More

    ಕೆಟ್ಟು ನಿಂತ ಶುದ್ಧ ನೀರಿನ ಘಟಕ; ಮತ್ತೆ ಫ್ಲೋರೈಡ್ ನೀರು ಕುಡಿಯುವ ದುಸ್ಥಿತಿ, ಮನವಿ ಸಲ್ಲಿಸಿದರೂ ಕೇಳೋರಿಲ್ಲ ಗೋಳು

    ಬೂದಿಕೋಟೆ: ಶುದ್ಧ ನೀರಿನ ಘಟಕ ಕೆಟ್ಟು ಹಲವು ತಿಂಗಳಾದರೂ ದುರಸ್ತಿಯತ್ತ ಸಂಬಂಧಪಟ್ಟವರು ಗಮನಹರಿಸದ ಪರಿಣಾಮ ಗ್ರಾಮಸ್ಥರು ಫ್ಲೋರೈಡ್ ನೀರು ಕುಡಿಯಬೇಕಾಗಿದೆ ಇಲ್ಲವೇ, ಕುಡಿಯುವ ನೀರಿಗಾಗಿ ಕಿಲೋಮೀಟರ್​ ಗಟ್ಟಲೇ ಅಲೆಯಬೇಕಾಗಿದೆ!

    ಇದು, ಬಂಗಾರಪೇಟೆ ತಾಲೂಕಿನ ಆಂಧ್ರ, ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಕುಂದರಸನಹಳ್ಳಿ ಹಾಗೂ ಕದರಿನತ್ತ ಗ್ರಾಮಸ್ಥರ ಸಂಕಟ.

    ಗ್ರಾಮೀಣರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಅಳವಡಿಸಿದೆ. ಆದರೆ ಘಟಕಗಳು ಕೆಟ್ಟು ತಿಂಗಳುಗಳೇ ಕಳೆದರೂ ಸಂಬಂಧಪಟ್ಟ ಇಲಾಖೆ ದುರಸ್ತಿ ಮಾಡದೆ ಕಡೆಗಣಿಸಿದೆ. ಕುಂದರಸನಹಳ್ಳಿ ಹಾಗೂ ಕದರಿನತ್ತ ಗ್ರಾಮಗಳಲ್ಲಿರುವ ನೀರಿನ ಘಟಕಗಳು ಕೆಟ್ಟು ಹಲವು ತಿಂಗಳಾಗಿವೆ. ಪಂಚಾಯಿತಿಯಾಗಲಿ, ಗುತ್ತಿಗೆದಾರರಾಗಲಿ ಅವುಗಳ ದುರಸ್ತಿಗೆ ಮುಂದಾಗಿಲ್ಲ. ಗ್ರಾಮಸ್ಥರು ಸರ್ಕಾರವನ್ನು ಶಪಿಸುತ್ತ ಕುಡಿಯುವ ನೀರಿಗಾಗಿ ಕಿಲೋಮೀಟರ್​ಗಟ್ಟಲೆ ಅಲೆಯುತ್ತಲೇ ಇದ್ದಾರೆ.

    ಈ ಎರಡೂ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ​ಅಂಶ ಅಧಿಕವಾಗಿದೆ. ಜನರು ಲವಣಾಂಶ ತುಂಬಿರುವ ನೀರು ಕುಡಿದು, ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕದರಿನತ್ತ ಗ್ರಾಮದ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದ್ದು, ಲಭ್ಯವಿರುವ ನೀರು ಕುಡಿದು ಜನರು ನಾನಾ ಸಮಸ್ಯೆಗಳಿಗೆ ತುತ್ತಾಗಿದ್ದರು. ಯುವಕರು ಮುದುಕರಂತೆ ಕಾಣುತ್ತಿದ್ದರು. ಹಲ್ಲುಗಳು, ಮೂಳೆಗಳು ಸವೆದು ನರಕಯಾತನೆ ಅನುಭವಿಸುತ್ತಿದ್ದರು. ಕೆಲವರು ಗ್ರಾಮವನ್ನೇ ತೊರೆದಿದ್ದರು. ಇಂತಹ ಸಮಯದಲ್ಲಿ ಸರ್ಕಾರ ಕೆನರಾ ಬ್ಯಾಂಕ್​ ಸಹಭಾಗಿತ್ವದಲ್ಲಿ ಶುದ್ಧ ಕುಡಿಯುವ ನೀರಿನ ಟಕ ತೆರೆಯಿತು. ಕೆಲದಿನ ಸರಿಹೋದ ಸಮಸ್ಯೆ ಯಂತ್ರ ಕೆಟ್ಟು ಹೋದ ಮೇಲೆ ಮರುಕಳಿಸಿದೆ.

    ಕುಂದರಸನಹಳ್ಳಿಯ ಸ್ಥಿತಿಯೂ ಇದೇ ರೀತಿ ಇದ್ದು, ಎರಡೂ ಗ್ರಾಮದವರು ಶುದ್ಧ ನೀರಿಗಾಗಿ ನಿತ್ಯ ದೂರದ ಗ್ರಾಮಗಳತ್ತ ಅಲೆಯುವಂತಾಗಿದೆ. ಯಂತ್ರಗಳು ಕೆಟ್ಟಿರುವ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ದೂರು ನೀಡಿದರೆ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಜಿಪಂ ಇಲಾಖೆಯ ಎಇಇ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಶುದ್ಧ ನೀರಿನ ಘಟಕ ಕೆಟ್ಟಿರುವ ಕಾರಣ ಮತ್ತೆ ಫ್ಲೋರೈಡ್ ನಿಂದ ಕೂಡಿರುವ ನೀರನ್ನು ಕುಡಿಯುವ ಅನಿವಾರ್ಯತೆ ಎದುರಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಕೆಟ್ಟಿರುವ ಯಂತ್ರಗಳನ್ನು ದುರಸ್ತಿಗೊಳಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಹಲವು ತಿಂಗಳ ಹಿಂದೆ ಶುದ್ಧ ನೀರಿನ ಘಟಕ ಕೆಟ್ಟು ನಿಂತಿದ್ದು, ಸರಿಪಡಿಸುವಂತೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದೆ, ಗ್ರಾಮಸ್ಥರು ಪ್ಲೋರೈಡ್​ ನೀರನ್ನೇ ಕುಡಿಯುವ ಅನಿವಾರ್ಯತೆ ಎದುರಾಗಿದೆ. ಒಂದೆರಡು ದಿನಗಳಲ್ಲಿ ಅಧಿಕಾರಿಗಳು ಘಟಕ ಸರಿಪಡಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
    | ಶ್ರೀರಾಮ್​, ಗ್ರಾಮಸ್ಥ ಕದಿರಿನತ್ತ

    ಶುದ್ಧ ನೀರಿನ ಘಟಕಗಳನ್ನು ಗುತ್ತಿಗೆದಾರರು ಇನ್ನೂ ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ. ಘಟಕಗಳನ್ನು ಸರಿಪಡಿಸಲು ಲಕ್ಷಾಂತರ ರೂ.ಗಳು ರ್ಖಚಾಗಲಿದ್ದು, ಸರಿಪಡಿಸಲು ಅನುದಾನವಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶ್ರೀದಲ್ಲೇ ಘಟಕ ಸರಿಪಡಿಸಲಾಗುತ್ತದೆ.
    | ಮಂಜುಳಾ ಮಹದೇವ್​, ಗ್ರಾಪಂ ಅಧ್ಯಕ್ಷೆ, ದೋಣಿಮಡಗು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts