More

    ಕೃಷಿಕನ ಬಾಳಲ್ಲಿ ಕವಿದ ಕಾರ್ಮೋಡ!

    ಹುಬ್ಬಳ್ಳಿ: ಸತತ ನಾಲ್ಕು ದಿನಗಳವರೆಗೆ ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಸುರಿದ ಅಕಾಲಿಕ ಮಳೆಯು ಹೊಲದಲ್ಲಿದ್ದ ಬೆಳೆಗಳಿಗೆ ಮಾತ್ರ ಹಾನಿ ಮಾಡಿಲ್ಲ. ಹೊಲದಿಂದ ಕೊಯ್ಲು ಮಾಡಿಕೊಂಡು ಬಂದು ಒಕ್ಕಣೆ ಮಾಡಲು ತೆನೆ ಸಮೇತ ಕಣದಲ್ಲಿಟ್ಟಿದ್ದ ಧಾನ್ಯಕ್ಕೂ ಕಂಟಕ ತಂದಿದೆ.

    ಮೋಡ ಸರಿದು ಸೂರ್ಯ ಕಂಡರೆ ಸಾಕು ಬೆಳೆ ಒಣಗಿಸಲು ರೈತರು ಹರಸಾಹಸ ಪಡುತ್ತಿದ್ದರು. ಹಿಂಗಾರು ಹಂಗಾಮಿನಲ್ಲಿ ಮುಕ್ಕಟ್ಟು ಬಿತ್ತನೆ ಯಾಗಿದ್ದ ಹೊಲಗಳಲ್ಲಿ ಈಗಾಗಲೇ ಕೊಯ್ಲು ಮಾಡಿದ ಗೋಧಿ ಹುಲ್ಲು, ಕಡಲೆ ಗಿಡಗಳು, ಜೋಳದ ತೆನೆಗಳನ್ನು ತಂದು ಕಣದಲ್ಲಿ ಸಂಗ್ರಹಿಸಿಟ್ಟಿದ್ದರು. ಅಷ್ಟರಲ್ಲಿ ವಕ್ಕರಿಸಿದ ಅಕಾಲಿಕ ಮಳೆ ನೆಮ್ಮದಿ ಕದಡಿದೆ.

    ಮಳೆ ಬರುತ್ತಲೇ ತಾಡಪತ್ರಿ, ಪ್ಲಾಸ್ಟಿಕ್ ಹೊದಿಕೆ ಇತ್ಯಾದಿಗಳಿಂದ ಫಸಲು ಮುಚ್ಚಲಾಗಿತ್ತು. ಒಂದು ಅಥವಾ ಎರಡು ದಿನವಾದರೆ ಫಸಲಿಗೆ ಏನೂ ಆಗುವುದಿಲ್ಲ. ಆದರೆ, ಸತತ ನಾಲ್ಕು ದಿನ ಮಳೆ ಸುರಿದಿದ್ದರಿಂದ ಮುಚ್ಚಿದ ತಾಡಪತ್ರಿಯನ್ನು ಕೆಲವೆಡೆ ತೆಗೆಯಲು ಆಗಲಿಲ್ಲ. ಇದರಿಂದ ಅನೇಕ ಕಡೆಗಳಲ್ಲಿ ಫಸಲು ಹಾಳಾಗಿದೆ. ಕೆಲವೆಡೆ ಗೋಧಿ ಹುಲ್ಲು ಕಪ್ಪಾಗಿ ಕಾಳು ಮುಗ್ಗಸು ಬರುವಂತಾಗಿವೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

    ಕಣದಲ್ಲಿಟ್ಟ ಗೋಧಿ ಹುಲ್ಲು, ಜೋಳದ ತೆನೆಗಳಿಗೆ ಹೆಚ್ಚು ದಿನ ತಾಡಪತ್ರಿ ಮುಚ್ಚಿದ್ದರಿಂದ ಅವು ಕಪ್ಪಾಗಿವೆ. ಬಣವೆ ಸುತ್ತ ಮಳೆ ಹನಿ ಬಡಿದು ಒಂದಿಷ್ಟು ನಷ್ಟ ಆಗಿದೆ. ಏನೇ ಆದರೂ ಕೃಷಿಕ ಹಾನಿ ಅನುಭವಿಸುವುದು ತಪ್ಪುವುದಿಲ್ಲ. ಇದನ್ನೆಲ್ಲ ಹೇಳಲು ಹೋದರೆ ಕೃಷಿ ಇಲಾಖೆಯವರು ಇದು ಪರಿಹಾರದ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ ಎಂದು ಬೇಸರದಿಂದ ಹೇಳುತ್ತಾರೆ ರೈತ ವಿರೂಪಾಕ್ಷಪ್ಪ ಸೋಗಿ.

    ಬೆಳೆ ರಕ್ಷಿಸಿಕೊಳ್ಳಲು ರೈತರಿಗೆ ಸಲಹೆ: ಹಿಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ತಡವಾಗಿ ಬಿತ್ತನೆಯಾದ ಫಸಲು ಕೈಗೆ ಬರಲು ಇನ್ನೂ ಕೆಲ ದಿನಗಳು ಬೇಕಾಗುತ್ತದೆ. ಆದರೆ, ಅಕಾಲಿಕ ಮಳೆಯಿಂದ ಅವುಗಳಿಗೆ ರೋಗ ತಗಲುವ ಸಾಧ್ಯತೆ ಇದ್ದು, ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೆಲ ಸಲಹೆಗಳನ್ನು ನೀಡಿದ್ದಾರೆ. ಅದರಲ್ಲಿ ಇದೀಗ ಕೊಯ್ಲು ಮಾಡಿದ ಬೆಳೆ ರಕ್ಷಣೆ ಬಗ್ಗೆಯೂ ಸಲಹೆಗಳಿವೆ.

    =ಹೊಲದಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ ಸರಾಗ ಹರಿದು ಹೋಗುವ ಹಾಗೆ ನೋಡಿಕೊಳ್ಳಬೇಕು. ಕಟಾವಾದ ಬೆಳೆಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಮಳೆ ನೀರು ತಾಗದಂತೆ ಹೊದಿಕೆ ಹಾಕಬೇಕು. ಮಸಾರಿ ಜಮೀನುಗಳಲ್ಲಿ ಸೊರಗು ರೋಗ (ಬುಡಕೊಳೆ) ಬರುವ ಸಾಧ್ಯತೆ ಇದ್ದು, ಕಾರ್ಬನ್​ಡೈಜಿಂ ದ್ರಾವಣವನ್ನು ಬೆಳೆಯ ಬೇರುಗಳಿಗೆ ತಾಗುವಂತೆ ಸುರಿಯಬೇಕು.

    =ತಡವಾಗಿ ಬಿತ್ತನೆಯಾದ ಕಡಲೆಗೆ ಕಾಯಿ ಕೊರಕದ ಬಾಧೆ ಹೆಚ್ಚು. ಹತೋಟಿಗೆ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ 5 ಎಸ್​ಜಿ ಅಥವಾ 0.3 ಮಿ.ಲೀ. ಇಂಡಾಕ್ಸಾಕಾರ್ಬ್ 14.5 ಎಸ್​ಸಿ ಅಥವಾ 1 ಗ್ರಾಂ ಅಸಿಫೇಟ್ 75 ಎಸ್​ಪಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

    =ಜೋಳದ ತೆನೆ ಮಾಗುವ ಹಂತದಲ್ಲಿದ್ದರೆ ಕಾಡಿಗೆ ರೋಗ ಬರುತ್ತದೆ. ಆಗ ಬಾಧೆಗೆ ಒಳಗಾದ ತೆನೆ ಕಿತ್ತು ಸುಟ್ಟು ಹಾಕಬೇಕು. ತೆನೆ ತಿಗಣೆಯ ಹತೋಟಿಗೆ ಜೋಳ ಹಾಲುಗಾಳು ಇರುವಾಗ ಎಕರೆಗೆ 8 ಕಿ.ಗ್ರಾಂ ಶೇ. 5ರ ಮೆಲಾಥಿಯನ್ ಪುಡಿ ಧೂಳೀಕರಿಸಬೇಕು.

    =ಹೆಸರಿಗೆ ಬೂದಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಹತೋಟಿಗೆ 1.0 ಮಿ.ಲೀ. ಹೆಕ್ಸಾಕೋನಾಜೋಲ್ 5 ಇಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

    = ಗೋಧಿಗೆ ಎಲೆ ತುಕ್ಕು ರೋಗ ಕಂಡು ಬಂದರೆ 1 ಮಿ.ಲೀ. ಪ್ರೊಪಿಕೊನ್​ಜೋಲ್ 25 ಇಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

    = ಮಾವು ಹೂವು ಬಿಡುವ ಹಾಗೂ ಕಾಯಿಯಾಗುವ ಸಮಯವಾದ್ದರಿಂದ ಬೂದಿ ರೋಗ, ಜಿಗಿ ಹುಳುವಿನ ಬಾಧೆ ಹೆಚ್ಚು. ಹತೋಟಿಗೆ 1 ಗ್ರಾಂ ಕಾರ್ಬನ್​ಡೈಜಿಮ್ 50 ಡಬ್ಲುಪಿ ಅಥವಾ 1 ಮಿ.ಲೀ. ಹೆಕ್ಸಾಕೋನೋಜೋಲ್ 5 ಇಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಜಿಗಿ ಹುಳು ಹತೋಟಿಗೆ 0.25 ಮಿ.ಲೀ. ಇಮಿಡಾಕ್ಲೊಪ್ರಿಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts