ಟರಲ್ಲಿಯೇ ಪ್ರಾಣ ಬಿಟ್ಟಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕಾಡಾನೆ ಮೃತಪಟ್ಟಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

    ಆನೆಯ ಇಡಿ ದೇಹಕ್ಕೆ ಸೋಂಕು ತಗುಲಿ ಬ್ಯಾಕ್ಟೀರಿಯಾಗಳು ದೇಹದ ಭಾಗಗಳನ್ನೆಲ್ಲ ಆವರಿಸಿವೆ. ಬಲ ಭಾಗದ ಕಿವಿಗೆ ಹುಳುಗಳಾಗಿ ತೂತುಗಳು ಬಿದ್ದು ಗಂಭೀರವಾಗಿ ಗಾಯವಾಗಿದೆ. ಹುಳುಗಳು ಜಾಸ್ತಿಯಾಗಿದ್ದರಿಂದ ಮೀನುಗಳು ಹುಳುಗಳನ್ನು ತಿನ್ನುತ್ತವೆ ಎಂದು ಆನೆ ನೀರಿನಲ್ಲಿ ಬಿದ್ದಿದೆ. ಸೋಂಕು ಜಾಸ್ತಿಯಾಗಿ ಜ್ವರ ಬಂದು ಆಹಾರ ಸೇವಿಸುವುದನ್ನೂ ಬಿಟ್ಟಿತ್ತು.
    | ಡಾ. ವಿನಯ ಆನೆ ತಜ್ಞ ಶಿವಮೊಗ್ಗ

    ವೈದ್ಯಾಧಿಕಾರಿ ಬಂದು ಚಿಕಿತ್ಸೆ ನೀಡುವ ತಯಾರಿಯಲ್ಲಿದ್ದರು. ಆದರೆ, ಜರ್ಜರಿತವಾದ ಆನೆ ಮೃತಪಟ್ಟಿತು. ಇಲಾಖೆಯಿಂದ ಪ್ರಯತ್ನಿಸಲಾಗಿತ್ತು. ವನ್ಯ ಜೀವಿಯನ್ನು ಕಳಕೊಂಡ ಬಗ್ಗೆ ವಿಷಾದವಿದೆ.
    | ಗೋಪಾಲಕೃಷ್ಣ ಹೆಗಡೆ ಡಿಎಫ್​ಒ ಯಲ್ಲಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts