More

    ಕೋವಿಡ್ ಸೋಂಕಿತರಿಗಾಗಿ 6000 ಹಾಸಿಗೆ ಸಜ್ಜು

    ಹುಬ್ಬಳ್ಳಿ: ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಂಡ ಬಳಿಕವೂ ಕರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿದೆ. ಮುಂಜಾಗ್ರತೆ ಕ್ರಮವಾಗಿ ಧಾರವಾಡ ಜಿಲ್ಲೆಯಲ್ಲಿ 6000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

    ಹುಬ್ಬಳ್ಳಿಯ ಅಶೋಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಹಾಗೂ ಗೋಕುಲದ ದೇಶಪಾಂಡೆ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಸಜ್ಜುಗೊಳಿಸಿರುವ 800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಅನ್ನು ಮಂಗಳವಾರ ಉದ್ಘಾಟಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಕರೊನಾ ಪೀಡಿತರ ಚಿಕಿತ್ಸೆಗೆ ಮುಂದೆ ಬರುತ್ತಿದ್ದಾರೆ. ಡಾ. ಅಶೋಕ ಬಂಗಾರಶೆಟ್ಟರ್ ಅವರು ತಮ್ಮ ಆಥೋಪಿಡಿಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕರೊನಾ ರೋಗಿಗಳ ಚಿಕಿತ್ಸೆಗೆ ನೀಡಿದ್ದಾರೆ. ಡಾ. ಕ್ರಾಂತಿಕಿರಣ ಅವರ ಬಾಲಾಜಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅವರು, ಸೂಕ್ತ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಹ ನಿಯೋಜಿಸಿದ್ದಾರೆ. ಇದೇ ಮಾದರಿಯಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಪ್ರಸ್ತಾಪ ಇಟ್ಟಿವೆ ಎಂದರು.

    ಡಾ. ಗುರುರಾಜ ದೇಶಪಾಂಡೆಯವರ ದೇಶಪಾಂಡೆ ಫೌಂಡೇಶನ್ ಸಹಕಾರದಲ್ಲಿ 800 ಹಾಸಿಗೆಗಳ ಕೇರ್ ಸೆಂಟರ್​ಅನ್ನು ಅತ್ಯಂತ ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ಹಾಸಿಗೆ, ದಿಂಬು, ಹೊದಿಕೆ; ಸಾಬೂನು, ಬ್ರಷ್, ಮಾಸ್ಕ್ ಸೇರಿ ಅಗತ್ಯ ವಸ್ತಗಳನ್ನು ಒಳಗೊಂಡ ಕಿಟ್ ನೀಡಲಾಗುವುದು. ಇಲ್ಲಿ ದಾಖಲಾಗುವವರಿಗಾಗಿ ಕೇರಂ, ಚೆಸ್​ನಂಥ ಆಟದ ಸಾಮಗ್ರಿ, ಓದಲು ಪುಸ್ತಕ ಇಡಲಾಗಿದೆ ಎಂದರು.

    ಕರೊನಾ ವೈರಸ್ ಪತ್ತೆಯಾಗಿರುವ ಆದರೆ, ರೋಗಲಕ್ಷಣ ಇಲ್ಲದವರನ್ನು ಮಾತ್ರ ಇಲ್ಲಿ ದಾಖಲಿಸಲಾಗುವುದು. ದೇಶಪಾಂಡೆ ಫೌಂಡೇಶನ್​ನಿಂದ ಅವರಿಗೆ ಆನ್​ಲೆನ್ ಮೂಲಕ ಕೆಲವು ಕೌಶಲ ತರಬೇತಿ ನೀಡುವ ಯೋಚನೆಯೂ ಇದೆ ಎಂದು ಸಚಿವರು ತಿಳಿಸಿದರು.

    ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಡಿಸಿಪಿ ಕೃಷ್ಣಕಾಂತ, ಎ.ಸಿ., ತಹಸೀಲ್ದಾರ್, ಪ್ರಕಾಶ ನಾಸಿ, ಹುಬ್ಬಳ್ಳಿ ಐಎಂಎ ಅಧ್ಯಕ್ಷ ಡಾ. ಕ್ರಾಂತಿಕಿರಣ, ಡಾ. ಅಶೋಕ ಬಂಗಾರಶೆಟ್ಟರ್, ದೇಶಪಾಂಡೆ ಪ್ರತಿಷ್ಠಾನದ ಸಿಇಒ ವಿವೇಕ ಪವಾರ, ಸಿಒಒ ಪಿ.ಎನ್. ನಾಯಕ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ದೇಶಪಾಂಡೆ ಔದಾರ್ಯ

    ಕೌಶಲಾಭಿವೃದ್ಧಿ ತರಬೇತಿ ಪಡೆಯುವವರ ವಸತಿಗಾಗಿ ಗೋಕುಲದಲ್ಲಿ ನಿರ್ವಿುಸಿರುವ ಬಹುಮಹಡಿ ಕಟ್ಟಡ ಹಾಗೂ 800 ಮಂಚಗಳನ್ನು ದೇಶಪಾಂಡೆ ಫೌಂಡೇಷನ್ ಜಿಲ್ಲಾಡಳಿತಕ್ಕೆ ಸಂಪೂರ್ಣ ಉಚಿತವಾಗಿ ಒದಗಿಸಿದೆ.

    ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರತಿಷ್ಠಾನದ ಸಿಇಒ ವಿವೇಕ ಪವಾರ, ಇದೊಂದು ಸಮಾಜ ಸೇವೆ. ಮೊದಲು ಸಮಾಜ ಹಿತಕ್ಕೆ ಆದ್ಯತೆ. ನಂತರ ತರಬೇತಿಗಳು. ಸಮಾಜದ ಆರೋಗ್ಯಕ್ಕಾಗಿ ಸೇವಾರ್ಥವಾಗಿ ಅವಕಾಶ ಕಲ್ಪಿಸಿದ್ದೇವೆ ಎಂದು ಹೇಳಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts