More

    ಖಾನಾಪುರ ಕುಟುಂಬಕ್ಕೆ ಚಿರಋಣಿ

    ಖಾನಾಪುರ: ತಾಲೂಕು ನನ್ನ ಕುಟುಂಬ. ಇಲ್ಲಿ ಪ್ರತಿಯೊಂದು ಅಂಶದ ಅಭಿವೃದ್ಧಿ ನನ್ನ ಗುರಿ. ಕಳೆದ ನಾಲ್ಕು ವರ್ಷಗಳಲ್ಲಿ ತಾಲೂಕಿನ ಸರ್ವಾಂಗೀಣ ಹಾಗೂ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಜವಾಬ್ದಾರಿಯುತ ಕೆಲಸ ನಿರ್ವಹಿಸಿದ ತೃಪ್ತಿ ಇದೆ ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು.

    ಶಾಸಕಿ ಡಾ.ನಿಂಬಾಳ್ಕರ್ ಅವರ ಜನ್ಮದಿನಾಚರಣೆ ನಿಮಿತ್ತ ಪಟ್ಟಣದ ಶಣಯ್ಯ ಗಾರ್ಡನ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

    ತಾಲೂಕಿನ ಅಭಿವೃದ್ಧಿಗೆ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಾರಂಭಿಸಿದ್ದೇನೆ. ತಾಯಂದಿರು ಮತ್ತು ಶಿಶುಗಳ ಆರೋಗ್ಯ ಕಾಪಾಡಲು 15 ಕೋಟಿ ರೂ. ವೆಚ್ಚದ ಎಂಸಿಎಚ್ ಆಸ್ಪತ್ರೆ, ಏಳು ಕೋಟಿ ರೂ. ವೆಚ್ಚದ ಹೈಟೆಕ್ ಬಸ್ ನಿಲ್ದಾಣ, 31 ಕೋಟಿ 50 ಲಕ್ಷ ರೂ. ಅನುದಾನದಲ್ಲಿ ಸಾಕಾರಗೊಳ್ಳುವ ನೂತನ ಆಸ್ಪತ್ರೆ ತೃಪ್ತಿಕರವಾಗಿದೆ ಎಂದರು. ಈ ಕಾರ್ಯದಲ್ಲಿ ಸಾರ್ವಜನಿಕರು ವಹಿಸಿದ್ದ ಜವಾಬ್ದಾರಿಗೆ ನ್ಯಾಯ ಸಲ್ಲಿಸಲು ತುಂಬ ಸಂತೋಷವಾಗುತ್ತಿದೆ. ನನ್ನ ರಾಜಕೀಯ ಮತ್ತು ಸಾಮಾಜಿಕ ಪ್ರಗತಿಯಲ್ಲಿ ಕುಟುಂಬದ ಬೆಂಬಲ ಅಮೂಲ್ಯವಾಗಿದೆ. ಪತಿ ಹೇಮಂತ್ ನಿಂಬಾಳ್ಕರ್ ಮತ್ತು ಕುಟುಂಬದವರ ಬೆಂಬಲದಿಂದಾಗಿಯೇ ಸಮಾಜಮುಖಿ ಕೆಲಸಗಳಿಗೆ ಸಮಯ ಕೊಡಲು ಸಾಧ್ಯವಾಯಿತು. ರಸ್ತೆ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ಸಬಲೀಕರಣ, ಜಲಸಂರಕ್ಷಣಾ ಕಾರ್ಯಗಳ ಮೂಲಕ ಅಭಿವೃದ್ಧಿಯ ಪ್ರಯೋಜನಗಳು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಬೇಕು. ಮುಂದಿನ ದಿನಗಳಲ್ಲಿ ಎಂಥದ್ದೇ ಸಂಕಷ್ಟ ಎದುರಾದರೂ ಜನರ ಕಲ್ಯಾಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದರು.

    ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮಾತನಾಡಿ, ಶಾಸಕಿ ಡಾ.ನಿಂಬಾಳ್ಕರ್ ಅವರ ವ್ಯಕ್ತಿತ್ವ ಸೂಕ್ಷ್ಮ ಮತ್ತು ಸಂವೇದನಾಶೀಲವಾಗಿದೆ. ಅವರ ಹೋರಾಟಗಳನ್ನು ಹಲವು ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಗಮನಿಸಲಾಗಿದೆ. ಅಭಿವೃದ್ಧಿಯಿಂದ ವಂಚಿತವಾಗಿರುವ ಖಾನಾಪುರ ತಾಲೂಕನ್ನು ಕಾರ್ಯಕ್ಷೇತ್ರವನ್ನಾಗಿ ನಿರ್ಧರಿಸಿ ಆಯ್ಕೆ ಮಾಡಲಾಗಿತ್ತು. ಖಾನಾಪುರದ ಜನತೆ ನೀಡಿದ ಪ್ರೀತಿ ಅವರಿಗೆ ಶಕ್ತಿ ತುಂಬಿದೆ. ಶಾಸಕಿ ಡಾ.ನಿಂಬಾಳ್ಕರ್ ಅವರ ಸಾಧನೆಯ ಬಗ್ಗೆ ಜನಜೀವನದಲ್ಲಿ ಆಗುತ್ತಿರುವ ಪರಿವರ್ತನೆಯನ್ನು ಕಂಡು ಹೆಮ್ಮೆ ಅನಿಸುತ್ತದೆ ಎಂದರು.
    ಚಿಕ್ಕಮುನವಳ್ಳಿ ಆರೂಢ ಮಠದ ಶಿವಪುತ್ರ ಸ್ವಾಮೀಜಿ ಮಾತನಾಡಿ, ಶಾಸಕಿ ಡಾ.ನಿಂಬಾಳ್ಕರ್ ಅವರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಇತಿಹಾಸ ಸೃಷ್ಟಿಸಿದ್ದಾರೆ. ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಮಾಡುವ ನಾಯಕತ್ವಕ್ಕೆ ಜನರು ಎಂದಿಗೂ ಅಂತರ ನೀಡುವುದಿಲ್ಲ. ಶಾಸಕರ ನಾಯಕತ್ವವನ್ನು ಜನ ಒಪ್ಪಿಕೊಂಡಿದ್ದಾರೆ ಎಂದರು.

    ಜೆಸಿಬಿಯಿಂದ ಹೂವಿನ ಸುರಿಮಳೆ: ಶಾಸಕಿ ಡಾ.ಂಜಲಿ ನಿಂಬಾಳ್ಕರ್ ಸ್ಥಳಕ್ಕೆ ಆಗಮಿಸಿದ ಕೂಡಲೇ ಕಾರ್ಯಕರ್ತರು ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿದರು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ನಾಗರಿಕರು ಸೇರಿದ್ದು, ಸಮಾರಂಭದ ರಂಗು ಹೆಚ್ಚಿಸಿತ್ತು.
    ಮಾಂತೇಶ ರಾಹುತ, ರಿಯಾಜ್ ಅಹ್ಮದ್ ಪಟೇಲ್, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವಿನಯ ನಾವಲಗಟ್ಟಿ, ಮಹಾಂತೇಶ ಸಂಬರಗಿ, ರಖಮಾ ನಿಂಬಾಳ್ಕರ್, ಟಿ.ಪಿ.ಜಾಂಬೋಟಕರ ಇತರರು ಇದ್ದರು. ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಕುಟುಂಬ ಸದಸ್ಯರೊಂದಿಗೆ ಕೇಕ ಕತ್ತರಿಸುವ ಮೂಲಕ ಸಂಭ್ರಮಿಸಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಕೋಳಿ ಸ್ವಾಗತಿಸಿದರು. ವಿವೇಕ ಕುರಗುಂದ ವಂದಿಸಿದರು.

    ಬಂಜೆತನ ನಿವಾರಣೆ ಆಸ್ಪತ್ರೆಗೆ ಪ್ರಯತ್ನ

    ಖಾನಾಪುರ ತಾಲೂಕಿನ ಆರೋಗ್ಯ ವ್ಯವಸ್ಥೆ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿದಾಗ ಮಕ್ಕಳಿಲ್ಲದ ದಂಪತಿಗಳು ಗಣನೀಯ ಸಂಖ್ಯೆಯಲ್ಲಿ ಇರುವುದು ಕಂಡುಬಂದಿದೆ. ಆರೋಗ್ಯ ಸಮಸ್ಯೆಯಿಂದ ಸಂತಾನಭಾಗ್ಯದಿಂದ ವಂಚಿತರಾದ ದಂಪತಿಗಳಿಗೆ ಸೂಕ್ತ ಚಿಕಿತ್ಸೆಯ ಲಾಭ ದೊರೆಯುವಂತೆ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ತಾಲೂಕಿನಲ್ಲಿ ಬಂಜೆತನ ನಿವಾರಣಾ ಚಿಕಿತ್ಸಾ ಆಸ್ಪತ್ರೆ ಮಂಜೂರಾತಿಗೆ ಪ್ರಯತ್ನ ಮಾಡುತ್ತೇನೆ ಎಂದು ಶಾಸಕಿ ಡಾ.ಅಂಜಲಿ ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts