More

    ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ

    ಹುಬ್ಬಳ್ಳಿ: ನೂತನವಾಗಿ ಆರಂಭವಾಗುವ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಕುರಿತು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಶೀಘ್ರವೇ ಸರ್ಕಾರ ಅನುಷ್ಠಾನಗೊಳ್ಳಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

    ವಿಶ್ವ ಕನ್ನಡ ಬಳಗ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಶಿ ಕ್ರೀಡೆಗಳ 4ನೇ ಸಮ್ಮೇಳನ’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೈಗಾರಿಕೆಗಳಲ್ಲಿ ಅನಿವಾರ್ಯ ಎನಿಸುವ ಹುದ್ದೆಗಳನ್ನು ಹೊರತುಪಡಿಸಿ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ಸ್ಥಳೀಯರನ್ನೇ ಆಯ್ಕೆ ಮಾಡುವ ಕುರಿತು ಉದ್ಯಮಿಗಳಿಗೂ ಮನವರಿಕೆ ಮಾಡಲಾಗುವುದು ಎಂದರು.

    ಇಂಗ್ಲಿಷ್ ಕೇವಲ ವ್ಯವಹಾರದ ಭಾಷೆಯಾಗಿರಲಿ. ಕನ್ನಡ ಬದುಕುವ ಭಾಷೆಯಾಗಲಿ. ಆಧುನಿಕತೆಯ ಭರಾಟೆಯಲ್ಲಿ ಕನ್ನಡವನ್ನು ಹುಡುಕುವಂತಾಗಬಾರದು. ಕನ್ನಡಿಗರೆಲ್ಲ ಹೆಚ್ಚಾಗಿ ಮಾತೃಭಾಷೆ ಬಳಸಬೇಕು ಎಂದರು.

    ಸಮ್ಮೇಳನಾಧ್ಯಕ್ಷೆ ಪಾರ್ವತೆವ್ವ ಹೊಂಗಲ್ ಮಾತನಾಡಿ, ತಾಯಿಯ ಗರ್ಭದಲ್ಲೇ ಮಗುವಿಗೆ ಸಂಸ್ಕಾರ ಕಲಿಸಿದ ನಾಡು ನಮ್ಮದು. ಅಕ್ಕಿ, ರಾಗಿ ಬೀಸುವಾಗ ಪದ ಹಾಡುತ್ತಿದ್ದರು. ಮಗುವನ್ನು ಮಲಗಿಸಲು ಲಾಲಿ ಪದ ಹಾಡುತ್ತಿದ್ದರು. ಮದುವೆ, ಮುಂಜಿ ಕಾರ್ಯಕ್ರಮಗಳಲ್ಲಿ ಜಾನಪದ ಹಾಡಿನ ಮೂಲಕ ಹರಸುತ್ತಿದ್ದರು. ಆದರೆ, ಇಂದು ಡಿಜೆ, ಸದ್ದು, ಗದ್ದಲದಲ್ಲಿ ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ. ನಮ್ಮ ಮೂಲ ಶ್ರೀಮಂತ ಕಲೆಯ, ಸಾಹಿತ್ಯ, ಸಂಸ್ಕೃತಿಯನ್ನು ಗೌರವಿಸೋಣ. ಉಳಿಸಿ ಬೆಳೆಸೋಣ ಎಂದರು.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಕನ್ನಡಪರ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ, ಮುಂದಿನ ಸಮ್ಮೇಳನದವರೆಗೆ ಆ ನಿರ್ಣಯಗಳ ಜಾರಿ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇನ್ನುಮುಂದೆ ನಿರ್ಣಯಗಳ ಜಾರಿ ಕುರಿತು ಚರ್ಚೆ ನಡೆಯಬೇಕು ಎಂದರು.

    ಕವಿವಿ ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ವಿ.ಎಲ್. ಪಾಟೀಲ, ಶಾಂತಿನಿಕೇತನ ಶಾಲೆ ಪ್ರಾಂಶುಪಾಲ ಕ್ಯಾಥರಿನ್ ದಿನೇಶ, ಕಿಮ್್ಸ ಕನ್ನಡ ಸಂಘದ ಅಧ್ಯಕ್ಷ ಡಾ.ಎಸ್.ವೈ. ಮುಲ್ಕಿಪಾಟೀಲ, ಮಲ್ಲಿಕಾರ್ಜುನ ಸಾವುಕಾರ, ಹರ್ಷ ಮಳೇಕರ, ಅಮಿತ ಮಹಾಜನ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts