More

    ಕೆರೆಗಳಲ್ಲಿ ಪ್ರಾಣ ಹಾನಿಯಾಗದಿರಲಿ

    ಧಾರವಾಡ: ಜಿಲ್ಲೆಯಲ್ಲಿ ಅಂದಾಜು 1,246 ಕೆರೆಗಳಿವೆ. ಅತಿಯಾದ ಮಳೆಯಿಂದಾಗಿ ಬಹುತೇಕ ಕೆರೆಗಳು ತುಂಬಿವೆ. ಕೆರೆಗಳಲ್ಲಿ ಈಜುವುದು, ಜಾನುವಾರುಗಳ ಮೈ ತೊಳೆಯುವುದು ಅಪಾಯಕಾರಿ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

    ಜಿಲ್ಲೆಯ ಕೆರೆಗಳ ಸಂರಕ್ಷಣೆ ಕುರಿತು ಸೋಮವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಗ್ರಾ.ಪಂ.ಗಳ 525, ಪಟ್ಟಣ ಪಂಚಾಯಿತಿಯ 19, ಸಣ್ಣ ನೀರಾವರಿ ಇಲಾಖೆಯ 62, ಬೃಹತ್ ನೀರಾವರಿಯ 26, ಮಹಾನಗರ ಪಾಲಿಕೆಯ 34, ಲೋಕೋಪಯೋಗಿ ಇಲಾಖೆಯ 26, ಪಂಚಾಯತ್​ರಾಜ್ ಇಲಾಖೆಯ 3, ಕಂದಾಯ ಇಲಾಖೆಯ 16, ರೈಲ್ವೆ ಇಲಾಖೆಯ 2, ಟಿಎಂಸಿಯ 7, ಅರಣ್ಯ ಇಲಾಖೆಯ 2 ಮತ್ತು ಇತರ 254 ಸೇರಿ 1,246 ಕೆರೆಗಳಿವೆ. ಬಹುತೇಕ ಎಲ್ಲ ಕೆರೆಗಳು ಈಜಲು, ಪ್ರಾಣಿಗಳ ಮೈ ತೊಳೆಯಲು ಅಪಾಯಕಾರಿಯಾಗಿವೆ. ಸಾರ್ವಜನಿಕರು, ಮಕ್ಕಳು ಈಜಲು ನೀರಿಗೆ ಇಳಿಯಬಾರದೆಂದು ತಿಳಿವಳಿಕೆ ನೀಡಬೇಕು ಎಂದರು.

    ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಲ್ಲ ಕೆರೆಗಳ ಹತ್ತಿರ ಆಳ, ಅಗಲದ ಕುರಿತು ಮಾಹಿತಿ ಫಲಕ ಅಳವಡಿಸಬೇಕು. ಈಜು ನಿಷೇಧ, ಸೆಲ್ಪಿಗೆ ಅವಕಾಶವಿಲ್ಲ, ಮಕ್ಕಳನ್ನು ನೀರಿಗೆ ಇಳಿಸಬೇಡಿ ಎಂಬ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.

    ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್. ರುದ್ರಪ್ಪ ಮಾತನಾಡಿ, ಅವಳಿ ನಗರದ ಕೆಲಗೇರಿ, ನವಲೂರ ಕೆರೆಗಳಲ್ಲಿ ಈಜುವುದು, ಬಟ್ಟೆ ತೊಳೆಯುವುದು, ಪ್ರಾಣಿಗಳ ಮೈ ತೊಳೆಯುವುದನ್ನು ಮಾಡುತ್ತಾರೆ. ಅಧಿಕಾರಿಗಳ ಎಚ್ಚರಿಕೆಯನ್ನು ಪರಿಗಣಿಸದೆ ಪ್ರಾಣಾಪಾಯಕ್ಕೆ ಸಿಲುಕುತ್ತಾರೆ. ಒಂದು ವರ್ಷದಲ್ಲಿ ಅವಳಿ ನಗರದ ಕೆರೆಗಳಲ್ಲಿ 10ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಡಿವೈಎಸ್​ಪಿ ರವಿ ನಾಯಕ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದ ವಿವಿಧ ಕೆರೆಗಳಲ್ಲಿ ಆಕಸ್ಮಿಕ, ಆತ್ಮಹತ್ಯೆ, ನೆರೆ ಸೇರಿ ವಿವಿಧ ಕಾರಣಗಳಿಂದ 2019ರಲ್ಲಿ 42 ಜನ ಹಾಗೂ 2020ರ ಈವರೆಗೆ 8 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಅಪರ ಡಿಸಿ ಶಿವಾನಂದ ಕರಾಳೆ ಜಿಲ್ಲೆಯ ಕೆರೆಗಳ ಸ್ಥಿತಿಗತಿ, ಇಲಾಖೆಗಳ ಉಸ್ತುವಾರಿ ಕುರಿತು ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ಮಹಮ್ಮದ ಜುಬೇರ್, ಸಣ್ಣ ನೀರಾವರಿ ಇಲಾಖೆ ಉಪ ನಿರ್ದೇಶಕ ಕೆ.ಜಿ. ಲಟ್ಟಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ವಿ.ಬಿ. ಯಮಕನಮರಡಿ, ಪಾಲಿಕೆ ಜಂಟಿ ಆಯುಕ್ತ ಅಜೀಜ ದೇಸಾಯಿ, ಅಗ್ನಿಶಾಮಕ ಇಲಾಖೆ ಅಧಿಕಾರಿ ವಿನಾಯಕ ಹಟ್ಟೆಕರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    ಜಂತು ನಿವಾರಕ ಮಾತ್ರೆಯಿಂದ ದೇಹಕ್ಕೆ ಪೌಷ್ಟಿಕಾಂಶ

    ಧಾರವಾಡ: ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಕಡ್ಡಾಯ ವಾಗಿ ಜಂತು ನಿವಾರಕ ಮಾತ್ರೆ ನೀಡಬೇಕು. ಇದರಿಂದ ಪಚನ ಶಕ್ತಿ ಹೆಚ್ಚಾಗಿ ದೇಹಕ್ಕೆ ಪೌಷ್ಟಿಕಾಂಶ ದೊರಕುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

    ನಗರದ ಕೆ.ಇ. ಬೋರ್ಡ್ ಸಂಸ್ಥೆಯ ಕರ್ನಾಟಕ ಹೈಸ್ಕೂಲ್​ನಲ್ಲಿ ಜಿಲ್ಲಾಡಳಿತ, ಜಿ.ಪಂ., ಆರೋಗ್ಯ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಬರಿಗಾಲ ನಡಿಗೆ, ಮಣ್ಣಿನಲ್ಲಿ ಆಟ, ಅಸುರಕ್ಷಿತವಾಗಿ ಆಹಾರ, ನೀರು ಸೇವನೆ, ನೈರ್ಮಲ್ಯ ಇಲ್ಲದಿರುವಿಕೆಯಿಂದ ಮಕ್ಕಳಲ್ಲಿ ಜಂತುಹುಳು ಉತ್ಪಾದನೆಯಾಗುತ್ತವೆ. ಇದರಿಂದ ಆಹಾರ ಪಚನವಾಗದೆ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳಲ್ಲಿ ಅಶಕ್ತತೆ, ಬಡಕಲು ದೇಹ, ಕುಬ್ಜತೆ ಕಾಣಿಸಿಕೊಳ್ಳುತ್ತದೆ. ಜಂತುಹುಳು ನಿವಾರಕ ಮಾತ್ರೆ ತಿನ್ನಿಸುವುದರಿಂದ ಸಮಸ್ಯೆ ಪರಿಹರಿಸಬಹುದು ಎಂದರು. ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಯನ್ನು ವರ್ಷಕ್ಕೆರಡು ಬಾರಿ ಉಚಿತವಾಗಿ ನೀಡಲಾಗುತ್ತದೆ. ಪ್ರತಿಯೊಂದು ಮಗುವೂ ಸೇವಿಸುವಂತೆ ಪಾಲಕರು ಹಾಗೂ ಶಿಕ್ಷಕರು ಜಾಗೃತಿ ವಹಿಸಬೇಕು ಎಂದರು. ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಅರುಣ ನಾಡಗೀರ ಅಧ್ಯಕ್ಷತೆ ವಹಿಸಿದ್ದರು. ಡಾ. ಅಪ್ಪಾ ಸಾಹೇಬ ನರಹಟ್ಟಿ, ಡಾ. ಯಶವಂತ ಮದೀನಕರ, ಮೋಹನ ಹಂಚಾಟೆ, ಡಾ. ಎಸ್.ಎಂ. ಹೊನಕೇರಿ, ಡಾ. ಶಶಿಕಲಾ ನಿಂಬಣ್ಣವರ, ಡಾ. ಶಶಿ ಪಾಟೀಲ, ಡಾ. ಸುಜಾತಾ ಹಸವಿಮಠ, ಡಾ. ಶೋಭಾ ಮೂಲಿಮನಿ, ಡಾ. ಕವನ್ ದೇಶಪಾಂಡೆ, ಇತರರಿದ್ದರು. ಬಿಇಒ ಎ.ಎ. ಖಾಜಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts