More

    ಖಾಸಗಿಯವರಿಗೆ ಕಾಸಿನ ಸರಕು

    ಹುಬ್ಬಳ್ಳಿ: ಕರೊನಾ ಪ್ರಕರಣಗಳ ಚಿಕಿತ್ಸೆಗೆ ಮೊದ ಮೊದಲು ಹಿಂಜರಿದ ಖಾಸಗಿ ಆಸ್ಪತ್ರೆಯವರು ಕ್ರಮೇಣ ಒಪ್ಪಿದರೂ, ರೋಗ ಲಕ್ಷಣ ಇಲ್ಲದ ಪ್ರಕರಣಗಳನ್ನಷ್ಟೇ ಸ್ವೀಕರಿಸಿ, ಸರ್ಕಾರದ ಕಣ್ಣಿಗೆ ಮಣ್ಣೆರಚಿ ಭರ್ಜರಿ ‘ಬಿಲ್​ವಿದ್ಯೆ’ ಪ್ರದರ್ಶಿಸುತ್ತಿರುವುದಾಗಿ ತಿಳಿದು ಬಂದಿದೆ.

    ಕರೊನಾ ಸೋಂಕು ಪತ್ತೆಯಾದ ಅನೇಕರಲ್ಲಿ ಯಾವ ರೋಗ ಲಕ್ಷಣವೂ ಇರುವುದಿಲ್ಲ. ಕೆಲವರಲ್ಲಿ ಸಾದಾ ಜ್ವರ, ಕೆಮ್ಮು, ನೆಗಡಿಯಂಥ ಲಕ್ಷಣಗಳಿರುತ್ತವೆ. ಮತ್ತೆ ಕೆಲವರಿಗೆ ಜ್ವರ, ಕೆಮ್ಮು-ನೆಗಡಿ ಜತೆಗೆ ಉಸಿರಾಟದ ಸಮಸ್ಯೆ; ಕೆಲವೊಮ್ಮೆ ಇವೆಲ್ಲವುಗಳೊಂದಿಗೆ ಮಧುಮೇಹ, ರಕ್ತದೊತ್ತಡ ಇತ್ಯಾದಿ ಕಾಯಿಲೆಗಳಿರುವ ಪ್ರಕರಣಗಳು ಬರುತ್ತವೆ.

    ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ಸಮಸ್ಯೆ, ಅಸ್ಥಮಾ ಮುಂತಾದ ಕಾಯಿಲೆ ಇರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೆಚ್ಚು ಸವಾಲಿನ ಕೆಲಸವಾಗಿರುತ್ತದೆ. ಇಂಥ ಪ್ರಕರಣ ಬಂದರೆ ಖಾಸಗಿ ಆಸ್ಪತ್ರೆಯವರು ತಮ್ಮಲ್ಲಿ ವೆಂಟಿಲೇಟರ್ ಇಲ್ಲ, ಐಸಿಯು ವಾರ್ಡ್ ಭರ್ತಿ ಇದೆ ಎಂದು ಸಬೂಬು ಹೇಳುತ್ತಾರೆ. ಉಪಾಯದಿಂದ ಕಿಮ್್ಸ ಕಡೆಗೆ ಬೆರಳು ತೋರಿಸಿ ಸಾಗಹಾಕುತ್ತಾರೆ.

    ಪರಿಚಯ, ಯಾರದ್ದೋ ಪ್ರಭಾವದ ಕಾರಣಕ್ಕಾಗಿ ಇಂಥ ರೋಗಿಗಳನ್ನು ಖಾಸಗಿ ಆಸ್ಪತ್ರೆಯವರು ದಾಖಲು ಮಾಡಿಕೊಂಡರೂ ಸರಿಯಾದ ಚಿಕಿತ್ಸೆ ಸಿಗದೇ, ರೋಗಿಯ ಕಡೆಯವರೇ ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡು ಕಿಮ್ಸ್​ಗೆ ಹೋಗಿ ದುಂಬಾಲು ಬಿದ್ದ ಘಟನೆಗಳೂ ನಡೆದಿವೆ.

    ರೋಗ ಲಕ್ಷಣ ಇಲ್ಲದ ಪಾಸಿಟಿವ್ ಕೇಸ್ ಚಿಕಿತ್ಸೆ ಸಲೀಸು. ಬೆಳಗ್ಗೆ, ಸಂಜೆ ಎರಡೆರಡು (ನಿರ್ದಿಷ್ಟ) ಗುಳಿಗೆ ಕೊಟ್ಟರಾಯಿತು. ಹಾಗಾಗಿ, ಇಂಥ ಪ್ರಕರಣಗಳನ್ನಷ್ಟೇ ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಳ್ಳುತ್ತಾರೆ. ಒಂದೆರಡು ಆಸ್ಪತ್ರೆಯಲ್ಲಷ್ಟೇ ಸಾದಾ ಜ್ವರ, ಕೆಮ್ಮು-ನೆಗಡಿಯಿರುವ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

    ಇಂಥ ಪ್ರಕರಣದಲ್ಲಿ (ಹೆಚ್ಚಿನ ಚಿಕಿತ್ಸೆ ನೀಡದಿದ್ದರೂ) ಏಳೆಂಟು ದಿನಕ್ಕೆ ವೈದ್ಯರ ಖರ್ಚು, ವಾರ್ಡ್ ಚಾರ್ಜ್, ನರ್ಸ್​ಚಾರ್ಜ್, ಪಿಪಿಇ ಕಿಟ್, ಸ್ವಚ್ಛತಾ ಖರ್ಚು… ಹೀಗೆಲ್ಲ ಸೇರಿಸಿ ಲಕ್ಷಗಟ್ಟಲೇ ರೂಪಾಯಿ ಬಿಲ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

    ಜಿಲ್ಲೆಯಲ್ಲಿ ಇತ್ತೀಚೆಗೆ ನಿತ್ಯವೂ 150ರಿಂದ 180 ಪ್ರಕರಣಗಳು ಬರುತ್ತಿವೆ. ಹೆಚ್ಚಿನವರು ಲಕ್ಷಣ ರಹಿತ, ಸ್ವಲ್ಪ ಲಕ್ಷಣ ಇರುವ ಪ್ರಕರಣಗಳೇ ಇರುವುದರಿಂದ ಖಾಸಗಿ ಆಸ್ಪತ್ರೆಯವರು ದಾಖಲು ಮಾಡಿಕೊಳ್ಳಲು ತುದಿಗಾಲಲ್ಲೇ ನಿಂತಿದ್ದಾರೆ. ಕಿಮ್್ಸ ನಲ್ಲಿ ಅತಿಹೆಚ್ಚು ರೋಗಿಗಳು ದಾಖಲಾಗಿದ್ದಾರೆ. ಇದರಿಂದ, ಸರ್ಕಾರಿ ಅಧಿಕಾರಿಗಳು ಸಹ ಜಿಲ್ಲೆಯಲ್ಲಿ ಗುರುತಿಸಲಾಗಿರುವ 18 ಖಾಸಗಿ ಆಸ್ಪತ್ರೆಗಳಲ್ಲಿ ಯಾವುದಕ್ಕಾದರೂ ದಾಖಲಾಗಬಹುದು ಎಂದು ರೋಗಿಗಳಿಗೆ ಸಲಹೆ ನೀಡುತ್ತಾರೆ. ಇದು ಖಾಸಗಿ ಆಸ್ಪತ್ರೆಯವರಿಗೆ ವರದಾನವಾಗುತ್ತಿದೆ.

    ಇವೆಲ್ಲ ನಡೆಯುತ್ತಿದ್ದರೂ ಜಿಲ್ಲಾ ಮಟ್ಟದ ಕರೊನಾ ನಿಯಂತ್ರಣ ಕಾರ್ಯಪಡೆ ಗಮನಕ್ಕೆ ಬಾರದಿರುವುದು ಆಶ್ಚರ್ಯ ಉಂಟುಮಾಡಿದೆ.

    ಸರ್ಕಾರ ತುರ್ತಾಗಿ ಗಮನ ಹರಿಸಿ ಖಾಸಗಿ ಆಸ್ಪತ್ರೆಯವರ ಬಿಲ್ (ದರ)ಭಾರ ನಿಯಂತ್ರಿಸಿ, ಲಕ್ಷಣವಿರುವ ರೋಗಿಗಳನ್ನೂ ದಾಖಲಿಸಿಕೊಳ್ಳುವಂತೆ ನೋಡಿಕೊಂಡು ಕಿಮ್್ಸ ಮೇಲೆ ಬೀಳುತ್ತಿರುವ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಬೇಕಿದೆ. ಬೆಂಗಳೂರಿನಂತೆ ಧಾರವಾಡ ಜಿಲ್ಲೆಯಲ್ಲೂ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಹಿರಿಯ ನೋಡಲ್ ಅಧಿಕಾರಿಗಳನ್ನು ನೇಮಿಸುವ ಅಗತ್ಯವೂ ಕಂಡುಬರುತ್ತಿದೆ.

    180ರ ಗಡಿ ಬಿಟ್ಟು ಇಳಿಯದ ವೈರಸ್
    ಧಾರವಾಡ:
    ಜಿಲ್ಲೆಯಲ್ಲಿ ಭಾನುವಾರ 181 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4453ಕ್ಕೇರಿದೆ. ಭಾನುವಾರ 67 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 2061 ಗುಣವಾಗಿ ಮನೆಗೆ ತೆರಳಿದ್ದಾರೆ.

    2245 ಪ್ರಕರಣಗಳು ಸಕ್ರಿಯವಾಗಿದ್ದು, ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಉಪಚಾರದಲ್ಲಿದ್ದಾರೆ. ಕೆಲವರು ಮನೆಯಲ್ಲೇ ಪ್ರತ್ಯೇಕ ವಾಸವಾಗಿದ್ದಾರೆ. ಆಸ್ಪತ್ರೆಗಳಿಗೆ ದಾಖಲಾಗಿರುವವರಲ್ಲಿ 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ 8 ಜನ ಮೃತಪಟ್ಟಿರುವ ಕುರಿತು ಭಾನುವಾರ ತಿಳಿಸಲಾಗಿದ್ದು, ಈವರೆಗೆ ಬಲಿಯಾದವರ ಸಂಖ್ಯೆ 147ಕ್ಕೆ ಏರಿದೆ. ಜು. 2ರಂದು ದೃಢಪಟ್ಟ ಪ್ರಕರಣಗಳ ತಾಲೂಕುವಾರು ಮಾಹಿತಿ ಇಂತಿದೆ.

    ಧಾರವಾಡ ತಾಲೂಕು: ಗೋವನಕೊಪ್ಪ, ರಸಲೂಪುರ, ಸರಸ್ವತಿಪುರ, ಉಪ್ಪಿನ ಬೆಟಗೇರಿ, ಸತ್ತೂರಿನ ಕರೆಮ್ಮ ನಗರ, ವನಸಿರಿ ನಗರ, ಬಸವೇಶ್ವರ ನಗರ, ಲಕ್ಕಮನಹಳ್ಳಿ ಓಣಿ, ರಜತಗಿರಿ, ಮದಿಹಾಳ ರಸ್ತೆ ಮಾನೆ ಪ್ಲಾಟ್, ಗಣೇಶನಗರ, ತಪೋವನ ನಗರ, ಸತ್ತೂರಿನ ಎಸ್​ಡಿಎಂ ಆಸ್ಪತ್ರೆ, ಕಾಮನಕಟ್ಟಿ, ಮಂಗಳವಾರ ಪೇಟೆ, ಕೇಶವನಗರ ಬಸವರಾಜ ಪ್ಲಾಟ್, ಕೆಲಗೇರಿ ರಸ್ತೆ ಸನ್ಮತಿ ನಗರ, ಲೋಕೂರ ಗ್ರಾಮ, ಸಂಪಿಗೆ ನಗರ, ಸಪ್ತಾಪುರ, ರವಿವಾರ ಪೇಟೆ, ನಗರಕರ ಕಾಲನಿ, ಮುಮ್ಮಿಗಟ್ಟಿ, ಶ್ರೀನಗರ, ದಾನೇಶ್ವರಿ ನಗರ, ಕುಮಾರೇಶ್ವರ ನಗರ, ಗ್ರಾಮೀಣ ಪೊಲೀಸ್ ವಸತಿಗೃಹ, ಟೋಲನಾಕಾ, ಕೊಪ್ಪದಕೇರಿ ಬಸವೇಶ್ವರ ನಗರ, ಆಜಾದ್ ನಗರ, ಮರೇವಾಡ, ಲಕ್ಷ್ಮೀಸಿಂಗನಕೇರಿ, ವಿವೇಕಾನಂದ ನಗರ, ಮಣಿಕಂಠ ನಗರ, ಗುಲಗಂಜಿಕೊಪ್ಪ, ಸಾಧನಕೇರಿ, ಶೆಟ್ಟರ್ ಕಾಲನಿ, ಬೇಲೂರು ಕೈಗಾರಿಕಾ ಪ್ರದೇಶ.

    ಹುಬ್ಬಳ್ಳಿ ತಾಲೂಕು: ಫೆಸಿಪಿಕ್ ಪಾರ್ಕ್, ಕೇಶ್ವಾಪುರ, ಉಣಕಲ್, ಮಸೂತಿ ಓಣಿ, ವಿವೇಕಾನಂದ ನಗರ, ಆನಂದ ನಗರ, ವಿಕಾಸ ನಗರ, ಹಳೇ ಹುಬ್ಬಳ್ಳಿ ಹಿರೇಪೇಟೆ, ಬಂಕಾಪುರ ಚೌಕ ಯಲ್ಲಾಪುರ ಓಣಿ, ಸಿಟಿ ಪಾರ್ಕ್, ಮಹಾಲಕ್ಷ್ಮೀ ನಗರ ಪೊಲೀಸ್ ವಸತಿಗೃಹ, ಮಧುರಾ ಕಾಲನಿ, ವಿಶ್ವೇಶ್ವರ ನಗರ, ದುಡಾ ಓಣಿ, ಪ್ರಿಯಶಿನಿ ಕಾಲನಿ, ಕುಸುಗಲ್, ವಿಜಯ ನಗರದ ವಿಜಯದತ್ತ ಅಪಾರ್ಟ್​ವೆುಂಟ್, ಸಂಗಮ ನಗರ, ಜನತಾ ಕಾಲನಿ, ಭೀಮಾಪುರ ಓಣಿ, ಅಕ್ಕಿಹೊಂಡ, ಭೂಸಪೇಟೆ, ವಿದ್ಯಾನಗರ, ವಾಳ್ವೇಕರ್ ಹಕ್ಕಲ, ಸಿಬಿಟಿ ಎಕ್ಸಿಸ್ ಬ್ಯಾಂಕ್ ಹತ್ತಿರ, ಹೆಗ್ಗೇರಿ, ಮಯೂರ ಎಸ್ಟೇಟ್, ಮಂಗಳ ಓಣಿ, ಭೈರಿದೇವರಕೊಪ್ಪ ಶಾಂತಿನಿಕೇತನ ನಗರ, ಹೊಸೂರು, ಮಂಟೂರ ರಸ್ತೆ, ಗೋಕುಲ ರಸ್ತೆ, ಘಂಟಿಕೇರಿ ಓಣಿ, ಅಗಡಿ ಪೋಸ್ಟ್, ವಿಜಯನಗರ, ನೇಕಾರನಗರ ಗಣೇಶ ಕಾಲನಿ, ತುಂಗಭದ್ರಾದ ರೈಲ್ವೆ ಸುರಕ್ಷಾ ದಳ, ಸಿದ್ಧಾರೂಢ ಮಠ ಬಳಿ ಶಿವಶಂಕರ ಕಾಲನಿ, ಜಾಡಗೇರ ಓಣಿ, ಅಶೋಕ ನಗರ, ಕಸಬಾ ಪೊಲೀಸ್ ಠಾಣೆ ಹತ್ತಿರ, ಕಂಪ್ಲಿಕೊಪ್ಪ, ಸಾಯಿನಗರ, ಅಂಬೇಡ್ಕರ್ ಕಾಲನಿ, ಗೋಕುಲ ರಸ್ತೆ ಗಾಂಧಿ ನಗರ, ಉದಯನಗರ, ದೇಶಪಾಂಡೆ ನಗರ, ವಿದ್ಯಾನಗರ ಶಿರೂರ ಪಾರ್ಕ್, ಕಿಮ್್ಸ ಆಸ್ಪತ್ರೆ, ಲಿಂಗರಾಜ ನಗರ, ಕೋಟಿಲಿಂಗ ನಗರ, ಕಿಮ್್ಸ ವಸತಿಗೃಹ, ಕಾರವಾರ ರಸ್ತೆ ಅಂಚಟಗೇರಿ ಓಣಿ.

    ಕಲಘಟಗಿಯ ಮಿಶ್ರಿಕೋಟಿ ಗ್ರಾಮ, ಅಳ್ನಾವರ ಪಟ್ಟಣ, ನವಲಗುಂದ ತಾಲೂಕಿನ ಅಣ್ಣಿಗೇರಿ, ಕುಂಬಾರ ಓಣಿ, ಗಣೇಶ ಗುಡಿ ಬಳಿ, ಬಸಾಪುರ ಗ್ರಾಮ, ಗಾಂಧಿ ಮಾರುಕಟ್ಟೆ, ಗುಡ್ಡದಕೇರಿ ಓಣಿ, ಸಿದ್ದಾಪುರ ಓಣಿ, ಹೆಗ್ಗಂಕೇರಿ ಓಣಿ, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೆಸರೂರ, ತಿಮ್ಮಾಪುರ, ಹಾವೇರಿ ಜಿಲ್ಲೆಯ ದೇವಸೂರ, ಹಾನಗಲ್ ತಾಲೂಕಿನ ಕಮತಗಿರಿ ಓಣಿ, ಬೆಡಿಗೇರಿಯ ಗುಡ್ಡದ ಮೈಲಾಪುರ, ಕೊಪ್ಪಳ ಜಿಲ್ಲೆ ಗಂಗಾವತಿಯ ವಿದ್ಯಾನಗರ, ವಿಜಯಪುರ ಕೆಎಚ್​ಬಿ ಕಾಲನಿ, ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts