More

    ಕೃಷಿ ಕಾಯ್ದೆಗಳ ವಾಪಸಾತಿಗೆ ಒತ್ತಾಯಿಸಿ ಬೆಳಗಾವಿ ಚಲೋ

    ದಾವಣಗೆರೆ: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.19ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದೆ.
    ಕಾಯ್ದೆಗಳನ್ನು ಹಿಂಪಡೆಯುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಕೂಡಲೆ ಇದು ಕಾರ್ಯರೂಪಕ್ಕೆ ಬರಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್ ಇತರೆ ಉದ್ದೇಶದಡಿ ರೈತರ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬಾರದು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಸ್ತಿತ್ವ ತೆಗೆದುಹಾಕಿ ಕೃಷಿ ಇಲಾಖೆಯಲ್ಲಿ ಸೇರಿಸುವ ಸರ್ಕಾರದ ನಿಲುವು ಹಿಂಪಡೆಯಬೇಕು.
    ಕುಲಾಂತರಿ ಸಾಸಿವೆ ಬಿತ್ತನೆಗೆ ಕೇಂದ್ರ ಸರ್ಕಾರ ನೀಡಿದ ಅನುಮತಿ ಹಿಂಪಡೆಯಬೇಕು. ರೈತರ ಸಾಲ ಮನ್ನಾ ಮಾಡುವ ಜತೆಗೆ ಬಡ್ಡಿರಹಿತ ಸಾಲ ವಿತರಿಸಬೇಕು. ಕಬ್ಬಿಗೆ ಎಸ್‌ಎಪಿ ಬೆಲೆ ನೀಡಬೇಕು. ಹಾಲಿನ ದರ ಪರಿಷ್ಕರಣೆ ಮಾಡಿ ಯೋಗ್ಯ ಬೆಲೆ ನೀಡಬೇಕು. ಬೆಳೆ ನಷ್ಟಕ್ಕೆ ಸೂಕ್ತ ವಿಮೆ ನೀಡಬೇಕು ಮತ್ತು ಈ ಬಗ್ಗೆ ಶಾಸನಬದ್ಧ ನೀತಿ ರೂಪಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
    ಭೂತಾನ್ ರಾಷ್ಟ್ರದಿಂದ ಭಾರತಕ್ಕೆ ಅಡಕೆ ಆಮದು ಮಾಡಿಕೊಳ್ಳುವುದನ್ನು ಸರ್ಕಾರ ಕೂಡಲೇ ತಡೆಯಬೇಕು. ಇಲ್ಲವಾದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶತಕೋಟಿ ಬಸವರಾಜ್, ನಲ್ಕುದುರೆ ಚನ್ನಬಸಪ್ಪ, ಗಂಗನಕಟ್ಟೆ ರೇವಣ್ಣ, ಲಕ್ಷ್ಮಣ್ ಗಿರಿಯಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts