More

    ಕೋಟೆನಾಡಿನ ಸಾಕ್ಷಿ ಪ್ರಜ್ಞೆಯೇ ವೇಣು

    ಚಿತ್ರದುರ್ಗ: ಕೋಟೆನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ವೇಣು ಅವರು ಐತಿಹಾಸಿಕ ಕಾದಂಬರಿ, ಸಿನಿಮಾ ಸಂಭಾಷಣೆಗಳ ಮೂಲಕ ಜನರ ಮನ ಗೆದ್ದಿರುವ ಶ್ರೇಷ್ಠ ಬರಹಗಾರ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೇಳಿದರು.

    ಸೃಷ್ಠಿಸಾಗರ ಪ್ರಕಾಶನ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದಿಂದ ಶನಿವಾರ ಸರಳವಾಗಿ ಹಮ್ಮಿಕೊಂಡಿದ್ದ ಕಾದಂಬರಿಕಾರ ಡಾ.ಬಿ.ಎಲ್.ವೇಣು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಸಾಧನೆ ಮಾಡಿ ಹೆಸರಾಗಿರುವ ವೇಣು ಅವರಿಗೆ ಅವಕಾಶಗಳು ಸಾಕಷ್ಟು ಹುಡುಕಿಕೊಂಡು ಬಂದರು ಬೆಂಗಳೂರಿನತ್ತ ಮುಖ ಮಾಡಲಿಲ್ಲ. ಮಾತೃಭೂಮಿ ಚಿತ್ರದುರ್ಗವೇ ನನ್ನ ಉಸಿರೆಂದು ಇಲ್ಲಿಯೇ ವಾಸಿಸುತ್ತ ಈಗಲೂ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಬಣ್ಣಿಸಿದರು.

    ಸಾಹಿತಿ ಡಾ.ಬಿ.ಎಲ್.ವೇಣು ಮಾತನಾಡಿ, ಸಾಹಿತ್ಯ ಲೋಕದಲ್ಲಿ ಸಾಸಿವೆ ಕಾಳಿನಷ್ಟು ಸಾಧನೆಗೈದ ನನ್ನನ್ನು ಗುರುತಿಸಿ ಸಾಗರದಷ್ಟು ಅಭಿಮಾನ ತೋರಿಸಿದ್ದೀರಿ. ಸಂತಸದಿಂದ ಮನಸ್ಸಿನ ಭಾರವೂ ಹೆಚ್ಚಾಗಿದೆ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿಯಾಗಿದ್ದೇನೆ ಎಂದರು.

    ಅಧಿಕ ವರ್ಷ ಬದುಕುವುದು ಮುಖ್ಯವಲ್ಲ. ಎಷ್ಟು ಜನರ ಮನದಲ್ಲಿ ನೆಲೆಯೂರಿದ್ದೇವೆ, ಸಮಾಜಕ್ಕಾಗಿ ಏನೆಲ್ಲಾ ಕೆಲಸ ಮಾಡಿದ್ದೇವೆ ಎಂಬುದರ ಮೇಲೆ ಮಾನವನ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಉತ್ತಮ ಕಾರ್ಯಗಳೇ ಜೀವನವನ್ನು ಸಾರ್ಥಕಗೊಳಿಸಲಿದೆ ಎಂದು ಹೇಳಿದರು.

    ಸೃಷ್ಠಿಸಾಗರ ಪ್ರಕಾಶನದ ಮುಖ್ಯಸ್ಥ ಮೇಘ ಗಂಗಾಧರನಾಯ್ಕ ಮಾತನಾಡಿ, ವೇಣು ಅವರು ಸ್ವಾಭಿಮಾನದ ಸಂಕೇತ. ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸೇವೆ ಗುರುತಿಸಿ ಈ ನೆಲದ ಮಣ್ಣಿನ ಮಗನಿಗೆ ಸರ್ಕಾರ, ಸಂಘ-ಸಂಸ್ಥೆಗಳು ಸಾಕಷ್ಟು ಗೌರವ ನೀಡಿರುವುದು ಸಂತಸದ ವಿಚಾರ ಎಂದರು.

    ಎಂದಿಗೂ ಯಾವುದೇ ಸ್ಥಾನಮಾನ, ಪ್ರಶಸ್ತಿಗಾಗಿ ಅರ್ಜಿ ಹಾಕಿ ಲಾಭಿ ಮಾಡಿದವರಲ್ಲ. ಆದರೆ, ನಾಡಿಗೆ ಅವರು ನೀಡಿರುವ ಕೊಡುಗೆಯನ್ನು ಸರ್ಕಾರ ಪರಿಗಣಿಸಬೇಕು. ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ವೇಣು ಅವರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

    ಕಸಾಪ ಜಿಲ್ಲಾ ಘಟಕದ ಮಾಜಿ ಕಾರ್ಯದರ್ಶಿ ಯೂಸೂಫ್, ರಮೇಶ್, ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ, ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್, ಮೃತ್ಯುಂಜಯಪ್ಪ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ಮುಖಂಡರಾದ ರಾಮಜ್ಜ, ಡಾ.ಬಸವರಾಜ್, ಎಸ್‌ಬಿಎಲ್ ಮಲ್ಲಿಕಾರ್ಜುನ್, ಬ್ಯಾಂಕ್ ಕಿರಣ್, ಸೋಮಶೇಖರ್, ಪಿಡಿಒ ಓಬಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts