More

    ಕೋಲಾರಮ್ಮ ಕೆರೆಗೆ ಕಾಯಕಲ್ಪ ಅನಿವಾರ್ಯ

    ಕೋಲಾರ: ಕೋಲಾರ ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಅಮಾನಿಕೆರೆ (ಕೋಲಾರಮ್ಮ ಕೆರೆ) ಅಪಾಯದ ಅಂಚಿನಲ್ಲಿದ್ದು ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ದುರಸ್ತಿಗೆ ಗಮನ ಹರಿಸದಿದ್ದರೆ ಕೆರೆಗೆ ಶೇಖರಣೆ ಆಗುತ್ತಿರುವ ಕೆಸಿ ವ್ಯಾಲಿ ನೀರು ಹಾಗೂ ಮಳೆ ನೀರು ಪೋಲಾಗುವುದು ನಿಶ್ಚಿತ.

    ಕೆರೆ ಪಾಲಾರ್ ನದಿ ಕಣಿವೆ ಪಾತ್ರಕ್ಕೆ ಸೇರಿದ್ದು 789 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ನೀರು ಶೇಖರಣೆ ಸಾಮರ್ಥ್ಯ 659 ಎಕರೆ ಹಾಗೂ ಕೆರೆಯ ಆಳ 12.23 ಅಡಿ ಇತ್ತಾದರೂ ಅಸಮರ್ಪಕ ನಿರ್ವಹಣೆ, ಜಾಲಿ ಗಿಡಗಳ ಹಾವಳಿ, ಒತ್ತುವರಿಯಿಂದಾಗಿ ಸಾಕಷ್ಟು ಬದಲಾಗಿದೆ. ಕೋಲಾರಮ್ಮ ಕೆರೆಗೆ ಸುಮಾರು 600 ವರ್ಷಗಳ ಇತಿಹಾಸವಿದ್ದು ವೀರ ಗಂಗರು ಮತ್ತು ಉತ್ತಮ ಚೋಳರ ಕಾಲದಲ್ಲಿ ನಿರ್ಮಿಸಿರಬಹುದೆಂದು ಇತಿಹಾಸಕಾರ ಪ್ರೊ.ಕೆ.ಆರ್.ನರಸಿಂಹನ್ ಅಭಿಪ್ರಾಯ.

    ಶತಶೃಂಗ ಪರ್ವತಗಳ ಸಾಲಿನ ಅಂತರಗಂಗೆ ಬೆಟ್ಟದ ಮೇಲೆ ಬೀಳುವ ಮಳೆ ನೀರು ಹರಿದು ನಗರದ ಎಸ್‌ಆರ್‌ಆರ್ ಆಸ್ಪತ್ರೆ ಬಳಿಯ ರಾಜಕಾಲುವೆ ಮೂಲಕ ಕೋಲಾರಮ್ಮ ಕೆರೆಗೆ ಹರಿದು ಕೋಡಿ ಹೋಗುತ್ತಿತ್ತು. ಈ ನೀರನ್ನು ಕುಡಿಯಲು ಮತ್ತು ಕೃಷಿಗೆ ಬಳಕೆ ಮಾಡಲಾಗುತ್ತಿತ್ತು ಎಂಬುದನ್ನು ಸ್ಮರಿಸಿಕೊಂಡಿದ್ದಾರೆ. ಕೆರೆಯಲ್ಲಿ ಹೂಳು ತುಂಬಿದ್ದ ಸಂದರ್ಭದಲ್ಲಿ ಕೋಲಾರ ಜನರ ಒತ್ತಾಸೆ ಮೇರೆಗೆ ಕೆರೆಯನ್ನು ಟಿಪ್ಪು ಸುಲ್ತಾನ್ ಜೀರ್ಣೋದ್ಧಾರ ಮಾಡಿಸಿದ್ದರು, ನಂತರ ಪ್ರಜಾ ಸರ್ಕಾರ ಬಂದ ಮೇಲೆ ಈ ಕೆರೆಯ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಿದೆಯಾದರೂ ಸ್ವಾರ್ಥ ಜನರಿಂದ ಕೆರೆಯ ಬಹುಭಾಗ ಒತ್ತುವರಿಯಾಗಿದೆ. ಕೆರೆ ಉಳಿಸುವ ನೆಪದಲ್ಲಿ ನೀರಿಗೆ ಸಂಚಕಾರವನ್ನುಂಟು ಮಾಡಿದ್ದಾರೆಂಬುದು ಪ್ರಜ್ಞಾವಂತರ ಆರೋಪವಾಗಿದೆ.

    ಕೋಲಾರಮ್ಮ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಆಸೆಯಿಂದ ಅನೇಕರು ಕೈಲಾದಷ್ಟು ಶ್ರಮದಾನ ಮಾಡಿದ್ದಾರೆ. ಕೆರೆಗೆ ಕೆಸಿ ವ್ಯಾಲಿ ನೀರು ಹರಿಸುವ ಉದ್ದೇಶದಿಂದ ಸಂಸದ ಎಸ್.ಮುನಿಸ್ವಾಮಿ 50 ಲಕ್ಷ ರೂ. ಖರ್ಚು ಮಾಡಿ ಕೆರೆ ಸ್ವಚ್ಛತೆ ಜತೆಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿ ಬಳಕೆಯಾಗದೆ ವಾಪಸ್ ಹೋಗಿದ್ದ 8 ಕೋಟಿ ರೂ.ಗಳನ್ನು ಮತ್ತೆ ತಂದು ಕೆರೆ ಅಭಿವೃದ್ಧಿ ಕಾರ್ಯಕ್ಕೆ ಮರು ಚಾಲನೆ ಸಿಗುವಂತೆ ಮಾಡಿದ್ದಾರೆ.

    ಈ ಕಾರ್ಯಕ್ಕೆ ಸ್ಥಳೀಯ ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿಗಳಾದ ಇಂಚರ ಗೋವಿಂದರಾಜು, ನಾಸಿರ್ ಅಹಮ್ಮದ್ ಇನ್ನಿತರರು ಸಹಕಾರ ನೀಡಿದ್ದಾರೆ. ಆದರೆ ಕೋಲಾರ-ಮುಳಬಾಗಿಲು ರಸ್ತೆ ಅಂದರೆ ಗಾಂಧಿನಗರಕ್ಕೆ ಹೊಂದಿಕೊಂಡಿರುವ ಕೆರೆ ಏರಿಯ ಮೇಲಿನ ಪರಶುರಾಮ ದೇವಾಲಯದ ಬಳಿ ಪ್ರಸ್ತುತ ಕೆರೆಯಲ್ಲಿ ತುಂಬಿರುವ ನೀರು ಸೋರಿಕೆ ಆಗುತ್ತಿರುವುದನ್ನು ತಡೆದು ಏರಿ ಭದ್ರಪಡಿಸಲು ನೀರಾವರಿ ಇಲಾಖೆಗೆ ಸೂಚಿಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿಸದಿದ್ದಲ್ಲಿ ಕೆರೆಯ ಸುಂದರೀಕರಣಕ್ಕೆ ನಿಗದಿಯಾಗಿರುವ 8 ಕೋಟಿ ರೂ. ಹಣ ನೀರು ಪಾಲಾಗಬಹುದು.

    ಅತ್ಯಂತ ಹಳೆಯ ಕೋಡಿ ಹರಿಯುವ ಪ್ರದೇಶ ಹಾಗೂ ಕೆಳ ಸೇತುವೆ ಶಿಥಿಲಗೊಂಡಿದ್ದು ಇನ್ನು ಕೆಲ ದಿನಗಳಲ್ಲಿ ಕೆರೆ ಕೋಡಿ ಹೋಗುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೆಳ ಸೇತುವೆ ದುರಸ್ತಿ ಜತೆಗೆ ಸ್ವಚ್ಛತೆಗೆ ಗಮನ ಹರಿಸದಿದ್ದರೆ ನೀರು ಗಾಂಧಿನಗರ, ಮಣಿಘಟ್ಟ ರಸ್ತೆಗೆ ಹರಿದು ವ್ಯರ್ಥವಾಗಬಹುದೆಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.

    ಕೋಲಾರ ಕೆರೆ ಸುಂದರೀಕರಣಗೊಳಿಸಲು ನೀರಾವರಿ ಇಲಾಖೆ ಕಾಮಗಾರಿ ಕೈಗೊಂಡಿರುವುದು ಸಂತಸದ ವಿಚಾರ, ಆದರೆ ಕೆಸಿ ವ್ಯಾಲಿ ನೀರು ಕೆರೆಗೆ ಶೇಖರಣೆಯಾಗಿ ಕೋಡಿ ಹರಿಯುವುದಕ್ಕೆ ಕ್ಷಣಗಣನೆ ಆರಂಭವಾಗಿರುವುದರಿಂದ ಕೆರೆ ಏರಿ ಭದ್ರಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಜತೆಗೆ ಹಳೇ ಸೇತುವೆ ಶಿಥಿಲವಾಗಿದ್ದು ಅದನ್ನು ದುರಸ್ತಿಪಡಿಸದಿದ್ದರೆ ನೀರು ಪೋಲಾಗುತ್ತದೆ.
    ಮದನ್ ಕುಮಾರ್, ಗಾಂಧಿನಗರ ನಿವಾಸಿ, ಕೋಲಾರ

    ಕೋಲಾರಮ್ಮ ಕೆರೆ ಏರಿಯಿಂದ ನೀರು ಜಿನುಗುತ್ತಿರುವುದರಿಂದ ಜನರು ಆತಂಕಪಡಬೇಕಾಗಿಲ್ಲ, ಕೆರೆ ತೂಬು ಹಳೆಯದಾಗಿದ್ದು ಸಾಮಾನ್ಯವಾಗಿ ನೀರು ತುಂಬಿದಾಗ ಆ ಜಾಗದಲ್ಲಿ ನೀರು ಜಿನುಗುವುದು ಸ್ವಾಭಾವಿಕ, ಕೆರೆ ಏರಿಗೆ ಅಪಾಯವಾಗದಂತೆ ನೀರು ಜಿನುಗುವ ಜಾಗಕ್ಕೆ ಮರಳು ಮೂಟೆ ಹಾಕಿ ಭದ್ರಪಡಿಸಲಾಗುವುದು.
    ಕೃಷ್ಣ, ಎಇಇ, ಕೆಸಿ ವ್ಯಾಲಿ ಯೋಜನೆ.

    ಕೋಲಾರಮ್ಮ ಕೆರೆ ನೀರು ಪೋಲಾಗುವುದನ್ನು ತಪ್ಪಿಸಲು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಮನಕ್ಕೆ ತಂದು ಕೆರೆ ಏರಿಗೆ ಅಪಾಯವಾಗದಂತೆ ಎಚ್ಚರವಹಿಸಲು ಸೂಚಿಸಿರುವೆ, ಜನ ಆತಂಕಪಡಬೇಕಿಲ್ಲ. ನಾನೂ ಸಹ ಖುದ್ದು ಭೇಟಿ ನೀಡಿ ಪರಿಶೀಲಿಸುವೆ.
    ಇಂಚರ ಗೋವಿಂದರಾಜು, ಎಂಎಲ್‌ಸಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts