More

    ಕೋಟೆನಾಡಲ್ಲಿ ದಸರಾ ಉತ್ಸವ

    ಬಾಗಲಕೋಟೆ: ನಾಡ ಹಬ್ಬ ದಸರಾ ಉತ್ಸವ ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ಆಚರಣೆ ನಡೆಯಲಿದ್ದು, ಒಂಬತ್ತು ದಿನಗಳ ಕಾಲ ವಿವಿಧ ದೇವಸ್ಥಾನ, ಮನೆ ಮನಗಳಲ್ಲಿ ಸಂಭ್ರಮ ಸಡಗರ ಮನೆಮಾಡಲಿದೆ.

    ಅ.೧೫ ರಂದು ದೀಪ ಹಾಕುವ ಮೂಲಕ ಘಟಸ್ಥಾಪನೆ ಮಾಡಿ ದಸಾರ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಪ್ರತಿದಿನ ಬೆಳಗ್ಗೆ ವಿಶೇಷ ಪೂಜೆ, ದೇವರ ಮೂರ್ತಿಗಳಿಗೆ ಅಲಂಕಾರ, ಆರತಿ, ಅಭಿಷೇಕ ಜರುಗಲಿದೆ, ಮಂತ್ರಘೋಷಗಳು, ಹೋಮ ಹವನ, ಜಾಗಟೆ ನಾದ ಮೊಳಗಲಿವೆ.
    ಅಂಬಾಭವಾನಿ ಮಂದಿರ, ಕಾಳಿಕಾ ದೇವಸ್ಥಾನ, ಲಕ್ಷ್ಮೀ ದೇವಸ್ಥಾನ, ಲಕ್ಷ್ಮಿ ವೆಂಕಟೇಶ, ದುರ್ಗಾದೇವಿ ದೇವಸ್ಥಾನದಲ್ಲಿ ರೂಪಾಲಂಕಾರ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹಬ್ಬದ ನಿಮಿತ್ತ ದೇವಸ್ಥಾನಗಳನ್ನು ವಿಶೇಷವಾಗಿ ಶೃಂಗರಿಸಲಾಗಿದ್ದು, ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ನಾನಾ ಬಗೆಯ ಹೂಗಳಿಂದ ಪ್ರತಿದಿನ ಅಲಂಕಾರ ನಡೆಯಲಿದೆ.

    ಕಲ್ಯಾಣೋತ್ಸವ, ಪಂಡಿತರಿಂದ ಪ್ರವಚನಗಳು, ದಸರಾ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ನಾಮರಿಂದ ದಾಸರ ಪದ, ಸುಗಮ ಸಂಗೀತ, ನೃತ್ಯ ಮೇಳೈಸಲಿದೆ. ಮಕ್ಕಳು, ಹಿರಿಕರು, ಕುಟುಂಬ ಸದಸ್ಯರು ಒಟ್ಟಾಗಿ ದಾಂಡಿಯಾ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ವೈಭವ ಕಳೆಗಟ್ಟಿಲಿದ್ದು, ಹಬ್ಬದ ಸಂಭ್ರಮ ಇಮ್ಮಡಿಗೊಳ್ಳಲಿದೆ. ಇಷ್ಟಾರ್ಥ ಸಿದ್ಧಿಗಾಗಿ ಸಹಸ್ರಾರು ಭಕ್ತರು ಉಪವಾಸ ವೃತಾಚರಣೆ ಸೇರಿದಂತೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

    ಕೋಟೆ ನಗರಿಯಲ್ಲಿ…
    ನಗರದ ವಿವಿಧೆಡೆ ನವರಾತ್ರಿ ಉತ್ಸವದ ಸಡಗರದಿಂದ ನಡೆಯಲಿದ್ದು, ದಸಾರ ಉತ್ಸವ ಆಚರಣೆಗೆ ಅಂತಿಮ ಸಿದ್ಧತೆ ನಡೆಯುತ್ತಿವೆ. ವೆಂಕಟಪೇಟೆ, ಹೊಸಪೇಟೆ, ನವನಗರದ ಸತ್ಯಬೋಧರಾಯರ ಮಠ, ೫೭ನೇ ಸೆಕ್ಟರ್‌ನಲ್ಲಿರುವ ಕಿಲ್ಲಾ ವೆಂಕಟೇಶ್ವರ ದೇವಸ್ಥಾನ, ಕಿಲ್ಲಾ, ನವನಗರದಲ್ಲಿರುವ ಅಂಬಾಭವಾನಿ ಮಂದಿರ, ಕಾಳಿಕಾ ದೇವಸ್ಥಾನ, ಲಕ್ಷ್ಮೀ ದೇವಸ್ಥಾನದಲ್ಲಿ ರೂಪಾಲಂಕಾರ, ನಾನಾ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಾಗಲಿವೆ. ಕಿಲ್ಲಾ ಗಲ್ಲಿಯ ಲವಂಗಿಮಠದ ಹತ್ತಿರ ಭವಾನಿ ತರುಣ ಸಂಘ, ವಿಕ್ರಂ ಯುವಕ ಮಂಡಳಿಯಿಂದ ಮತ್ತು ಮಾರವಾಡಿ ಗಲ್ಲಿ, ಸ್ಟೇಶನ ರಸ್ತೆಯಲ್ಲಿ ಭವಾನಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿನಿತ್ಯ ಪಂಚಾಮೃತ, ನೈವೇದ್ಯ, ಘ್ರತನಂದಾದೀಪ. ತೈಲ ನಂದಾದೀಪ ನಾನಾ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts