More

    ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೂಚನೆ


    ಮೈಸೂರು : ಗೌರಿ, ಗಣೇಶ ಹಬ್ಬದ ಆಚರಣೆಯನ್ನು ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಯಿಂದ ಆಚರಿಸಲು ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಕೋರಿದರು.

    ಹುಣಸೂರು ನಗರ ಠಾಣೆಯಲ್ಲಿ ಶನಿವಾರ ಈ ಕುರಿತು ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಕೋವಿಡ್ ಸಂಕಷ್ಟದ ನಂತರ ಇದೀಗ ಸಹಜಸ್ಥಿತಿಗೆ ನಾವೆಲ್ಲರೂ ಮರಳಿದ್ದು, ಸರ್ಕಾರ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅನುಮತಿ ನೀಡಿದೆ. ಜತೆಯಲ್ಲಿಯೇ ಕಾನೂನು ಸುವ್ಯವಸ್ಥೆ, ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲವು ಸೂಚನೆಗಳನ್ನೂ ನೀಡಿದ್ದು ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಜತೆಗ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ ಎಂದು ತಿಳಿಸಿದರು.


    ಸಾರ್ವಜನಿಕ ಸ್ಥಳಗಳಲ್ಲಿ ಸಂಘ, ಸಂಸ್ಥೆಗಳು ಗಣೇಶನನ್ನು ಇಡುವ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಸರ್ಕಾರ ಸೂಚನೆಗಳನ್ನು ನೀಡಿದ್ದು, ಅವುಗಳನ್ನು ಎಲ್ಲರೂ ಪಾಲಿಸಬೇಕು. ಗಣೇಶನ ಪೆಂಡಾಲ್‌ನಲ್ಲಿ ರಾತ್ರಿ ವೇಳೆ ಯಾರೂ ಇಲ್ಲದಂತೆ ಬಿಟ್ಟುಹೋಗಬೇಡಿ. ಆಯೋಜಕರು ರಾತ್ರಿ ಪಾಳಿಯಲ್ಲಿ ತಮ್ಮ ಸ್ವಯಂ ಸೇವಕರನ್ನು ಅಲ್ಲೇ ಉಳಿಯುವಂತೆ ಮಾಡಬೇಕು. ಹಬ್ಬವನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ಆಚರಿಸಲು ಪ್ರಾಮುಖ್ಯತೆ ನೀಡಿರೆಂದು ಸೂಚಿಸಿದರು.


    ಡಿವೈಎಸ್‌ಪಿ ರವಿಪ್ರಸಾದ್ ಮಾತನಾಡಿ, ಆ.31ರಂದು ಗಣೇಶ ಹಬ್ಬವಿದ್ದು, ಆ.28ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಕೂರಿಸಲು ಇಚ್ಛಿಸುವ ಸಂಘ ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸಬೇಕು. ನಗರಠಾಣೆಯಲ್ಲಿ ಅರ್ಜಿ ಸಲ್ಲಿಸಬೇಕು. ಅಲ್ಲೇ ಆಚರಣೆಗೆ ಅನುಮತಿ ನೀಡಲು ಅವಶ್ಯವಿರುವ ಸೆಸ್ಕ್, ಅಗ್ನಿಶಾಮಕದಳ, ನಗರಸಭೆಯ ಅಧಿಕಾರಿಗಳು ಇರಲಿದ್ದು, ಏಕಗವಾಕ್ಷಿ ಪದ್ಧತಿಯ ಮೂಲಕ 3 ದಿನಗಳೊಳಗೆ ಅನುಮತಿ ನೀಡಲಾಗುವುದು. ಎಲ್ಲದಕ್ಕೂ ಸೂಕ್ತ ದಾಖಲೆಗಳು ಅಗತ್ಯವೆಂದು ತಿಳಿಸಿದರು.
    ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ, ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲು ಯತ್ನಿಸಿದರೆ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ ಎಲ್ಲರೂ ಒಂದಾಗಿ ಹಬ್ಬವನ್ನು ಶಾಂತಿ ಸಾಮರಸ್ಯದಿಂದ ಆಚರಿಸೋಣವೆಂದರು.


    ಸಭೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಸಿ.ವಿ.ರವಿ, ಚಿಕ್ಕಸ್ವಾಮಿ, ನಗರಸಭೆ ಉಪಾಧ್ಯಕ್ಷೆ ಆಶಾ, ನಗರಸಭೆ ಆರೋಗ್ಯ ನಿರೀಕ್ಷಕ ಸತೀಶ್, ಅಗ್ನಿಶಾಮಕದಳದ ಅಧಿಕಾರಿ ಸತೀಶ್, ವಿವಿಧ ವಾರ್ಡ್‌ಗಳ ವಿವಿಧ ಕೋಮಿನ ಮುಖಂಡರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts