More

    ಗಣೇಶನ ಹಬ್ಬಕ್ಕೆ ಕರೊನಾ ಕರಿನೆರಳು



    ಲಕ್ಷ್ಮೇಶ್ವರ: ಕರೊನಾ ಭೀತಿ ಮತ್ತು ಸರ್ಕಾರದ ನಿಬಂಧನೆಗಳಿಂದಾಗಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

    ಕೆಲ ಮಂಡಳಿಯವರು ಗಣೇಶ ಪ್ರತಿಷ್ಠಾಪನೆ ಕೈ ಬಿಟ್ಟಿದ್ದರೆ, ಕೆಲವರು ಸಂಪ್ರದಾಯ ಬಿಡಬಾರದೆಂದು 4 ಅಡಿಗಿಂತ ಚಿಕ್ಕದಾದ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. 4 ಅಡಿಗಿಂತ ದೊಡ್ಡ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಮೆರವಣಿಗೆ ಸೇರಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂಬಿತ್ಯಾದಿ ಕಟ್ಟುಪಾಡುಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುತ್ತಿದ್ದ ಗಣೇಶ ಮೂರ್ತಿಗಳ ಸಂಖ್ಯೆ ಕಡಿಮೆಯಾಗಿದೆ. ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 143 ಸಾರ್ವಜನಿಕ ಗಣೇಶಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ. ಲಕ್ಷೇಶ್ವರದಲ್ಲಿ 40 ಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ.

    ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಶೇ.30ರಷ್ಟು ಗಣೇಶ ಮೂರ್ತಿಗಳು ಮಾರಾಟವಾಗಿಲ್ಲ. ಪ್ರತಿವರ್ಷ ಪಟ್ಟಣದಿಂದ ಗ್ರಾಮೀಣ ಪ್ರದೇಶ ಮತ್ತು ಬೇರೆ ಜಿಲ್ಲೆಗಳಿಗೆ ಮೂರ್ತಿಗಳು ಮಾರಾಟವಾಗುತ್ತಿದ್ದವು. ಆದರೆ, ಈ ವರ್ಷ ಕಡಿಮೆ ಸಂಖ್ಯೆಯಲ್ಲಿ ಮೂರ್ತಿಗಳು ಮಾರಾಟವಾಗಿದ್ದರಿಂದ ಕಲಾವಿದರಿಗೆ ಸಾಕಷ್ಟು ನಷ್ಟವಾಗಿದೆ.

    ‘ಸರ್ಕಾರ ಮೊದಲು ಏನನ್ನೂ ಹೇಳದ್ದರಿಂದ ಅಂದಾಜಿನಂತೆ ಸಿದ್ಧಪಡಿಸಿದ ಸಾವಿರಾರು ರೂ. ಮೌಲ್ಯದ ಗಣೇಶ ಮೂರ್ತಿಗಳು ಹಾಗೆಯೇ ಉಳಿದಿವೆ. ಮೂರ್ತಿ ತಯಾರಿಕೆ ಕೆಲಸದಿಂದಲೇ ಬದುಕು ಕಟ್ಟಿಕೊಂಡಿರುವ ನಮ್ಮಂತಹ ಅನೇಕ ಕುಟುಂಬಗಳು ಕಂಬದ ಪೆಟ್ಟು ಕಪಾಳದ ಪೆಟ್ಟು ಅನುಭವಿಸುವಂತಾಗಿದೆ. ಸರ್ಕಾರ ಕಲಾವಿದರ ಬದುಕಿನತ್ತಲೂ ಚಿತ್ತ ಹರಿಸಬೇಕು’ ಎಂದು ಕಲಾವಿದರಾದ ಸಹನರಾಜ ಚಕ್ರಸಾಲಿ, ಫಕಿರೇಶ ಕುಂಬಾರ, ರಮೇಶ ತೋರಗಲ್, ಪ್ರವೀಣ ಗಾಯಕರ, ಪ್ರಕಾಶ ಕುಂಬಾರ ಮತ್ತಿತರರು ಆಗ್ರಹಿಸಿದ್ದಾರೆ.

    ವ್ಯಾಪಾರದ ಮೇಲೂ ಪರಿಣಾಮ

    ಹೂವು, ಹಣ್ಣು, ಅಲಂಕಾರಿಕ ವಸ್ತುಗಳು, ಪಟಾಕಿ ವ್ಯಾಪಾರದ ಮೇಲೆ ಕರೊನಾ ಕರಿನೆರಳು ಆವರಿಸಿದ್ದು ಕಂಡು ಬಂದಿತು. ಪ್ರತಿವರ್ಷ ಹಬ್ಬಕ್ಕೆ 2 ದಿನ ಮುಂಚೆಯೇ ವ್ಯಾಪಾರ ಜೋರಾಗಿರುತ್ತಿತ್ತು. ಈ ವರ್ಷ ಹಣ್ಣು ಮಾರಾಟವಾಗದೇ ಕೊಳೆಯುತ್ತಿದೆ ಎಂದು ವ್ಯಾಪಾರಿ ಶಂಕರ ಬಳ್ಳಾರಿ ಅಳಲು ತೋಡಿಕೊಂಡರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts