More

    ಗಡಿ ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಅಗತ್ಯ – ಗೋವಿಂದ ಕಾರಜೋಳ

    ಬೆಳಗಾವಿ: ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಇತರ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡುವುದು ಅಗತ್ಯವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿನ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಲಾಕ್‌ಡೌನ್ ವಿಸ್ತರಣೆ ಮಾಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಈ ಜಿಲ್ಲೆಗಳ ಪರಿಸ್ಥಿತಿ ಕುರಿತು ಸಿಎಂ ಗಮನಕ್ಕೆ ತರಲಾಗುವುದು ಎಂದರು.

    ಒಂದು ವೇಳೆ ರಾಜ್ಯ ಸರ್ಕಾರವು ಲಾಕ್‌ಡೌನ್ ತೆರವು ಮಾಡಿದರೆ ಗಡಿ ಜಿಲ್ಲೆಗಳಲ್ಲಿ ನೆರೆಯ ರಾಜ್ಯಗಳಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೆ, ಕರೊನಾ ಸೋಂಕು ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.

    ಹೀಗಾಗಿ ಜನರ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ವಿಸ್ತರಣೆ ಕುರಿತು ವೈದ್ಯರ ತಂಡ, ಅಧಿಕಾರಿಗಳು ನೀಡುವ ಮಾಹಿತಿ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವೈದ್ಯರ ಕೊರತೆ ಮತ್ತು ಆಸ್ಪತ್ರೆಗಳಲ್ಲಿ ಸೌಲಭ್ಯ ಕೊರತೆ ಇಲ್ಲ. ಆದರೂ, ಚಿಕಿತ್ಸೆ ಅವಶ್ಯಕತೆ ಇದ್ದರೆ ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ಬಳಸಿಕೊಳ್ಳಲು ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾಗಿರುವ ಸೌಲಭ್ಯ ಖರೀದಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿರುವ 130 ಬ್ಲ್ಯಾಕ್ ಫಂಗಸ್ ಪ್ರಕರಣಗಳಲ್ಲಿ 15 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

    ಅಧಿಕಾರಿ ನೇಮಕ: ನೆರೆಯ ಸಂದರ್ಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಸಮನ್ವಯ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನೀರಾವರಿ ಇಲಾಖೆಯ ಅಧಿಕಾರಿ ಯೊಬ್ಬರನ್ನು ಪ್ರತ್ಯೇಕವಾಗಿ ನೇಮಕ ಮಾಡಲಾಗಿದೆ. ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಕುರಿತು ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಸಚಿವ ಕಾರಜೋಳ ಹೇಳಿದರು.

    ಪರ್ಯಾಯ ನಾಯಕತ್ವದ ಪ್ರಶ್ನೆಯೇ ಇಲ್ಲ: ಕೋವಿಡ್ ಸಂಕಷ್ಟದ ಸಮಯದಲ್ಲಿ ವಿಶ್ರಾಂತಿ ಇಲ್ಲದೆ ಸಮರ್ಥ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದಿನ ಪೂರ್ಣ ಅವಧಿ ಮುಗಿಯುವರಗೂ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಹಾದಿ ಬದಿಯಲ್ಲಿ ಮಾತನಾಡುವವರ ಬಳಿ ನಾಯಕತ್ವ ಬದಲಾಯಿಸುವ ಸಾಮರ್ಥ್ಯ ಇರುವುದಿಲ್ಲ. ನಾಯಕತ್ವ ಬದಲಾವಣೆ ಅಧಿಕಾರ ಇರುವುದು ಹೈಕಮಾಂಡ್‌ಗೆ ಮಾತ್ರ. ಹಾಗಾಗಿ ಪರ್ಯಾಯ ನಾಯಕತ್ವದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts